
Business Desk:ಅನೇಕರು ತಮ್ಮ ನಿತ್ಯದ ಉದ್ಯೋಗದ ಜೊತೆಗೆ ನೆಚ್ಚಿನ ಇನ್ಯಾವುದೋ ಪಾರ್ಟ್ ಟೈಮ್ ಕೆಲಸಕ್ಕೂ ಕೈ ಹಾಕಿರುತ್ತಾರೆ. ಅದು ಇಷ್ಟದ ಹವ್ಯಾಸವಾಗಿರಬಹುದು ಇಲ್ಲವೇ ಮನಸ್ಸಿಗೆ ಖುಷಿ ನೀಡುವ ಕಾರ್ಯವಾಗಿರಬಹುದು. ಈ ರೀತಿ ವೃತ್ತಿ ಜೊತೆಗೆ ನೆಚ್ಚಿನ ಪ್ರವೃತ್ತಿಯನ್ನೂ ಮಾಡುತ್ತಿರುವ ವಿಶೇಷ ವ್ಯಕ್ತಿಯೊಬ್ಬರ ಬಗ್ಗೆ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಂದ ಹಾಗೇ ಈ ವಿಶೇಷ ವ್ಯಕ್ತಿ ಬೆಂಗಳೂರಿನ ಒಬ್ಬ ಊಬರ್ ಅಟೋ ಚಾಲಕರಾಗಿದ್ದು, ಇವರು ವೈಯಕ್ತಿಕ ಹಣಕಾಸಿನ ಸಲಹೆಗಳನ್ನು ನೀಡುವ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅಟೋ ಓಡಿಸುತ್ತ ದಿನದ ಆದಾಯವನ್ನು ಗಳಿಸುವ ಅಟೋ ಡ್ರೈವರ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಅನೇಕರಿಗೆ ಹಣಕಾಸಿನ ನಿರ್ವಹಣೆ ಟಿಪ್ಸ್ ನೀಡುತ್ತಿದ್ದಾರೆ. ಅಂದಹಾಗೇ ಇವರೇನು ಸುಖಾಸುಮ್ಮನೆ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಮನಸ್ಸಿಗೆ ಬಂದಂತೆ ಸಲಹೆ ನೀಡುತ್ತಿಲ್ಲ. ಬದಲಿಗೆ ಅರ್ಥಶಾಸ್ತ್ರ, ಷೇರು ಮಾರುಕಟ್ಟೆ, ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎಂದು ಅವರನ್ನು ಪರಿಚಯಿಸಿದ ವ್ಯಕ್ತಿ ತಿಳಿಸಿದ್ದಾರೆ. ಈ ಅಟೋ ಚಾಲಕನೊಂದಿಗಿನ ತಮ್ಮ ಅನುಭವವನ್ನು ಅವರು 'ಪೀಕ್ ಬೆಂಗಳೂರು' ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಸುಶಾಂತ್ ಕೋಶಿ ಎಂಬ ಹೆಸರಿನ ವ್ಯಕ್ತಿ ಅಟೋ ಡ್ರೈವರ್ ಜರ್ನಾದನ್ ಎಂಬುವರ ಕುರಿತು ಟ್ವೀಟ್ ಮಾಡಿದ್ದಾರೆ. ಜರ್ನಾದನ್ ಅವರು ಅಟೋ ಒಳಗೆ 'ಗೋಲ್ಡ್ ಜನಾರ್ದನ್ ಇನ್ವೆಸ್ಟರ್' ಎಂಬ ತಮ್ಮ ಯೂಟ್ಯೂಬ್ ಚಾನೆಲ್ ಜಾಹೀರಾತಿನ ಬ್ಯಾನರ್ ಹಾಕಿದ್ದು, ಅದರ ಪೋಟೋ ಅನ್ನು ಸುಶಾಂತ್ ಟ್ವೀಟ್ ಮಾಡಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಗೆ 800ಕ್ಕಿಂತಲೂ ಅಧಿಕ ಚಂದಾದಾರರು ಇದ್ದಾರೆ. ಇನ್ನು ಈ ಚಾನೆಲ್ ನಲ್ಲಿ 'ನೋಟು ಮುದ್ರಿಸೋದು ದೇಶಕ್ಕೆ ಒಳ್ಳೆಯದ್ದಲ್ಲ'. 'ಮಾರುತಿ 800 ಕಾರು vs ಮಾರುತಿ ಷೇರುಗಳು' ಹಾಗೂ 'ನಿಮ್ಮ ಮೊದಲ ಷೇರು ಆಯ್ಕೆ ಮಾಡೋದು ಹೇಗೆ' ಎಂಬ ವಿಷಯಗಳ ಬಗ್ಗೆ 100ಕ್ಕೂ ಅಧಿಕ ವಿಡಿಯೋಗಳು ಇವೆ.
'ಇಂದಿನ ನನ್ನ ಊಬರ್ ಅಟೋ ಡ್ರೈವರ್ ಯೂಟ್ಯೂಬ್ ಪ್ರಭಾವಿಯಾಗಿದ್ದು, ವೈಯಕ್ತಿಕ ಹಣಕಾಸು ವಿಷಯದಲ್ಲಿ ಪರಿಣತಿ ಹೊಂದಿದ್ದಾರೆ' ಎಂದು ಕೋಶಿ ಟ್ವೀಟ್ ಮಾಡಿದ್ದಾರೆ. ಇನ್ನು ಈ ಟ್ವೀಟ್ ಅನ್ನು 'Peak Bengaluru'ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಪೀಕ್ ಬೆಂಗಳೂರು ಸ್ಟಾರ್ಟ್ ಅಪ್ ಹಾಗೂ ತಂತ್ರಜ್ಞಾನಗಳಲ್ಲಿ ಪರಿಣಿತಿ ಹೊಂದಿದೆ. ಇನ್ನೊಂದು ಟ್ವೀಟ್ ನಲ್ಲಿ ಕೋಶಿ ಯೂಟ್ಯೂಬ್ ಚಾನೆಲ್ ನಲ್ಲಿ ಜನಾರ್ದನ್ ಆಯ್ದುಕೊಂಡಿರುವ ವಿಷಯಗಳು ಹಾಗೂ ಅವುಗಳ ಮೇಲಿನ ಅವರ ಹಿಡಿತದ ಬಗ್ಗೆ ವಿವರಿಸಿದ್ದಾರೆ.'ಯಾಕೆ ಕೇಂದ್ರೀಯ ಬ್ಯಾಂಕ್ ಹಣವನ್ನು ಸುಮ್ಮನೆ ಮುದ್ರಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಅವರು ನೀಡಿರುವ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ವಿವರಣೆ ನಿಜಕ್ಕೂ ಪರಿಣಾಮಕಾರಿಯಾಗಿದೆ' ಎಂದು ಕೋಶಿ ಹೇಳಿದ್ದಾರೆ. 'ಅಟೋ ಡ್ರೈವರ್ ಜನಾರ್ದನ್ ಅವರ ಯೂ ಟ್ಯೂಬ್ ಚಾನೆಲ್ ನೋಡಿದೆ. ನಿಜಕ್ಕೂ ಇದರಿಂದ ನಾನು ಪ್ರಭಾವಿತನಾಗಿದ್ದೇನೆ. ಮೊದಲನೇಯದಾಗಿ ಆತ ಸಂಕೀರ್ಣವಾದ ಆರ್ಥಿಕ ವಿಷಯಗಳನ್ನು ಚೆನ್ನಾಗಿ ಕಲಿತಿದ್ದಾನೆ. ಎರಡನೇಯದಾಗಿ ಆ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾನೆ. ಹಾಗೆಯೇ ಮೂರನೇಯದಾಗಿ ಅಟೋ ಡ್ರೈವರ್ ಕೆಲಸ ಮಾಡುತ್ತ ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಗ್ರಾಫ್ಸ್ ಇತ್ಯಾದಿ ಬಳಸಿ ಸಿದ್ಧಪಡಿಸಿದ್ದಾನೆ. ನಿಜಕ್ಕೂ ಈ ಬಗ್ಗೆ ಒಂದು ಕೇಸ್ ಸ್ಟಡಿ ಮಾಡಬಹುದು' ಎಂದು ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
ಕೋಶಿ ಅವರ ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಕೂಡ ಬಂದಿವೆ. ಒಬ್ಬರು ಟ್ವಿಟರ್ ಬಳಕೆದಾರರು 'ನನ್ನ ಯೂಟ್ಯೂಬ್ ಖಾತೆಯನ್ನು ಬಳಸಲು ಪ್ರಾರಂಭಿಸಬೇಕಾ ಎಂಬ ಬಗ್ಗೆ ನಾನು ಇನ್ನೂಆಲೋಚಿಸುತ್ತಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು 'ಇದು ಅದ್ಭುತ' ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.