ವಿಮಾನಯಾನ ಸೇವೆ ಆರಂಭಿಸಿದ ‘ಆಕಾಶ ಏರ್‌’: ಶೀಘ್ರದಲ್ಲೇ ಬೆಂಗಳೂರು - ಕೊಚ್ಚಿ ನಡುವೆ ಫ್ಲೈಟ್‌

By BK AshwinFirst Published Aug 7, 2022, 5:07 PM IST
Highlights

ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್ವಾಲಾ ಹೂಡಿಕೆ ಮಾಡಿರುವ ಆಕಾಶ ಏರ್‌ ಸಂಸ್ಥೆ ತನ್ನ ವಾಣಿಜ್ಯ ವಿಮಾನಗಳ ಸೇವೆಯನ್ನು ಇಂದು ಆರಂಭಿಸಿದೆ. ಶೀರ್ಘರದಲ್ಲೇ ಬೆಂಗಳೂರು - ಕೊಚ್ಚಿ ನಡುವೆ ಹಲವು ವಾಣಿಜ್ಯ ವಿಮಾನಗಳು ಸಂಚರಿಸಲಿವೆ. 

ದೇಶದೆಲ್ಲೆಡೆ ಕುತೂಹಲ ಮೂಡಿಸಿದ್ದ ರಾಕೇಶ್‌ ಜುಂಜುನ್ವಾಲಾ ಒಡೆತನದ ‘ಆಕಾಶ ಏರ್‌’ (Akasa Air) ಭಾನುವಾರ ತನ್ನ ಮೊದಲ ವಿಮಾನ ಸೇವೆಯನ್ನು ಭಾನುವಾರ ಆರಂಭಿಸಿದೆ. ಆಕಾಶ ಏರ್‌ ಸಂಸ್ಥೆಯ ಮುಂಬೈ - ಅಹಮದಾಬಾದ್‌ ನಡುವಿನ ಮೊದಲ ವಿಮಾನ ಹಾರಾಟ ಸೇವೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ರಾಜ್ಯ ಖಾತೆ ಸಚಿವ ಜನರಲ್‌ ವಿಜಯ್‌ ಕುಮಾರ್‌ ಸಿಂಗ್ (ನಿವೃತ್ತ) ಇದನ್ನು ಉದ್ಘಾಟನೆ ಮಾಡಿದ್ದರು. ಇನ್ನೊಂದೆಡೆ, ಜುಲೈ 22 ರಂದೇ ಆಕಾಶ ಏರ್‌ ವಿಮಾನಯಾನ ಸಂಸ್ಥೆ ತನ್ನ ವಾಣಿಜ್ಯ ವಿಮಾನಗಳ (Commercial Flights) ಟಿಕೆಟ್‌ ಬುಕ್ಕಿಂಗ್  ಸೇವೆಯನ್ನು ಆರಂಭಿಸಿದ್ದವು. ಆರಂಭದಲ್ಲಿ ಅಹಮದಾಬಾದ್‌, ಬೆಂಗಳೂರು, ಮುಂಬೈ ಹಾಗೂ ಕೊಚ್ಚಿ ನಗರಗಳಿಗೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. 

QP ಎಂಬ ಏರ್‌ಲೈನ್‌ ಕೋಡ್‌ (Airline Code) ಹೊಂದಿರುವ ಆಕಾಶ ಏರ್‌, ಆಗಸ್ಟ್ 7, 2022 ರಿಂದ ತನ್ನ ವಿಮಾನಯಾನ ಸೇವೆ ಆರಂಭಿಸಿದ್ದು, ಮುಂಬೈ ಹಾಗೂ ಅಹಮದಾಬಾದ್‌ ನಡುವೆ ವಾರಕ್ಕೆ 28 ವಿಮಾನಗಳು ಸದ್ಯ ಸಂಚರಿಸಲಿವೆ ಎಂದು ತಿಳಿದುಬಂದಿದೆ. ನಂತರ, ಆಗಸ್ಟ್ 13 ರಿಂದ ಬೆಂಗಳೂರು ಹಾಗೂ ಕೊಚ್ಚಿ ನಡುವೆಯೂ ವಾರಕ್ಕೆ 28 ವಿಮಾನಗಳು ಸಂಚರಿಸಲಿವೆ ಎಂದು ಹೇಳಲಾಗಿದ್ದು, ಟಿಕೆಟ್‌ ಬುಕ್ಕಿಂಗ್‌ ಸೇವೆ ಈಗಾಗಲೇ ಆರಂಭವಾಗಿದೆ. 

ವಿಭಿನ್ನ ಉಡುಗೆಯಿಂದ ವೈರಲ್‌ ಆಯ್ತು ಭಾರತದ ಹೊಸ ವಿಮಾನಯಾನ ಸಂಸ್ಥೆ 'Akasa Air'

We can’t wait to finally check you in to Your Sky! pic.twitter.com/LHjNmZoV2q

— Akasa Air (@AkasaAir)

"ನಮ್ಮ ವಿಮಾನಗಳ ಹಾರಾಟ ಆರಂಭಿಸಲು ಸಾಧ್ಯವಾಗಿದ್ದಕ್ಕೆ ತೀವ್ರ ಉತ್ಸುಕರಾಗಿದ್ದೇವೆ. ನಮ್ಮ ಉತ್ಪನ್ನವನ್ನು ಬಹಿರಂಗಪಡಿಸಲು ಸಹ ನಾವು ಉತ್ಸುಕರಾಗಿದ್ದು, ಇದು ಇಲ್ಲಿಯವರೆಗೆ ವರ್ಗದಲ್ಲಿ ಅನುಭವಿಸಿದ ಎಲ್ಲ (ವಿಮಾನಯಾನ ಸಂಸ್ಥೆಗಳಿಗಿಂತ) ನಮ್ಮ ಉತ್ಪನ್ನ ಭಿನ್ನವಾಗಿದೆ ಎಂದು ಭರವಸೆ ನೀಡುತ್ತೇವೆ. ಅಕಾಶ ಉದ್ಯೋಗಿಗಳು ಹಿತಕರ ಮತ್ತು ಸಮರ್ಥ ಗ್ರಾಹಕ ಸೇವೆಯನ್ನು ಒದಗಿಸುಸಲಿದ್ದು, ಭರವಸೆ ಇಡಬಲ್ಲ ಮತ್ತು ವಿಶ್ವಾಸಾರ್ಹ ನೆಟ್‌ವರ್ಕ್, ಹಾಗೂ ಕೈಗೆಟುಕುವ ದರಗಳನ್ನು ಸಹ ನೀಡಲಿದ್ದೇವೆ - ಇದರಿಂದ ನಮ್ಮ ಗ್ರಾಹಕರಿಗೆ ಅದ್ಭುತ ಅನುಭವದೊಂದಿಗೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ, ಹಾಗೂ ಅವರು ಸಂತೋಷ ಕಂಡುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಆಕಾಶ ಏರ್‌ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಡುಬೆ ಹೇಳಿದ್ದಾರೆ.

ಈ ಮಧ್ಯೆ, ಮೊಬೈಲ್ ಅಪ್ಲಿಕೇಶನ್ ಮತ್ತು ಅದರ ವೆಬ್‌ಸೈಟ್ www.akasaair.com ಮೂಲಕ ನೀವು ಆಕಾಶ ಏರ್‌ ವಿಮಾನಗಳ ಬುಕಿಂಗ್ ಮಾಡಬಹುದು. ಇನ್ನು, ಆಕಾಶ ಏರ್‌ನ ನೆಟ್‌ವರ್ಕ್ ಕಾರ್ಯತಂತ್ರವು ಪ್ರಬಲವಾದ ಪ್ಯಾನ್-ಇಂಡಿಯಾ ಉಪಸ್ಥಿತಿಯನ್ನು ಸ್ಥಾಪಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಮತ್ತು ದೇಶದ ಮೆಟ್ರೋ ನಗರಗಳಿಂದ ದೇಶಾದ್ಯಂತ 2 ಮತ್ತು ಶ್ರೇಣಿ 3 ನಗರಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಆಕಾಶ ಏರ್‌ನ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಮರ್ಷಿಯಲ್‌ ಅಧಿಕಾರಿ ಪ್ರವೀಣ್ ಅಯ್ಯರ್‌ ಹೇಳಿಕೊಂಡಿದ್ದಾರೆ. 

ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಬೆಂಬಲಿತ ಆಕಾಶ ಏರ್‌ ವಿಮಾನಯಾನ ಸಂಸ್ಥೆಯು ಜುಲೈ ತಿಂಗಳಲ್ಲಿ ನಾಗರಿಕ ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ನಿಂದ ಏರ್ ಆಪರೇಟರ್ ಪ್ರಮಾಣಪತ್ರವನ್ನು (AOC) ಸ್ವೀಕರಿಸಿದೆ. ಏರ್ ಆಪರೇಟರ್ ಪ್ರಮಾಣಪತ್ರ ದೊರೆಯುವುದು DGCA ಯಿಂದ ರೂಪಿಸಲಾದ ಸಮಗ್ರ ಮತ್ತು ಕಠಿಣ ಪ್ರಕ್ರಿಯೆಯ ಅಂತಿಮ ಹಂತವಾಗಿದೆ ಹಾಗೂ ಏರ್‌ಲೈನ್‌ ಕಾರ್ಯಾಚರಣೆಯ ಸಿದ್ಧತೆಗಾಗಿ ಎಲ್ಲಾ ನಿಯಂತ್ರಕ ಮತ್ತು ಅನುಸರಣೆ ಅಗತ್ಯತೆಗಳ ತೃಪ್ತಿದಾಯಕ ಪೂರ್ಣಗೊಳಿಸುವಿಕೆಯನ್ನು ಗುರುತಿಸುತ್ತದೆ. ಇತ್ತೀಚೆಗೆ ಹಲವು ವಿಮಾನಯಾನ ಸಂಸ್ಥೆಗಳ ವಾಣಿಜ್ಯ ವಿಮಾನಗಳ ಸೇವೆ ಕುರಿತು ಹಲವರಿಗೆ ಆತಂಕ ಮೂಡಿಸುವ ವರದಿಗಳು ಬಂದ ಬೆನ್ನಲ್ಲೇ ಆಕಾಶ ಏರ್‌ ವಿಮಾನಯಾನ ಸೇವೆ ಆರಂಭವಾಗಿದೆ. 

click me!