ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಡಿ: ಪೆಟ್ರೋಲ್‌, ಡೀಸೆಲ್‌ಗೆ ರಿಯಾಯಿತಿ ಪಡೆಯಿರಿ..!

By BK AshwinFirst Published Aug 7, 2022, 6:16 PM IST
Highlights

ಪೆಟ್ರೋಲ್‌, ಡೀಸೆಲ್‌ಗೆ ರಿಯಾಯಿತಿ ಪಡೆಯಬೇಕಾ..? ಹಾಗಾದ್ರೆ ಖಾಲಿ ಹಾಲಿನ ಪ್ಯಾಕೆಟ್‌ ಹಾಗೂ ನೀರಿನ ಬಾಟೆಲ್‌ ಕೊಡಿ ಎಂಬ ಅಭಿಯಾನವನ್ನು ರಾಜಸ್ಥಾನದ ಪೆಟ್ರೋಲ್‌ ಬಂಕ್‌ವೊಂದು ಆರಂಭಿಸಿದೆ. 

ಪೆಟ್ರೋಲ್‌, ಡೀಸೆಲ್‌ ಬೆಲೆ ಜಾಸ್ತಿ ಆಗಿದೆ ಅಂತಾ ಹಲವರು ಚಿಂತೆ ಮಾಡುತ್ತಿರುತ್ತಾರೆ, ಇಲ್ಲವೆಂದ್ರೆ  ಸರ್ಕಾರವನ್ನು ಬೈಯ್ಯುತ್ತಿರುತ್ತಾರೆ. ಇನ್ನು, ದಿನಸಿ ವಸ್ತುಗಳಂತೆ ಪೆಟ್ರೋಲ್‌, ಡೀಸೆಲ್‌ಗೆ ಡಿಸ್ಕೌಂಟ್‌ ಕೊಟ್ರೆ ಹೇಗಿರುತ್ತೆ ಅಂತ ನಿಮಗೆ ಸನ್ನಿಸಿರಬಹುದಲ್ವೇ..? ಪೆಟ್ರೋಲ್‌ ಬಂಕ್‌ವೊಂದು ಈ ಸಾಹಸಕ್ಕೆ ಕೈ ಹಾಕಿದೆ, ಆದ್ರೆ ಕಂಡೀಷನ್ಸ್‌ ಅಪ್ಲೈ. ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ಹಾಗೂ ಪ್ಲಾಸ್ಟಿಕ್‌ ನೀರಿನ ಬಾಟೆಲ್‌ಗಳನ್ನು ಅವರಿಗೆ ಕೊಡ್ಬೇಕಂತೆ.

ಹೌದು, ರಾಜಸ್ಥಾನದ ಭಿಲ್ವಾರಾದಲ್ಲಿರುವ ಈ ಪೆಟ್ರೋಲ್‌ ಬಂಕ್‌ಗೆ ಹೋದರೆ ನೀವು ಪೆಟ್ರೋಲ್‌, ಡೀಸೆಲ್‌ಗೆ ಡಿಸ್ಕೌಂಟ್‌ ಪಡೆಯಬಹುದು. ಒಂದು ಲೀಟರ್‌ ಪೆಟ್ರೋಲ್‌ಗೆ ರೂ. 1 ಡಿಸ್ಕೌಂಟ್‌ ಹಾಗೂ ಡೀಸೆಲ್‌ಗೆ 50 ಪೈಸೆ ಡಿಸ್ಕೌಂಟ್‌ ಪಡೆಯಲು ನೀವು ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ಹಾಗೂ ಪ್ಲಾಸ್ಟಿಕ್‌ ನೀರಿನ ಬಾಟೆಲ್‌ಗಳನ್ನು ಅವರಿಗೆ ಕೊಡಬೇಕು. ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್‌ ಬ್ಯಾನ್‌ ಮಾಡಿದ ಬಳಿಕ ಇದರಿಂದ ಉತ್ತೇಜಿತರಾದ ಛಗನ್‌ಲಾಲ್‌ ಭಗ್ತಾವರ್ಮಾಲ್‌ ಪೆಟ್ರೋಲ್‌ ಪಂಪ್‌ನ ಮಾಲೀಕ ಅಶೋಕ್‌ ಕುಮಾರ್‌ ಮುಂದ್ರಾ ಜನರನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿದ್ದಾರೆ. 

ನಿಷೇಧವಿದ್ದರೂ ನಿಲ್ಲದ ಪ್ಲಾಸ್ಟಿಕ್‌ ಮಾರಾಟ, ಬಳಕೆ

ಜುಲೈ 15 ರಂದು ಈ ಸಂಬಂಧದ 3 ತಿಂಗಳ ಕಾಲ ಜಾಗೃತಿ ಅಭಿಯಾನ ಆರಂಭಿಸಿರುವ ಅಶೋಕ್‌ ಕುಮಾರ್‌ ಮುದ್ರಾ ಅವರಿಗೆ ರಾಜಸ್ಥಾನದ ಸರಸ್‌ ಡೈರಿ, ಭಿಲ್ವಾರಾ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ. ಪೆಟ್ರೋಲ್‌ ಪಂಪ್‌ನಲ್ಲಿ ಸಂಗ್ರಹವಾಗುವ ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ವಿಲೇವಾರಿ ಮಾಡುವುದಾಗಿ ಸರಸ್‌ ಡೈರಿ ಭರವಸೆ ನೀಡಿದೆ. ಇನ್ನು, ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಭಿಲ್ವರಾ ಜಿಲ್ಲಾಧಿಕಾರಿ ಆಶಿಶ್‌ ಮೋದಿ, ‘’ಏಕ ಬಳಕೆ ಪ್ಲಾಸ್ಟಿಕ್‌ ವಿರುದ್ಧ ಅರಿವು ಮೂಡಿಸಲು ಪೆಟ್ರೋಲ್‌ ಪಂಪ್‌ ಮಾಲೀಕ ಪ್ರಸ್ತಾವನೆ ಮಾಡಿದ್ದಾರೆ. ಸರಸ್‌ ಡೈರಿಯ ಖಾಲಿ ಹಾಲಿನ ಪ್ಯಾಕೆಟ್‌ಗಳಿಗೆ ಹಾಗೂ ನೀರಿನ ಬಾಟೆಲ್‌ಗಳನ್ನು ನೀಡಿದರೆ ಪೆಟ್ರೋಲ್‌, ಡೀಸೆಲ್‌ಗೆ ರಿಯಾಯಿತಿ ಘೋಷಿಸಿದ್ದಾರೆ. ಈ ಅಭಿಯಾನ ಆರಂಭವಾಗಿದೆ’’ ಎಂದು ಹೇಳಿದೆ.

ಈವರೆಗೆ 700 ಹಾಲಿನ ಪ್ಯಾಕೆಟ್‌ಗಳು ಸಂಗ್ರಹವಾಗಿದೆ ಎಂದೂ ಮುಂದ್ರಾ ಹೇಳಿದ್ದಾರೆ.  ಒಂದು ಲೀಟರ್‌ ಪೆಟ್ರೋಲ್‌ಗೆ ರೂ. 1 ಹಾಗೂ ಡೀಸೆಲ್‌ಗೆ 50 ಪೈಸೆ ರಿಯಾಯಿತಿ ನೀಡುತ್ತಿದ್ದೇನೆ. ಆದರೆ, ಇದಕ್ಕೆ ಪ್ರತಿಯಾಗಿ ಒಂದು ಲೀಟರ್‌ಗೆ ಹಾಲಿನ ಪ್ಯಾಕೆಟ್‌ ಅಥವಾ ಅರ್ಧ ಲೀಟರ್‌ನ ಎರಡು ಪ್ಯಾಕೆಟ್‌ ಅಥವಾ ಒಂದು ಲೀಟರ್‌ ನೀರಿನ ಬಾಟಲ್‌ ನೀಡಬೇಕು. ಈ ಪೌಚ್‌ಗಳನ್ನು ಪೆಟ್ರೋಲ್‌ ಪಂಪ್‌ನಲ್ಲಿ ಸಂಗ್ರಹಿಸಲಾಗುವುದು ಹಾಗೂ ವಿಲೇವಾರಿಗೆ ಸರಸ್‌ ಡೈರಿಗೆ ನೀಡಲಾಗುವುದು ಎಂದೂ ಪೆಟ್ರೋಲ್‌ ಬಂಕ್ ಮಾಲೀಕ ಮಾಹಿತಿ ನೀಡಿದ್ದಾರೆ. 

60 ಆಗುತ್ತಿದ್ದಂತೆ 'ವಿಶೇಷ ಉದ್ಯೋಗಿ'ಗೆ ನಿವೃತ್ತಿ ನೀಡಿದ ಸ್ಪ್ರೈಟ್

ಪ್ಲಾಸ್ಟಿಕ್‌ ಹಾಗೂ ಪಾಲಿಥೀನ್‌ ಬಳಕೆ ವಿರುದ್ಧ ಅಭಿಯಾನ ಸೃಷ್ಟಿಸಲು ನಾನು ಈ ಅಭಿಯಾನ ಆರಂಭಿಸಿದ್ದೇನೆ. ಭಿಲ್ವಾರಾ ಪಾಲಿಥೀನ್‌ ಹಾಗೂ ಪ್ಲಾಸ್ಟಿಕ್‌ ಮುಕ್ತ ನಗರವಾಗುವುದನ್ನು ನೋಡುವ ಇಚ್ಛೆ ನನಗಿದೆ. ಪ್ಲಾಸ್ಟಿಕ್‌ ನಮ್ಮ ಪರಿಸರವನ್ನು ಹಾಳು ಮಾಡುವುದಲ್ಲದೆ ಬೀದಿಯಲ್ಲಿ ಓಡಾಡುವ ಪ್ರಾಣಿಗಳಿಗೆ, ಪ್ರಮುಖವಾಗಿ ಹಸುಗಳಿಗೆ ಆತಂಕಕಾರಿ ಎಂದೂ ಅವರು ಹೇಳಿದರು. ಆದರೆ, ತಿಂಗಳಿಗೆ ಕನಿಷ್ಠ 10 ಸಾವಿರ ಪೌಚ್‌ಗಳನ್ನಾದರೂ ವಿಲೇವಾರಿ ಮಾಡಬಹುದು ಎಂಬ ನನ್ನ ನಿರೀಕ್ಷೆಗಳು ಈಡೇರಿಲ್ಲ ಎಂದೂ ಅವರು ಹೇಳಿದರು. 

ಈಗ ಇರುವ ಪೌಚ್‌ಗಳ ಸಂಖ್ಯೆ ಕಡಿಮೆ ಇದೆ. ಮಳೆಗಾಲದ ಕಾರಣ, ಪೆಟ್ರೋಲ್‌ ಬಂಕ್‌ಗೆ ಬರುತ್ತಿರುವ ಗ್ರಾಹಕರ ಸಂಖ್ಯೆ ಕಡಿಮೆ. ಈ ಹಿನ್ನೆಲೆ ಈ ಅಭಿಯಾನವನ್ನು 6 ತಿಂಗಳಿಗೆ ವಿಸ್ತರಿಸಲು ನಾನು ಪ್ಲ್ಯಾನ್‌ ಮಾಡುತ್ತಿದ್ದೇನೆ ಎಂದೂ ಅವರು ಹೇಳಿದರು. ಸದ್ಯ, ಮುಂದ್ರಾ ಅವರ ಪೆಟ್ರೋಲ್‌ ಬಂಕ್‌ನಲ್ಲಿ ಪೌಚ್‌ ಹಾಗೂ ಬಾಟಲ್‌ಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವರಿಗೆ ಸೇರಿದ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ನಂತರ ಅದನ್ನು ಡೈರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ. 

click me!