ಕಾವೇರಿ ನೀರಿಗಾಗಿ ಒಂದೇ ವಾರದಲ್ಲಿ ಎರಡು ದಿನ ಬಂದ್, ರಾಜ್ಯಕ್ಕೆ 4,000 ಕೋಟಿ ರೂ. ನಷ್ಟ!

Published : Sep 28, 2023, 02:08 PM IST
ಕಾವೇರಿ ನೀರಿಗಾಗಿ ಒಂದೇ ವಾರದಲ್ಲಿ ಎರಡು ದಿನ ಬಂದ್, ರಾಜ್ಯಕ್ಕೆ 4,000 ಕೋಟಿ ರೂ. ನಷ್ಟ!

ಸಾರಾಂಶ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿ ಬಿಡದಂತೆ ಮಂಗಳವಾರ ನಡೆದ ಹಾಗೂ ನಾಳೆ ನಡೆಯಲಿರುವ ಬಂದ್ ನಿಂದ ರಾಜ್ಯಕ್ಕೆ ಒಟ್ಟು 4 ಸಾವಿರ ಕೋಟಿ ರೂ. ನಷ್ಟವಾಗಲಿದೆ. ಬರೀ ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.   

ಬೆಂಗಳೂರು (ಸೆ.28): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿ ಬಿಡದಂತೆ ವಿವಿಧ ರೈತ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಮಂಗಳವಾರ (ಸೆ.26) ಬೆಂಗಳೂರು ಬಂದ್ ನಡೆಸಿದ್ದರು. ಇದೇ ವಿಚಾರವಾಗಿ ನಾಳೆ (ಸೆ.29) ಇಡೀ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ನಾಳೆ ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ. ಈ ಬಂದ್ ಗೆ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆಗೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಎಎಪಿ ಕೂಡ ಕೈಜೋಡಿಸಿವೆ. ಹೀಗಾಗಿ ನಾಳೆಯ ಬಂದ್ ಇನ್ನೊಮ್ಮೆ ವಿವಿಧ ಉದ್ಯಮ ವಲಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೋಟೆಲ್ ಉದ್ಯಮಿಗಳು ಸೇರಿದಂತೆ ವಿವಿಧ ವ್ಯಾಪಾರಿಗಳು ಈಗಾಗಲೇ ಒಂದು ದಿನದ ಬಂದ್ ನಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗ ನಾಳೆಯ ಬಂದ್ ಇನ್ನೊಮ್ಮೆ ಅವರ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕ ನೌಕರರ ಸಂಘಟನೆ ಹಾಗೂ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಅಂದಾಜಿನ ಪ್ರಕಾರ ಎರಡು ದಿನಗಳ ಬಂದ್ ನಿಂದ ರಾಜ್ಯಕ್ಕೆ ಸುಮಾರು  4,000 ಕೋಟಿ ರೂ. ನಷ್ಟವಾಗಲಿದೆ. ಇನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಮಾಹಿತಿ ಪ್ರಕಾರ ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂ. ನಷ್ಟವಾಗಿದೆ.  ಬೆಂಗಳೂರಿನ ಹೋಟೆಲ್ ಗಳಲ್ಲಿ ಸುಮಾರು 10 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.

'ಒಂದು ದಿನದ ಬಂದ್ ನಿಂದ ಬರೀ ವ್ಯಾಪಾರಿಗಳಿಂದ ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯಕ್ಕೆ 100 ಕೋಟಿ ನಷ್ಟವಾಗಿದೆ. ಹೀಗಿರುವಾಗ ಇನ್ನಿತರ ಆರ್ಥಿಕ ಚಟುವಟಿಕಾ ವಲಯಗಳಲ್ಲಿ ಇದರ ಹಲವು ಪಟ್ಟು ನಷ್ಟವಾಗಿರುತ್ತದೆ' ಎನ್ನುತ್ತಾರೆ ಎಫ್ ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ. ಈ ಬಂದ್ ಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ ಹಾಗೂ ಇದು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ನಿಟ್ಟಿನಲ್ಲಿನ ಬೆಳವಣಿಗೆಗೆ ತಡೆಯಾಗಿದೆ' ಎಂದು ಕೆಇಎ ಅಧ್ಯಕ್ಷ ಬಿ.ಸಿ. ಪ್ರಭಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾವೇರಿಗಾಗಿ ನಡೆದ ಬೆಂಗಳೂರು ಬಂದ್ ಯಶಸ್ವಿ: ಸರ್ಕಾರದ ವಿರುದ್ಧ ಮೊಳಗಿದ ಕಾವೇರಿ ಜ್ವಾಲಾಗ್ನಿ!

ಕೇವಲ ಒಂದು ದಿನದ ಬಂದ್ ನಿಂದ ಉಂಟಾದ ನಷ್ಟ ಭರಿಸಲು ಉದ್ಯಮ ಸಂಸ್ಥೆಗಳಿಗೆ ಕನಿಷ್ಠ ಒಂದು ವಾರವಾದ್ರೂ ಬೇಕು ಎನ್ನುತ್ತದೆ ಎಫ್ ಕೆಸಿಸಿಐ. 'ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟವಾಗಿದೆ. ನಮ್ಮ ಉದ್ಯಮದಲ್ಲಿ ಆದಾಯ ಹುಟ್ಟುವುದು ನಿತ್ಯದ ಆಧಾರದಲ್ಲಿ. ಇತರ ಉದ್ಯಮಗಳು ಮರುದಿನ ತಮ್ಮ ಕಾರ್ಯ ಮರುಪ್ರಾರಂಭಿಸುವ ಮೂಲಕ ನಷ್ಟ ಭರಿಸಬಹುದು. ಆದರೆ, ಹೋಟೆಲ್ ಗಳಿಗೆ ಇದು ಸಾಧ್ಯವಿಲ್ಲ' ಎನ್ನುತ್ತಾರೆ ಬೆಂಗಳೂರು ಹೋಟೆಲ್ ಗಳ ಸಂಘಟನೆ ಅಧ್ಯಕ್ಷ ಪಿ.ಸಿ.ರಾವ್.

ಇನ್ನು ಓಲಾ-ಊಬರ್ ಚಾಲಕರ ಸಂಘಟನೆಗಳು ಸೆ.26ರಂದು ನಡೆದ ಬೆಂಗಳೂರು ಬಂದ್ ಗೆ ಬೆಂಬಲ ಸೂಚಿಸಿರಲಿಲ್ಲ. ಆದರೆ, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ನಾಳೆಯ (ಸೆ.29) ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. 

ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

ಮಂಗಳವಾರ ನಡೆದಿರುವ ಬೆಂಗಳೂರು ಬಂದ್‌ನಿಂದಾಗಿ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಉತ್ಪಾದನೆಗಳು ಬಹುತೇಕ ಸ್ಥಗಿತಗೊಳ್ಳುವಂತಾಗಿತ್ತು. ಇದರಿಂದಾಗಿ 1,500 ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡು, ಸರ್ಕಾರಕ್ಕೆ 250 ಕೋಟಿ ರೂ. ನಷ್ಟವುಂಟಾಗುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ. ಒಂದೇ ವಾರದಲ್ಲಿ ಎರಡು ಬಂದ್ ಗಳಿಂದ ರಾಜ್ಯ ಸರ್ಕಾರಕ್ಕೆ 700 ಕೋಟಿ ರೂ.ಗೂ ಹೆಚ್ಚಿನ ನಷ್ಟವುಂಟಾಗುತ್ತಿದ್ದರೆ, ವ್ಯಾಪಾರಿ ವಲಯಕ್ಕೆ 5 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಆದಾಯ ಖೋತಾ ಆಗುತ್ತಿದೆ. ಒಟ್ಟಾರೆ ಎರಡು ದಿನಗಳ ಬಂದ್ ನಿಂದ ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಉದ್ಯಮಿಗಳ ತನಕ ಎಲ್ಲರಿಗೂ ನಷ್ಟದ ಬಿಸಿ ತಟ್ಟಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?