
ಬೆಂಗಳೂರು (ನ.1): ಅತಿಯಾದ ಸಾಲ, ದುಂದುವೆಚ್ಚದ ಕಾರಣದಿಂದಾಗಿ ವಿಜಯ್ ಮಲ್ಯ ತಮ್ಮ ಕಣ್ಣೆದುರಲ್ಲೇ ಕಿಂಗ್‌ಫಿಶರ್ ಸಾಮಾಜ್ಯ ಕುಸಿದು ಹೋಗೋದನ್ನು ನೋಡಿದ್ದರು. ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪನಿಯ ಸಿಬ್ಬಂದಿಗಳು ವೇತನ ಸಿಗದೆ ವರ್ಷಗಟ್ಟಲೆ ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರು. ಕೊನೆಗೆ ವಿಜಯ್ ಮಲ್ಯ ಬ್ಯಾಂಕ್ ಸಾಲ ಕಟ್ಟಲಾಗದೆ ದೇಶ ಬಿಟ್ಟು ಹೋದರು. ಏರ್‌ಲೈನ್ಸ್ ಮುಚ್ಚಿಹೋಯಿತು. ಬ್ರೂವರಿಸ್ ಕಂಪನಿಯನ್ನು ಬೇರೆಯವರಿಗೆ ಮಾರಿದರು. ಈಗ ಕಿಂಗ್‌ಫಿಶರ್ ಹಾದಿಯಲ್ಲೇ ದೇಶದ ಮತ್ತೊಂದು ಬಿಯರ್ ಕಂಪನಿ ನಷ್ಟದ ಗುಂಡಿಯಲ್ಲಿ ಬಿದ್ದಿದೆ. ಕೆಲವು ವರ್ಷಗಳ ಹಿಂದೆ ದೇಶದ ಯುವಜನರ ಬಾಯಲ್ಲಿ ಕೇಳಿಬರುತ್ತಿದ್ದ, ನಶೆಯಲ್ಲಿ ತೇಲಿಸುತ್ತಿದ್ದ ಬೀರಾ 91 ಕಂಪನಿ ತನ್ನ ಸಿಬ್ಬಂದಿಗೆ ವೇತನ ಪಾವತಿ ಮಾಡಲಾಗದ ಸಂಕಷ್ಟಕ್ಕೆ ಸಿಲುಕಿದೆ.
ಇದರ ಬೆನ್ನಲ್ಲಿಯೇ ಕಂಪನಿಯ ಉದ್ಯೋಗಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೀರಾ 91 ರ ಮೂಲ ಕಂಪನಿಯಾದ ಕ್ರಾಫ್ಟ್ ಬಿಯರ್ ತಯಾರಕ ಬಿ9 ಬೆವರೇಜಸ್ ಲಿಮಿಟೆಡ್‌ನ ನೂರಾರು ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು, ಕಂಪನಿಯ ಆಡಳಿತ ಮಂಡಳಿಯು ತೀವ್ರ ಆರ್ಥಿಕ ಮತ್ತು ಶಾಸನಬದ್ಧ ಉಲ್ಲಂಘನೆಗಳನ್ನು ಮಾಡಿದ್ದು ಶೀಘ್ರವೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಿದೆ. ಈ ಬಗ್ಗೆ ಮನಿ ಕಂಟ್ರೋಲ್ ವರದಿ ಮಾಡಿದೆ.
ಪತ್ರದ ಪ್ರಕಾರ, ಬಿ9 ಬೆವರಜಸ್ ಲಿಮಿಟೆಡ್ ಬಗ್ಗೆ "ತಕ್ಷಣದ ತನಿಖೆ" ಪ್ರಾರಂಭಿಸುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಸೇರಿದಂತೆ ಹಲವು ಸಂಸ್ಥೆಗಳಿಗೆ ನೌಕರರು ಪತ್ರ ಬರೆದಿದ್ದಾರೆ. ಇದಲ್ಲದೆ, ಉದ್ಯೋಗಿ ಮತ್ತು ಸರ್ಕಾರಿ ಬಾಕಿಗಳನ್ನು ಪಡೆಯಲು ಡೀಫಾಲ್ಟ್ ನಿರ್ದೇಶಕರ ವೈಯಕ್ತಿಕ ಸ್ವತ್ತುಗಳನ್ನು ಸ್ಥಗಿತಗೊಳಿಸಲು, ಬಾಕಿ ಇರುವ ಸಂಬಳ ಮತ್ತು ಶಾಸನಬದ್ಧ ಬಾಕಿಗಳನ್ನು ಬಿಡುಗಡೆ ಮಾಡಲು ಕಂಪನಿಗೆ ನಿರ್ದೇಶಿಸಲು ಮತ್ತು ಜವಾಬ್ದಾರಿಯುತ ನಿರ್ದೇಶಕರ ವಿರುದ್ಧ ಅಗತ್ಯ ಕ್ರಿಮಿನಲ್ ಮತ್ತು ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ವಿನಂತಿಸಿದ್ದಾರೆ.
ಬೀರಾ ಅವರ ಪೋಷಕ ಕಂಪನಿಯಾದ ಬಿ9 ಬೆವರೇಜಸ್ ಲಿಮಿಟೆಡ್‌ನಲ್ಲಿ ಪ್ರಮುಖ ಕಾರ್ಯಾಚರಣೆ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಒಂದು ಸಣ್ಣ ಹೆಸರು ಬದಲಾವಣೆಯು ನಿಯಂತ್ರಕ ಅಡೆತಡೆಗಳ ಸರಣಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಅದರ ಪ್ರಮುಖ ವಿತರಣಾ ರಾಜ್ಯಗಳಲ್ಲಿ ತಿಂಗಳುಗಳ ಕಾಲ ಮಾರಾಟ ನಿಷೇಧ ಹೇರಲಾಯಿತು. ಈ ಪರಿಣಾಮವು ಅಂದಾಜು ರೂ. 80 ಕೋಟಿ ದಾಸ್ತಾನು ನಷ್ಟವನ್ನು ಒಳಗೊಂಡಿತ್ತು ಮತ್ತು ಬೀರಾ 91 ಮಾರುಕಟ್ಟೆಯಿಂದ ಹೊರಗುಳಿದ ಸಮಯದಲ್ಲಿ ಸ್ಪರ್ಧಿಗಳು ಮಾರುಕಟ್ಟೆ ಪಾಲನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು.
ಏಳು ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ಪಾವತಿ ಮಾಡಿಲ್ಲ. ಸುಮಾರು 50 ಕೋಟಿ ರೂ. ಮೌಲ್ಯದ ಟಿಡಿಎಸ್ ಪಾವತಿ ಮಾಡಿಲ್ಲ ಮತ್ತು ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಬಾಕಿಗಳನ್ನು ಪಾವತಿಸದಿರುವುದು ಸೇರಿದಂತೆ ಹಲವಾರು ಉಲ್ಲಂಘನೆಗಳನ್ನು ಕಂಪನಿ ಮಾಡಿದೆ ಎಂದು ಸಿಬ್ಬಂದಿ ತಿಳಸಿದ್ದಾರೆ. "ಬಿ9 ಬೆವರಜಸ್‌ನೊಂದಿಗೆ ಸಂಬಂಧ ಹೊಂದಿರುವ (ಪ್ರಸ್ತುತ ಮತ್ತು ಹಿಂದಿನ) 600 ಕ್ಕೂ ಹೆಚ್ಚು ಕುಟುಂಬಗಳು ದೀರ್ಘಕಾಲದ ಸಂಬಳ ಮತ್ತು ಶಾಸನಬದ್ಧ ಬಾಕಿಗಳನ್ನು ಪಾವತಿಸದ ಕಾರಣ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕಂಪನಿಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಲ್ಲದೆ, ಕಳೆದ 7 ತಿಂಗಳಿನಿಂದ ಬಾಕಿ ಪಾವತಿಸಿಲ್ಲ. ಕೆಲವು ಸಿಬ್ಬಂದಿಯನ್ನು ವಜಾ ಮಾಡಲಾಗಿದೆ, ಇನ್ನೂ ಕೆಲವರು ಬಿಟ್ಟು ಹೋಗಿದ್ದಾರೆ. ಅವರಿಗೆ ಫುಲ್ & ಫೈನಲ್ ಸೆಟಲ್‌ಮೆಂಟ್ ಆಗಿಲ್ಲ ಎಂದು ನೌಕರರು ಆರೋಪಿಸಿದ್ದಾರೆ.
"ಈ ವಾರ ಮತ್ತೊಂದು ಸುತ್ತಿನ ವಜಾಗೊಳಿಸುವಿಕೆ ನಡೆಯಲಿದ್ದು, ಕಂಪನಿಯು 50 ಪ್ರಮುಖ ಸದಸ್ಯರೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ" ಎಂದು ಹೆಸರು ಬಹಿರಂಗಪಡಿಸಲು ಬಯಸದ ಉದ್ಯೋಗಿಯೊಬ್ಬರು ಹೇಳಿದರು. ಪತ್ರದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಕುರ್ ಜೈನ್, ನಿರ್ದೇಶಕರಾದ ಅಂಕಿತಾ ಪಾವಾ ಮತ್ತು ಶಶಿ ಜೈನ್ ಅವರ ಹೆಸರುಗಳು ಈ ಬಿಕ್ಕಟ್ಟಿನ ಹಿಂದಿನ ಪ್ರಮುಖ ವ್ಯಕ್ತಿಗಳೆಂದು ಹೆಸರಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.