ಇಂದಿರಾ ನಂತರ ನಿರ್ಮಲಾ: ಬಜೆಟ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

By Web Desk  |  First Published Jul 5, 2019, 9:35 AM IST

ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸುತ್ತಿರುವ 2 ನೇ ಮಹಿಳಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ | ಬಜೆಟ್ ಮಂಡನೆ ವೇಳೆ ನರ್ವಸ್ ಆಗಿದ್ದ ಇಂದಿರಾ! 


ಇಂದು ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೆ ನಮ್ಮ ದೇಶದಲ್ಲಿ ಇಂದಿರಾ ಗಾಂಧಿ ಒಬ್ಬರೇ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ಮಹಿಳೆ. ಆ ಬಜೆಟ್ ಹೇಗಿತ್ತು ಎಂಬ ಕಿರು ವಿವರ ಇಲ್ಲಿದೆ.

ಇಂದಿರಾ ಬಜೆಟ್ ಭಾಷಣದಲ್ಲಿ ಏನು ಹೇಳಿದ್ದರು?

Tap to resize

Latest Videos

ಇಂದಿರಾ ಗಾಂಧಿ ತಮ್ಮ ಬಜೆಟ್ ಭಾಷಣದಲ್ಲಿ ‘ಉತ್ಪಾದನೆಯಲ್ಲಿ ಹೆಚ್ಚಳವಾಗದೆ ಮತ್ತು ದೇಶದ ಸಂಪನ್ಮೂಲದಲ್ಲಿ ವೃದ್ಧಿಯಾಗದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿರತೆ ಅಸಾಧ್ಯ. ಹಾಗೆಯೇ ಸಮಾಜದ ಕಟ್ಟಕಡೆಯ ದುರ್ಬಲ ಸಮುದಾಯಗಳ ಕಲ್ಯಾಣವನ್ನು ಬಯಸದೆ ಆ ಬೆಳವಣಿಗೆ ಮತ್ತು ಸಂಪನ್ಮೂಲದ ವೃದ್ಧಿಯಾದಲ್ಲಿ ಅಂತಹ ಅಭಿವೃದ್ಧಿ ವ್ಯರ್ಥ. ಆದ್ದರಿಂದ ಬಡವರ ಕಾಳಜಿಯೊಂದಿಗೆ  ಮನ್ವಯತೆ ಕಾಯ್ದುಕೊಂಡು ನೀತಿಗಳನ್ನು ರೂಪಿಸುವುದು ಅನಿವಾರ್ಯ’ ಎಂದು ಹೇಳಿದ್ದರು.

‘ನನ್ನ ಬಜೆಟ್ ಸಾಮಾಜಿಕ ಕಲ್ಯಾಣ ಮತ್ತು ಭವಿಷ್ಯದ ಬೆಳವಣಿಗೆಯ ಹಿತದೃಷ್ಟಿಯಿಂದ ಹಲವು ವಿಶೇಷ ಯೋಜನೆಗಳಿಗೆ ಆದ್ಯತೆ ನೀಡಿದೆ. ಆದಾಯ ಮತ್ತು ಸಂಪತ್ತಿನ ಸಮಾನತೆ ಸಾಧಿಸಲು ಆಧುನಿಕ ಸಮಾಜಕ್ಕಿರುವ ಪ್ರಮುಖ ಸಾಧನ ತೆರಿಗೆ ಪಾವತಿ. ಹಾಗಾಗಿ ಪ್ರತ್ಯಕ್ಷ ತೆರಿಗೆ ಬಗ್ಗೆ ಈ ಬಾರಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಸಂಪತ್ತು ಮತ್ತು ಉಡುಗೊರೆಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ’ ಎಂದೂ ತಿಳಿಸಿದ್ದರು. 

ಇಂದಿರಾ ಬಜೆಟ್‌ನ ಪ್ರಮುಖ ಅಂಶಗಳು

- ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ, ಆಸ್ತಿ ತೆರಿಗೆ ಹೆಚ್ಚಳ ಮತ್ತು ಆಮದು ಸುಂಕ ಹೆಚ್ಚಳ

- 254 ಕೋಟಿ ಬಜೆಟ್ ಕೊರತೆ ಉಂಟಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ 290 ಕೋಟಿರು. ಕೊರತೆಯಾಗಿತ್ತು.

- 40,000 ಮೇಲ್ಪಟ್ಟು ಆದಾಯವಿರುವವರಿಗೆ ವೈಯಕ್ತಿಕ ಆದಾಯ ತೆರಿಗೆ ಹೆಚ್ಚಳ. ಆದಾಯ ತೆರಿಗೆ ವಿನಾಯ್ತಿ ಮಿತಿ 10,000 ರು.ದಿಂದ 5000 ಕ್ಕೆ ಇಳಿಕೆ. ಟೀವಿ ಸೆಟ್ ಗಳಿಗೆ ವಿಧಿಸಲಾಗಿತ್ತಿದ್ದ ಸುಂಕ ಹೆಚ್ಚಳ.

- ಪ್ರತಿ ತಿಂಗಳ ವೇತನದ ಡಿಡಕ್ಷನ್ ತಿಂಗಳಿಗೆ 5 ರು.ನಿಂದ 250 ರು.ಗೆ ಪರಿಷ್ಕರಣೆ.

- ಬೈಸಿಕಲ್ ಅಥವಾ ಸಾರ್ವಜನಿಕ ವಾಹನಗಳಲ್ಲಿ ಉದ್ಯೋಗಕ್ಕೆ ತೆರಳುವ ಉದ್ಯೋಗಸ್ಥರಿಗೆ 20 ರು. ಮಾತ್ರ ವೇತನ ಕಡಿತ ಮಾಡುವ ಯೋಜನೆ ಜಾರಿ. ಸಿಗರೇಟ್‌ಗಳ ಮೇಲಿನ ಸುಂಕ ಹೆಚ್ಚಳ. 

ಬಜೆಟ್ ಮಂಡನೆ ವೇಳೆ ನರ್ವಸ್ ಆಗಿದ್ದ ಇಂದಿರಾ!

ತಮ್ಮ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ದೇಶದ ಏಕೈಕ ‘ಗಂಡು ಪ್ರಧಾನಿ’ ಎಂದು ಕೆಲವರಿಂದ ಹೊಗಳಿಸಿಕೊಂಡಿದ್ದ ಇಂದಿರಾ ಗಾಂಧಿ ಕೂಡ ಬಜೆಟ್ ಮಂಡಿಸುವಾಗ ಸ್ವಲ್ಪ ಒತ್ತಡಕ್ಕೆ ಒಳಗಾದವರಂತೆ ಕಾಣುತ್ತಿದ್ದರು. ಅವರ ಕೈಗಳು ನಡುಗುತ್ತಿದ್ದವು. ಅವರು ಮಂಡಿಸಿರುವ ಬಜೆಟ್ ಸಮಾಜವಾದಿ ಬಜೆಟ್ ಎಂತಲೇ ಹೆಸರಾಗಿದೆ.

ಅದರಲ್ಲಿ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಸಾಮಾಜಿಕ ಕಲ್ಯಾಣ ಕಾರ‌್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರದ ಸುಧಾರಣೆಯು ದೀರ್ಘ ಅವಧಿಯಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬ ಉದಾತ್ತ ದೃಷ್ಟಿಕೋನ ಹೊಂದಲಾಗಿತ್ತು. ಹಾಗೆಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಪಿಂಚಣಿ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. 

ಗರೀಬಿ ಹಟಾವೋ ಕಾರಣದಿಂದಾಗಿ ಕೊರತೆ ಬಜೆಟ್ ಆ ಸಮಯದಲ್ಲಿ ‘ಗರೀಬಿ ಹಟಾವೋ’ ಘೋಷಣೆ ಮೂಲಕ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದಿದ್ದರು. ಹಾಗಾಗಿ ತಮ್ಮ ಬಜೆಟ್‌ನಲ್ಲಿ ಅನೇಕ ಬಡತನ ನಿವಾರಣೆ ಕಾರ‌್ಯಕ್ರಮಗಳನ್ನು ಜಾರಿ ಮಾಡಿದ್ದರು. ಪರಿಣಾಮ ಅಲ್ಲಿಯವರೆಗೆ ಉಳಿತಾಯ ಬಜೆಟ್ ಕಾಣುತ್ತಿದ್ದ ದೇಶ ಇಂದಿರಾ ಅವಧಿಯಲ್ಲಿ 290 ಕೋಟಿ ರು. ಕೊರತೆ ಬಜೆಟ್ ಕಾಣುವಂತಾಯಿತು. 

ಬಜೆಟ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು 

ಮೊದಲ ಬಜೆಟ್ ಮಂಡಿಸಿದ್ದು ಟೋಪಿ ವ್ಯಾಪಾರಿ!

ಭಾರತದ ಮೊದಲ ಬಜೆಟ್ಟನ್ನು 1829 ರ ಫೆಬ್ರವರಿ ೧೮ರಂದು ಜೇಮ್ಸ್ ವಿಲ್ಸನ್ ಮಂಡಿಸಿದ್ದರು. ಅವರು ಭಾರತದಲ್ಲಿರುವ ಬ್ರಿಟಿಷ್ ವೈಸರಾಯ್‌ಗೆ ಸಲಹೆ ನೀಡುತ್ತಿದ್ದ ಹಣಕಾಸು ಮಂಡಳಿಯ ಸದಸ್ಯರಾಗಿದ್ದರು. ವಾಸ್ತವವಾಗಿ ಅವರು ವೃತ್ತಿಯಲ್ಲಿ ಒಬ್ಬ ವ್ಯಾಪಾರಿಯಾಗಿದ್ದರು. ಟೋಪಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಹಣಕಾಸು ವ್ಯವಹಾರಗಳ ಬಗ್ಗೆ ಅವರಿಗಿದ್ದ ಪಾಂಡಿತ್ಯ ಮತ್ತು ಜ್ಞಾನವನ್ನು ಮನಗಂಡು ಹಣಕಾಸು ಸದಸ್ಯರನ್ನಾಗಿ ನೇಮಿಸಲಾಗಿತ್ತು. 

ಸ್ವತಂತ್ರ ದೇಶದ ಮೊದಲ ಬಜೆಟ್ ಮಧ್ಯಂತರ ಬಜೆಟ್

ಸ್ವತಂತ್ರ ಭಾರತದ ಮೊಟ್ಟಮೊದಲ ಕೇಂದ್ರ ಬಜೆಟ್ ಮಂಡನೆಯಾಗಿದ್ದು ನವೆಂಬರ್ 26, 1947ರಂದು. ಅದು ಪೂರ್ಣ ಬಜೆಟ್ ಅಲ್ಲ. ಮಧ್ಯಂತರ ಬಜೆಟ್ ಆಗಿದ್ದು, ಮೊದಲ ಹಣಕಾಸು ಸಚಿವ ಆರ್ ಕೆ ಷಣ್ಮುಗಂ ಶೆಟ್ಟಿ ಮಂಡಿಸಿದ್ದರು. ಅದಕ್ಕೂ ಮುನ್ನ ಷಣ್ಮುಗಂ ಕೊಚ್ಚಿಯ ದಿವಾನರಾಗಿ ಕಾರ‌್ಯನಿರ್ವಹಿಸಿದ್ದರು.

ಬಜೆಟ್ ಮಂಡಿಸಿದ ಪ್ರಧಾನಿಗಳು ಯಾರ‌್ಯಾರು?

ಸಾಮಾನ್ಯವಾಗಿ ಕೇಂದ್ರ ಹಣಕಾಸು ಸಚಿವರು ಆಯವ್ಯಯ ಮಂಡಿಸುತ್ತಾರೆ. ಆದರೆ, ಕೆಲ ಪ್ರಧಾನಿಗಳು ವಿತ್ತ ಖಾತೆಯನ್ನು ತಾವೇ ಹೊಂದಿದ್ದರಿಂದ ಬಜೆಟ್ ಕೂಡ ಮಂಡಿಸಿದ್ದರು. ಜವಾಹರಲಾಲ್ ನೆಹರು ಬಜೆಟ್ ಮಂಡಿಸಿದ ಮೊದಲ ಪ್ರಧಾನಿ.

1958-59ರಲ್ಲಿ ಅವರು ಬಜೆಟ್ ಮಂಡಿಸಿದ್ದರು. ಅನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದುಕೊಂಡು ಬಜೆಟ್ ಮಂಡಿಸಿದ್ದರು. ಈ ಮೂರೂ ಪ್ರಧಾನಿಗಳು ಹಣಕಾಸು ಇಲಾಖೆ ಹೊಂದಿದ್ದರು. ಬಜೆಟ್ ಮಂಡಿಸಿದ ಪ್ರಧಾನಿಗಳೆಲ್ಲರೂ ಒಂದೇ ಕುಟುಂಬದವರು ಎಂಬುದು ವಿಶೇಷ.

ಬ್ಲಾಕ್ ಬಜೆಟ್, ಮಿಲೇನಿಯಂ ಬಜೆಟ್, ಡ್ರೀಮ್ ಬಜೆಟ್

1973-74 ರ ಬಜೆಟ್ಟನ್ನು ‘ಬ್ಲಾಕ್ ಬಜೆಟ್’ ಎಂದು ಕರೆಯಲಾಗುತ್ತದೆ. ಈ ಬಜೆಟ್ಟನ್ನು ಯಶವಂತರಾವ್ ಚೌಹಾಣ್ ಮಂಡಿಸಿದ್ದರು. ಆಗ 550 ಕೋಟಿ ರು. ಕೊರತೆ ಉಂಟಾಗಿತ್ತು. ಇನ್ನು 2000 ರಲ್ಲಿ ಹಣಕಾಸು ಸಚಿವ ಯಶವಂತ ಸಿನ್ಹಾ ಮಂಡಿಸಿದ್ದ ಬಜೆಟ್ಟನ್ನು ಮಿಲೇನಿಯಂ ಬಜೆಟ್ ಎನ್ನಲಾಗುತ್ತದೆ. ಭಾರತ ವನ್ನು ಪ್ರಮುಖ ಸಾಫ್ಟ್‌ವೇರ್ ಹಬ್ ಆಗಿಸುವ ಉದ್ದೇಶದಿಂದ ಆ ಬಜೆಟ್ ಮಂಡಿಸಲಾಗಿತ್ತು. 1997-98 ರ ಬಜೆಟ್ಟನ್ನು ‘ಡ್ರೀಮ್ ಬಜೆಟ್’ ಎನ್ನಲಾಗುತ್ತದೆ. ದೇವೇಗೌಡ ಪ್ರಧಾನಿಯಾಗಿದ್ದಾಗ ಪಿ.ಚಿದಂಬರಂ ಇದನ್ನು ಮಂಡಿಸಿ ದ್ದರು. ಇದರಲ್ಲಿ ಆರ್ಥಿಕ ಸುಧಾರಣೆಗೆ ಕ್ರಾಂತಿಕಾರಿ ಕ್ರಮ ಕೈಗೊಳ್ಳಲಾಗಿತ್ತು.

ಬಜೆಟ್‌ನಲ್ಲಿ ಮೊರಾರ್ಜಿ ದೇಸಾಯಿ ಬರ್ತ್ ಡೇ

ಕೇಂದ್ರ ಬಜೆಟ್ ಮಂಡನೆ ದಿನದಂದು ಹುಟ್ಟುಹಬ್ಬ ಆಚರಿಸಿಕೊಂಡ ಏಕೈಕ ಪ್ರಧಾನಿ ಮೊರಾರ್ಜಿ ದೇಸಾಯಿ. 1924 ಮತ್ತು 1928 ರಲ್ಲಿ ಇವರು ತಮ್ಮ ಹುಟ್ಟಿದ ದಿನದಂದೇ ಬಜೆಟ್ ಮಂಡಿಸಿದ್ದಾರೆ. ಮೊರಾರ್ಜಿ ಹುಟ್ಟಿದ್ದು ಫೆಬ್ರವರಿ ೨೯ರಂದು. ಆ ಎರಡೂ ವರ್ಷವೂ ಅಧಿಕ ವರ್ಷ ಆಗಿದ್ದವು. ಆಗ ಫೆಬ್ರವರಿ ತಿಂಗಳ ಕೊನೆಯ ದಿನ ಬಜೆಟ್ ಮಂಡನೆಯ ಸಂಪ್ರದಾಯ ಇತ್ತು. 

ಹಲ್ವಾ ಹಂಚೋದು ಏಕೆ ಗೊತ್ತಾ?

ಬಜೆಟ್ ಮಂಡನೆಗೆ ಹತ್ತು ಅಥವಾ ಹನ್ನೆರಡು ದಿನ ಮುಂಚಿತವಾಗಿ ಬಜೆಟ್‌ನ ಪೂರ್ವಭಾವಿ ತಯಾರಿ ಪೂರ್ಣಗೊಂಡ ನಂತರ ಹಣಕಾಸು ಇಲಾಖೆಯ ಅಧಿಕಾರಿಗಳು ಬಜೆಟ್‌ನ ಅಂತಿಮ ಪ್ರತಿ ತಯಾರಿಸುವ ಕಾರ್ಯ ಆರಂಭಿಸುತ್ತಾರೆ. ತಿಂಗಳುಗಳ ಕಾಲ ಹಣಕಾಸು ಇಲಾಖೆಯ ಅಧಿಕಾರಿಗಳು ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಗುಪ್ತವಾಗಿ ಬಜೆಟ್ ಸಿದ್ಧಪಡಿಸುತ್ತಿರುತ್ತಾರೆ.

ಬಜೆಟ್‌ನ ಅಂತಿಮ ಪ್ರತಿಯ ತಯಾರಿ ಆರಂಭವಾಗಿ, ನಂತರ ಮುದ್ರಣವಾಗಿ, ಕೊನೆಗೆ ಬಜೆಟ್ ಮಂಡನೆಯವರೆಗೂ ಅವರು ಮನೆಗೆ ಹೋಗುವಂತಿಲ್ಲ. ಬಜೆಟ್‌ನಲ್ಲಿರುವ ಅಂಶಗಳು ಸೋರಿಕೆಯಾಗಬಾರದು ಎಂದು ಅವರನ್ನು ಅಲ್ಲೇ ಉಳಿಸಿಕೊಳ್ಳಲಾಗುತ್ತದೆ. ಹೀಗಾಗಿ ವಿತ್ತ ಮಂತ್ರಿಗಳು ನಾರ್ತ್ ಬ್ಲಾಕ್‌ನಲ್ಲಿ ಸಿಹಿ ತಯಾರಿಸಿ ಅವರೆಲ್ಲರಿಗೂ ಹಂಚುವ ಮೂಲಕ ಖುಷಿಪಡಿಸುವ ಸಂಪ್ರದಾಯವಿದೆ.

ಮೊದಲು ಸಂಜೆ 5 ಗಂಟೆಗೆ ಬಜೆಟ್ ಮಂಡಿಸುತ್ತಿದ್ದರು

1999 ರವರೆಗೆ ಫೆಬ್ರವರಿ ಕೊನೆಯ ದಿನ ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಆರಂಭವಾಗುತ್ತಿತ್ತು. ಇದು ಬ್ರಿಟಿಷ್ ಸಂಪ್ರದಾಯ. ಈ ವೇಳೆ ಬ್ರಿಟನ್‌ನಲ್ಲಿ ಮಧ್ಯಾಹ್ನ ಆಗಿರುತ್ತಿತ್ತು. ಆದರೆ 1999 ರ ಎನ್‌ಡಿಎ ಸರ್ಕಾರದ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಈ ಸಂಪ್ರದಾಯ ಬದಲಿಸಿ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದರು. ಹಾಗೆಯೇ ಫೆಬ್ರವರಿ ಕೊನೆಯ ದಿನವನ್ನು
ತಪ್ಪಿಸಿ ಫೆಬ್ರವರಿ ಮೊದಲ ವಾರ ಬಜೆಟ್ ಮಂಡಿಸಲಾರಂಭಿಸಿದ್ದು ಜೇಟ್ಲಿ.

ಪ್ರತ್ಯೇಕ ರೈಲ್ವೆ  ಬಜೆಟ್ ಈಗ ವಿಲೀನ

ದೇಶದ ಮೊದಲ ಬಜೆಟ್‌ನಿಂದಲೂ ರೈಲ್ವೆ ಬಜೆಟ್ಟನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. 2016 ರಲ್ಲಿ 92 ವರ್ಷದ ಬಳಿಕ ಮೊದಲ ಬಾರಿಗೆ ವಿತ್ತ ಮಂತ್ರಿ ಅರುಣ್ ಜೇಟ್ಲಿ ಅವರು ರೈಲ್ವೆ ಬಜೆಟ್ಟನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿದರು. 1955 ರ ವರೆಗೆ ಬಜೆಟ್ಟನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಮಂಡನೆ ಮಾಡಲಾಗುತ್ತಿತ್ತು. ೧೯೫೫-೫೬ರಿಂದ ಬಜೆಟ್ಟನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಮಂಡಿಸಲು ಆರಂಭಿಸಲಾಯಿತು. 

click me!