ಆಧಾರ್‌ ವ್ಯವಸ್ಥೆ ವಿಶ್ವಕ್ಕೇ ಮಾದರಿ: ಬಿಲ್‌ ಗೇಟ್ಸ್‌ ಪ್ರಶಂಸೆ!

By Web Desk  |  First Published Nov 18, 2019, 9:13 AM IST

ಆಧಾರ್‌ ವ್ಯವಸ್ಥೆ ವಿಶ್ವಕ್ಕೇ ಮಾದರಿ: ಬಿಲ್‌ ಗೇಟ್ಸ್‌| ಮುಂದಿನ ದಶಕದಲ್ಲಿ ಭಾರತ ಬೃಹತ್‌ ಅಭಿವೃದ್ಧಿ


ನವದೆಹಲಿ[ನ.18]: ‘ಭಾರತದಲ್ಲಿ ಜಾರಿಗೆ ಬಂದ ಆಧಾರ್‌ ವ್ಯವಸ್ಥೆಯು ಇಂದು ವಿಶ್ವಕ್ಕೇ ಮಾದರಿಯಾಗಿದೆ. ಅದಕ್ಕೆಂದೇ ನಾವು ಇಂದು ಈ ವ್ಯವಸ್ಥೆಯನ್ನು ರೂಪುಗೊಳಿಸಿದ ಐಟಿ ತಜ್ಞ ನಂದನ್‌ ನಿಲೇಕಣಿ ಜತೆ ಅದರ ಯಶಸ್ಸಿನ ವಿಧಾನ ಅರಿಯಲು ಸಹಭಾಗಿತ್ವ ಮಾಡಿಕೊಂಡಿದ್ದೇವೆ’ ಎಂದು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಪ್ರಶಂಸಿಸಿದ್ದಾರೆ.

ಅಲ್ಲದೆ, ‘ಡಿಜಿಟಲ್‌ ವಿಧಾನ ಅನುಸರಿಸಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಭಾರತದಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ದೊರಕುತ್ತಿದೆ. ಭಾರತವು ಮುಂದಿನ ದಶಕದಲ್ಲಿ ದೊಡ್ಡ ಆರ್ಥಿಕ ಅಭಿವೃದ್ಧಿಯ ಸಾಮರ್ಥ್ಯ ಹೊಂದಿದೆ. ಇದರಿಂದ ಜನರು ಬಡತನದಿಂದ ಹೊರಬರಲಿದ್ದಾರೆ. ಇದು ಸರ್ಕಾರಕ್ಕೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಿದೆ’ ಎಂದೂ ಭವಿಷ್ಯ ನುಡಿದಿದ್ದಾರೆ.

Tap to resize

Latest Videos

ಭಾರತಕ್ಕೆ ಭೇಟಿ ನೀಡಿರುವ ಅವರು ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ್ದಾರೆ. ‘ಹಣಕಾಸು ಸೇವೆ ಹಾಗೂ ಅದರಲ್ಲಿನ ಸೃಜನಶೀಲತೆಯಲ್ಲಿ ಭಾರತ ಮುಂದಿದೆ. ಆಧಾರ್‌ ಗುರುತು ಪದ್ಧತಿ ಹಾಗೂ ಯುಪಿಐ ಏಕೀಕೃತ ವ್ಯವಸ್ಥೆ ಮೂಲಕ ಹಣ ಪಾವತಿಸುವುದಕ್ಕೆ ಭಾರತದಲ್ಲಿ ಭಾರೀ ಮನ್ನಣೆ ದೊರಕುತ್ತಿದೆ. ಈ ಕಾರ್ಯದ ಮೂಲಕ ಅತ್ಯುತ್ತಮ ಪಾಠವನ್ನು ನಾವು ಕಲಿಯಬೇಕಿದೆ’ ಎಂದರು.

‘ಡಿಜಿಟಲ್‌ ಗುರುತು ಪದ್ಧತಿ ಹಾಗೂ ಹಣಕಾಸು ಸೇವೆಯನ್ನು ವಿಶ್ವಕ್ಕೆ ಭಾರತ ಹೇಗೆ ಕಲಿಸಿಕೊಟ್ಟಿದೆ ಎಂಬುದನ್ನು ತಿಳಿಯಲು ಇಂದು ನಾವು ನಂದನ್‌ ನಿಲೇಕಣಿ ಅವರ ಜತೆ ಸಂಪರ್ಕದಲ್ಲಿದ್ದೇವೆ’ ಎಂದೂ ಗೇಟ್ಸ್‌ ಹೇಳಿದರು.

ನಿಲೇಕಣಿ ಅವರು ಆಧಾರ್‌ ಗುರುತು ಪ್ರಾಧಿಕಾರದ ಮುಖ್ಯಸ್ಥರಾಗಿದ್ದರು. ಆಗ ಆಧಾರ್‌ ಎಂಬ ಏಕೀಕೃತ ವ್ಯವಸ್ಥೆಯ ಮೂಲಕ ಸರ್ಕಾರದ ಯೋಜನೆಗಳ ಲಾಭ ನೈಜ ಫಲಾನುಭವಿಗಳಿಗೆ ನೇರವಾಗಿ ದೊರಕುವ ವಿಧಾನವನ್ನು ಅವರು ಕಂಡುಹಿಡಿದಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟುಉಳಿತಾಯವಾಗಿತ್ತಲ್ಲದೇ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಲು ಆರಂಭವಾಗಿದ್ದವು.

click me!