
ಬೆಂಗಳೂರು: ವಾರಾಂತ್ಯದ ರಜೆಗಳಿಗೆ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರದ ಬಿಸಿ ತೀವ್ರವಾಗಿದ್ದು, ಇದರ ಪರಿಣಾಮವಾಗಿ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಕೆಲಸದ ಅವಧಿ ಕಡಿತಗೊಳಿಸುವಂತೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ವಾರದಲ್ಲಿ ಆರು ದಿನಗಳ ಬದಲು ಐದು ದಿನಗಳ ಕೆಲಸದ ಅವಧಿಯನ್ನು ನಿಗದಿಪಡಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 27ರಂದು ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಮುಷ್ಕರ ನಡೆಯಲಿದೆ.
ಈ ಮುಷ್ಕರಕ್ಕೆ ಜೊತೆಗೆ ಈಗಾಗಲೇ ಇರುವ ರಜೆಗಳ ಕಾರಣ, ಜನವರಿ 24 ಶನಿವಾರ, 25 ಭಾನುವಾರ, 26ರಂದು ಗಣರಾಜ್ಯೋತ್ಸವದ ಸರ್ಕಾರಿ ರಜೆ ಹಾಗೂ 27ರಂದು ಬ್ಯಾಂಕ್ ಮುಷ್ಕರ ಹೀಗೆ ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.
ಈ ಅವಧಿಯಲ್ಲಿ ಶಾಖಾ ಮಟ್ಟದ ಎಲ್ಲ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿದ್ದು, ಹಣ ವಿತ್‌ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್, ಪಾಸ್‌ಬುಕ್ ಎಂಟ್ರಿ ಸೇರಿದಂತೆ ಪ್ರಮುಖ ವ್ಯವಹಾರಗಳು ವ್ಯತ್ಯಯಗೊಳ್ಳಲಿವೆ. ಇದರಿಂದ ಗ್ರಾಹಕರು ಹಾಗೂ ವ್ಯಾಪಾರ ವಲಯಕ್ಕೆ ಸಾಕಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ.
ಆದರೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಹಾಗೂ ಎಟಿಎಂ ಸೇವೆಗಳು ಸಾಮಾನ್ಯವಾಗಿ ಲಭ್ಯವಿರಲಿದ್ದು, ಡಿಜಿಟಲ್ ಮೂಲಕ ಹಣ ವರ್ಗಾವಣೆ ಹಾಗೂ ಪಾವತಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಬ್ಯಾಂಕ್ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನೂ, ಅಗತ್ಯವಿರುವ ನಗದು ವಿತ್‌ಡ್ರಾ, ಚೆಕ್ ಸಲ್ಲಿಕೆ ಅಥವಾ ಇತರೆ ಪ್ರಮುಖ ಬ್ಯಾಂಕ್ ಕಾರ್ಯಗಳನ್ನು ಗ್ರಾಹಕರು ಮುಂಚಿತವಾಗಿ, ವಾರಾಂತ್ಯಕ್ಕೆ ಮುನ್ನವೇ ಪೂರ್ಣಗೊಳಿಸಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ನಾಲ್ಕು ದಿನಗಳ ಬ್ಯಾಂಕ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಿ ತಮ್ಮ ಹಣಕಾಸು ವ್ಯವಹಾರಗಳನ್ನು ಯೋಜಿಸಿಕೊಂಡರೆ ಅನಾವಶ್ಯಕ ತೊಂದರೆ ತಪ್ಪಿಸಿಕೊಳ್ಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.