81 ಕೋಟಿ ಭಾರತೀಯರ ಖಾಸಗಿ ಡೇಟಾ ಸೋರಿಕೆ; ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಮತ್ತೆಅನುಮಾನ!

By Anusha ShettyFirst Published Oct 31, 2023, 4:49 PM IST
Highlights

ಭಾರತೀಯರ ವೈಯಕ್ತಿಕ ಮಾಹಿತಿಗಳು ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗಿವೆ ಎಂದು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆಯೊಂದು ವರದಿ ಮಾಡಿದೆ. ಇದು ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಇನ್ನೊಮ್ಮೆ ಚರ್ಚೆ ಹುಟ್ಟುಹಾಕಿದೆ. 
 

ನವದೆಹಲಿ (ಅ.31): ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಅನುಮಾನ ಮೂಡಿಸುವಂತಹ ಸುದ್ದಿಯೊಂದು ಕೇಳಿಬಂದಿದೆ. 81.5 ಕೋಟಿ ಭಾರತೀಯರ ಆಧಾರ್ ಕಾರ್ಡ್ ನಲ್ಲಿನ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರಿಸೆಕ್ಯುರಿಟಿ ವರದಿ ಮಾಡಿದೆ. ಇದು ಆಧಾರ್ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಇದನ್ನು ಭಾರತದ ಅತೀದೊಡ್ಡ ಡೇಟಾ ಸೋರಿಕೆ ಎಂದು ಕೂಡ ಹೇಳಲಾಗಿದೆ. ಡಾರ್ಕ್ ವೆಬ್ ನಲ್ಲಿ ಈ ಮಾಹಿತಿಗಳನ್ನು ಪ್ರಕಟಿಸಲಾಗಿದೆ ಎಂದು ವರದಿ ಹೇಳಿದೆ. ಕೋಟ್ಯಂತರ ಭಾರತೀಯರ ಆಧಾರ್, ಪಾಸ್ ಪೋರ್ಟ್ ಮಾಹಿತಿಗಳು, ಹೆಸರುಗಳು, ಫೋನ್ ಸಂಖ್ಯೆಗಳು, ಕಾಯಂ ಹಾಗೂ ತಾತ್ಕಾಲಿಕ ವಿಳಾಸಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಲಾಗಿದೆ. ರಿಸೆಕ್ಯುರಿಟಿ ವರದಿ ಅನ್ವಯ ಹ್ಯಾಕರೊಬ್ಬ ಈ ಕೃತ್ಯ ಎಸಗಿದ್ದು, ಈ ಬಗ್ಗೆ ಅಕ್ಟೋಬರ್ 9ರಂದು ಬ್ರಿಚ್ ಫೋರಂನಲ್ಲಿ ಈ ಬಗ್ಗೆ ಆತ ಜಾಹೀರಾತು ಪ್ರಕಟಿಸಿದ್ದ.  81.5 ಕೋಟಿ ಭಾರತೀಯರ ಆಧಾರ್ ಹಾಗೂ ಪಾಸ್ ಪೋರ್ಟ್ ಮಾಹಿತಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ ಎಂದು ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ, ಈ ದೊಡ್ಡ ಪ್ರಮಾಣದ ಡೇಟಾ ಸೋರಿಕೆಯನ್ನು ಕೇಂದ್ರ ಸರ್ಕಾರ ಈ ತನಕ ಅಧಿಕೃತವಾಗಿ ದೃಢೀಕರಿಸಿಲ್ಲ. 

ರಿಸೆಕ್ಯುರಿಟಿ ವರದಿಯಲ್ಲಿ ನೀಡಿರುವ ಮಾಹಿತಿಯಂತೆ ‘pwn0001’ಎಂಬ ಹೆಸರನ್ನು ಬಳಸಿಕೊಂಡು ಹ್ಯಾಕರೊಬ್ಬ ತಾನು  81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಿರುವ ವಿಚಾರವನ್ನು ಬ್ರೀಚ್ ಫೋರಂನಲ್ಲಿ ಬಹಿರಂಗಪಡಿಸಿದ್ದ. ಅಲ್ಲದೆ, ಈ ಮಾಹಿತಿಗಳು 80,000 ಡಾಲರ್ ಗೆ ಮಾರಾಟಕ್ಕಿವೆ ಎಂಬ ಜಾಹೀರಾತು ನೀಡಿದ್ದ. ರಿಸೆಕ್ಯುರಿಟೀಸ್ ಹಂಟರ್ (HUMINT) ಘಟಕ ಆಧಾರ್ ಕಾರ್ಡ್ ಸೇರಿದಂತೆ ಲಕ್ಷಾಂತರ ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿಗಳ ದಾಖಲೆಗಳನ್ನು ಗುರುತಿಸಿದೆ. 

ಆಧಾರ್ ವಿರುದ್ಧ ಮೂಡೀಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಕೇಂದ್ರ ಸರ್ಕಾರ

ಸೋರಿಕೆಯಾಗಿರುವ ಮಾಹಿತಿಗಳಲ್ಲಿ ಭಾರತೀಯ ನಾಗರಿಕರ ಹೆಸರು, ತಂದೆ ಹೆಸರು, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ವಯಸ್ಸು, ಲಿಂಗ, ವಿಳಾಸ, ಜಿಲ್ಲೆ, ಪಿನ್ ಕೋಡ್, ರಾಜ್ಯ ಮುಂತಾದವು ಸೇರಿದ್ದು, ಮಾರಾಟವಾಗುತ್ತಿರೋದಾಗಿ ವರದಿ ತಿಳಿಸಿದೆ. 

ಇನ್ನು ಹ್ಯಾಕರ್ ಈ ಮಾಹಿತಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯಿಂದ (ಐಸಿಎಂಆರ್) ಕಳವು ಮಾಡಿರೋದಾಗಿ ವರದಿ ತಿಳಿಸಿದೆ. ಈ ಮಾಹಿತಿಗಳು ಕೋವಿಡ್ -19 ಮಾಹಿತಿಗಳ ಭಾಗವಾಗಿದ್ದು, ಇದು ಐಸಿಎಂಆರ್ ಬಳಿಯಿತ್ತು ಎಂದು ಹೇಳಿದೆ. ಇನ್ನು ಈ ಡೇಟಾ ಸ್ಯಾಂಪಲ್ ಗಳನ್ನು ಪರಿಶೀಲಿಸಲಾಗಿದ್ದು, ಇವು ನಿಜವಾದ ಮಾಹಿತಿಗಳಾಗಿವೆ ಎಂದು ವರದಿ ತಿಳಿಸಿದೆ. 

ಕೆಲವು ಮಾಧ್ಯಮ ವರದಿಗಳ ಪ್ರಕಾರ ಈ ಡೇಟಾ ಸೋರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಹ್ಯಾಕರ್  ‘pwn0001’ಪತ್ತೆಗೆ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಐಸಿಎಂಆರ್ ಗೆ ಮಾಹಿತಿ ನೀಡಲಾಗಿದೆ. ಹಾಗೆಯೇ ಮಾಹಿತಿ ಸೋರಿಕೆ ಆಗಿರೋದು ನಿಜವೋ ಅಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಕೂಡ.

ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಇನ್ನು ಈ ವರ್ಷದ ಆಗಸ್ಟ್ ನಲ್ಲಿ 'ಲೂಸಿಯಸ್' ಎಂಬ ಹೆಸರಿನ ಮೂಲಕ ವ್ಯಕ್ತಿಯೊಬ್ಬ ಭಾರತೀಯರಿಗೆ ಸಂಬಂಧಿಸಿ ದೊಡ್ಡ ಪ್ರಮಾಣದಲ್ಲಿ ಡೇಟಾ ಕಳುವು ಮಾಡಿರೋದಾಗಿ ತಿಳಿಸಿದ್ದ. ಸುಮಾರು 1.8 ಟೆರಾಬೈಟ್ಸ್ ಡೇಟಾ ಕಳವು ಮಾಡಿರೋದಾಗಿ ಮಾಹಿತಿ ನೀಡಿದ್ದ ಈತ ಇದು 'ಭಾರತೀಯ ಆಂತರಿಕ ಕಾನೂನು ಜಾರಿ ಸಂಸ್ಥೆಗೆ' ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದ್ದ. ವರದಿಗಳ ಪ್ರಕಾರ ಈ ಮಾಹಿತಿ ಸೋರಿಕೆ ‘pwn0001’ಗಿಂತ ಹೆಚ್ಚಿನ ಪ್ರಮಾಣದ ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಿತ್ತು. ಅಲ್ಲದೆ, ಹಂಟರ್ ತಂಡ ನಡೆಸಿದ ಅಧ್ಯಯನದ ಪ್ರಕಾರ ಇದರಲ್ಲಿನ ಮಾಹಿತಿಗಳ ಜೊತೆಗೆ 'Pre-paid' ಎಂಬ ಪದವಿತ್ತು. ಅಂದರೆ  ಪ್ರೀಪೇಯ್ಡ್ ಮೊಬೈಲ್ ಸಿಮ್ ಗಳನ್ನು ನೀಡುವ ಕಂಪನಿಯಿಂದ ಈ ಡೇಟಾ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ. 


 

click me!