Budget 2022 Expectations: ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಯಾವೆಲ್ಲ ಘೋಷಣೆಗಳಾಗಬಹುದು? ನಿರೀಕ್ಷೆಗಳೇನು?

By Suvarna News  |  First Published Jan 25, 2022, 9:41 AM IST

*ಫೆಬ್ರವರಿ 1ರಂದು ಸಾಮಾನ್ಯ ಬಜೆಟ್ ಜೊತೆಗೇ ರೈಲ್ವೆ ಬಜೆಟ್ ಮಂಡನೆ 
*ರೈಲ್ವೆ ಇಲಾಖೆಗೆ ಮೀಸಲಿಡೋ ಅನುದಾನದಲ್ಲಿ ಶೇ.15-20ರಷ್ಟು ಹೆಚ್ಚಳ ನಿರೀಕ್ಷೆ
*ಸುಮಾರು 2.5 ಲಕ್ಷ ಕೋಟಿ ರೂ. ಮೀಸಲಿಡೋ ಸಾಧ್ಯತೆ


Business Desk:ಫೆಬ್ರವರಿ 1ರಂದು ಮಂಡನೆಯಾಗಲಿರೋ ಕೇಂದ್ರ ಬಜೆಟ್ (Union Budget) ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ.  ಈ ನಡುವೆ ಈ ಬಾರಿಯ ಬಜೆಟ್ ನಲ್ಲಿ (Budget) ರೈಲ್ವೆ ವಲಯಕ್ಕೆ (Railway Sector) ಸಂಬಂಧಿಸಿ ಏನೆಲ್ಲ ಘೋಷಣೆಗಳಾಗೋ ಸಾಧ್ಯತೆಯಿದೆ? ಹಿಂದೆ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದ್ರೆ ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ (General Budget)ಜೊತೆಗೇ ಮಂಡಿಸಲಾಗುತ್ತಿದೆ. ಹೀಗಾಗಿ ಫೆಬ್ರವರಿ 1ರಂದು ಸಾಮಾನ್ಯ ಬಜೆಟ್ ಜೊತೆಗೇ ರೈಲ್ವೆ ಬಜೆಟ್ (Railway Budget) ಕೂಡ ಮಂಡನೆಯಾಗಲಿದೆ.

ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆ.1ರಂದು ಮಂಡಿಸಲಿರೋ ಬಜೆಟ್ ನಲ್ಲಿ ಈ ಬಾರಿ ಕೇಂದ್ರ ಸರ್ಕಾರ (Central Government) ರೈಲ್ವೆ ಇಲಾಖೆಗೆ (Railway department)ಮೀಸಲಿಡೋ ಅನುದಾನವನ್ನು ಶೇ.15-20ರಷ್ಟು ಹೆಚ್ಚಿಸಲಿದೆ. ಕಳೆದ ವರ್ಷ ರೈಲ್ವೆಗೆ ಕೇಂದ್ರ ಸರ್ಕಾರ 1,10,055 ಕೋಟಿ ರೂ. ಮೀಸಲಿಟ್ಟಿತ್ತು. ಈ ಬಾರಿ ಸುಮಾರು  2.5 ಲಕ್ಷ ಕೋಟಿ ರೂ. ಮೀಸಲಿಡೋ ಸಾಧ್ಯತೆಯಿದೆ. ಬಜೆಟ್ಗೆ ಪೂರ್ವಭಾವಿಯಾಗಿ ರೈಲ್ವೆಗೆ ಸಂಬಂಧಿಸಿದ ಅನೇಕ ವಲಯಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇನ್ನು ಕೇಂದ್ರ ಸರ್ಕಾರ ಈ ಬಾರಿ ಪ್ರಯಾಣಿಕರಿಗೆ ಹೊಸ ರೈಲ್ವೆ ಸೌಲಭ್ಯಗಳನ್ನು ಘೋಷಿಸೋ ಸಾಧ್ಯತೆಯಿದೆ. 

Tap to resize

Latest Videos

undefined

Budget 2022 Expectations: ಬಂಪರ್ ಕೊಡುಗೆ ನಿರೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರ; ಅನುದಾನದಲ್ಲಿ ಶೇ.10-12 ಹೆಚ್ಚಳ ಸಾಧ್ಯತೆ!

ಕಳೆದ ವರ್ಷ ರೈಲ್ವೆ ಇಲಾಖೆ 26,338 ಕೋಟಿ ರೂ. ನಷ್ಟ ಅನುಭವಿಸಿತ್ತು. ಕೋವಿಡ್ (COVID) ಕಾರಣಕ್ಕೆ ಎದುರಾದ ಬಿಕ್ಕಟ್ಟಿನಿಂದ ಉಂಟಾದ ನಷ್ಟ ಭರಿಸಲು ರೈಲ್ವೆ ಪ್ರಯಾಣ ದರ ಏರಿಕೆ ಮಾಡೋ ಸಾಧ್ಯತೆಯಿದೆ ಎಂಬ ಅನಿಸಿಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.  ಇನ್ನು ಆದಾಯ (Income) ಹೆಚ್ಚಳಕ್ಕೆ ಪ್ರಯಾಣ ದರ ಏರಿಕೆ ಹೊರತುಪಡಿಸಿ ಇತರ ಸಾಧ್ಯತೆಗಳ ಬಗ್ಗೆ  ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ರೈಲ್ವೆ ಬಜೆಟ್ ನಲ್ಲಿ ಸುದೀರ್ಘ ಅಂತರದ ಪ್ರಯಾಣಕ್ಕೆ ಸುಮಾರು 10 ಹೊಸ ಲೈಟ್ ಟ್ರೈನ್ ಗಳನ್ನು (ಅಲ್ಯೂಮೀನಿಯಂ ನಿರ್ಮಿತ) ಘೋಷಿಸೋ ಸಾಧ್ಯತೆಯಿದೆ. ದೆಹಲಿ (Delhi) ಹಾಗೂ ವಾರಣಾಸಿ (Varanasi) ನಡುವೆ ಬುಲೆಟ್ ಟ್ರೈನ್ ಘೋಷಿಸೋ ಸಾಧ್ಯತೆ ಕೂಡ ಇದೆ.

ಕೋವಿಡ್ ಅವಧಿಯಲ್ಲಿ ರೈಲ್ವೆ ಇಲಾಖೆಯ ಬಹುತೇಕ ಆದಾಯ ಸರಕು ಸಾಗಣೆಯಿಂದ (freight) ಬಂದಿದೆ. ಆದಕಾರಣ ರೈಲ್ವೆ ಇಲಾಖೆ ವಿವಿಧ ಸರಕು ಸಾಗಣೆ ಕಾರಿಡಾರ್ (freight corridor)ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ. ಇದು ಪ್ರಯಾಣಿಕರ ರೈಲ್ವೆಗಳ  ಮೇಲಿನ ಒತ್ತಡವನ್ನು ತಗ್ಗಿಸಿದೆ. ಮೆಟ್ರೋ ನಗರಗಳು ಹಾಗೂ ಕೆಲವು ರಾಜ್ಯಗಳಲ್ಲಿ ರೈಲ್ವೆ ಸಂಪರ್ಕ ಜಾಲವನ್ನು ಇನ್ನಷ್ಟು ಬಲಪಡಿಸೋ ನಿಟ್ಟಿನಲ್ಲಿ ಕೂಡ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸರ್ಕಾರ ಕೆಲವು ಖಾಸಗಿ ಕಂಪನಿಗಳ ನೆರವು ಪಡೆಯಲಿದೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಹಾಗೂ ಡೀಸೆಲ್ ಮೇಲಿನ ಅವಲಂಬನೆ ತಗ್ಗಿಸಲು ಭಾರತೀಯ ರೈಲ್ವೆ, ಸೌರ ವಿದ್ಯುತ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸೋ ಸಾಧ್ಯತೆಯಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕೂಡ ತಗ್ಗಿಸಲಿದೆ. 

ಇನ್ನು ರಾಷ್ಟ್ರೀಯ ರೈಲ್ವೆ ಯೋಜನೆಯಡಿಯಲ್ಲಿ 2030ರ ಅಂತ್ಯದೊಳಗೆ ರೈಲ್ವೆಯನ್ನು ಶೇ.100ರಷ್ಟು ವಿದ್ಯುದೀಕರಣಗೊಳಿಸೋ ಗುರಿಯನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಿಸಲಾಗೋದು.  ಇದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಸುಮಾರು ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಯೋಜನೆ ರೂಪಿಸಿದೆ. ಪಿಪಿಪಿ ಮಾದರಿ ಮೂಲಕ ನಿಲ್ದಾಣಗಳ ಉನ್ನತೀಕರಣಕ್ಕೆ ಮರುಅಭಿವೃದ್ಧಿ ಪ್ರಾಜೆಕ್ಟ್ ಗಳನ್ನು ಘೋಷಿಸಲಾಗೋದು. ಇದಕ್ಕಾಗಿ  12 ಕಾರಿಡಾರ್ ಗಳನ್ನು ಗುರುತಿಸಲಾಗಿದೆ. ಈ ಯೋಜನೆ ಬಗ್ಗೆ ಅನೇಕ ಕಂಪನಿಗಳು ಈಗಾಗಲೇ ಆಸಕ್ತಿ ತೋರಿವೆ ಕೂಡ. 
ಈ ವರ್ಷ ಸರ್ಕಾರ ರೈಲ್ವೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಬಗ್ಗೆ ಘೋಷಣೆ ಮಾಡೋ ಸಾಧ್ಯತೆಯೂ ಇದೆ. ಈ ಪ್ರಾಧಿಕಾರ ಪ್ರಯಾಣ ದರದ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡೋ ಸಾಧ್ಯತೆಯಿದೆ. ದೇಶದುದ್ದಕ್ಕೂ ವಿವಿಧ ಪ್ರವಾಸಿ ತಾಣಗಳನ್ನು ಸಂಪರ್ಕಿಸೋ 'ತೇಜಸ್' ಮಾದರಿಯ ಹೆಚ್ಚಿನ ಪ್ರಾಜೆಕ್ಟ್ ಗಳನ್ನು ಅಭಿವೃದ್ಧಿಪಡಿಸೋ ಯೋಜನೆಗಳನ್ನು ಅನುಷ್ಠಾನಗೊಳಿಸೋ ನಿರೀಕ್ಷೆಯಿದೆ. 

Budget 2022 Expectations: ಗೃಹ ಸಾಲದ ಬಡ್ಡಿ ಮೇಲೆ 5 ಲಕ್ಷ ರೂ. ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

ಎರಡನೇ ಹಂತದ ನಗರಗಳ ಹೊರವಲಯದಲ್ಲಿ ಮೆಟ್ರೋ ರೈಲ್ವೆ ವ್ಯವಸ್ಥೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದರಡಿಯಲ್ಲಿ  2030ರೊಳಗೆ 'ವಿಶ್ವದ ಮೊದಲ ಶೇ.100 ಹಸಿರು ರೈಲ್ವೆ ಸೇವೆ' ಒದಗಿಸೋ ಸಂಸ್ಥೆಯಾಗೋ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಇದರ ಜೊತೆ ಹೈಪರ್ ಲೂಪ್ (hyperloop) ತಂತ್ರಜ್ಞಾನ ಅಳವಡಿಕೆಯನ್ನೂ ಕೇಂದ್ರ ಸರ್ಕಾರ ಘೋಷಿಸೋ ಸಾಧ್ಯತೆಯಿದೆ. ಈ ಮಾದರಿಯ ಸಾರಿಗೆ ವ್ಯವಸ್ಥೆ ಬುಲೆಟ್ ರೈಲುಗಳಿಗಿಂತ ವೇಗವಾಗಿರುತ್ತದೆ. 'ಕಾಯಕಲ್ಪ' ಎಂಬ ಹೆಸರಿನಡಿಯಲ್ಲಿ ಸರ್ಕಾರ 500 ರೈಲ್ವೆ ನಿಲ್ದಾಣಗಳನ್ನು ಮರುಅಭಿವೃದ್ಧಿಪಡಿಸೋ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸೋ ಸಾಧ್ಯತೆ ದಟ್ಟವಾಗಿದೆ. 

click me!