ವಾರಸುದಾರರಿಲ್ಲದೆ ಉಳಿದಿದೆ 32,450 ಕೋಟಿ ರೂ. ಮೊತ್ತ!

By Kannadaprabha NewsFirst Published Jul 2, 2019, 9:12 AM IST
Highlights

ಬ್ಯಾಂಕ್‌, ವಿಮಾ ಕಂಪನಿಗಳ ವಾರಸುದಾರರಿಲ್ಲದ ಖಾತೇಲಿ 32450 ಕೋಟಿ ರು ಬಾಕಿ!| ಒಂದೇ ವರ್ಷದಲ್ಲಿ ಬ್ಯಾಂಕ್‌ಗಳಲ್ಲಿ 3084 ಕೋಟಿ ರು. ಏರಿಕೆ| ವಿವಿಧ ಬ್ಯಾಂಕ್‌ಗಳಲ್ಲಿ 14578 ಕೋಟಿ ರು.| ಜೀವ ವಿಮಾ ಕಂಪನಿಗಳಲ್ಲಿ 16887 ಕೋಟಿ ರು.| ಇತರೆ ವಿಮಾ ಕಂಪನಿಗಳಲ್ಲಿ 989 ಕೋಟಿ ರು.

ನವದೆಹಲಿ[ಜು.02]: ದೇಶದ ವಿವಿಧ ಬ್ಯಾಂಕ್‌ ಮತ್ತು ವಿಮಾ ಕಂಪನಿಗಳಲ್ಲಿ ವಾರಸುದಾರರಿಲ್ಲದ ಖಾತೆಗಳಲ್ಲಿ ಭರ್ಜರಿ 32450 ಕೋಟಿ ರು. ಠೇವಣಿ ಬಾಕಿ ಉಳಿದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಕುರಿತು ಮಾಹಿತಿ ನೀಡಿದ್ದು, 2018ರ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಖಾತೆಗಳಲ್ಲಿ 14578 ಕೋಟಿ ರು. ಉಳಿದುಕೊಂಡಿತ್ತು. 2016ರಲ್ಲಿಈ ಪ್ರಮಾಣ 8928 ಕೋಟಿ ರು. ಮತ್ತು 2017ರಲ್ಲಿ 11,494 ಕೋಟಿ ರು. ಇತ್ತು ಎಂದು ತಿಳಿಸಿದ್ದಾರೆ. ಅಂದರೆ 2017ಕ್ಕೆ ಹೋಲಿಸಿದರೆ 2018ರಲ್ಲಿ ಒಂದೇ ವರ್ಷದಲ್ಲಿ ಇಂಥ ಖಾತೆಗಳಲ್ಲಿ ಬಾಕಿ ಉಳಿದ ಹಣದ ಸಂಖ್ಯೆ 3084 ಕೋಟಿ ರು.ನಷ್ಟುಏರಿಕೆಯಾಗಿದೆ. ಬ್ಯಾಂಕ್‌ಗಳ ಪೈಕಿ ಅತಿ ಹೆಚ್ಚು ಹಣ ಬಾಕಿ ಉಳಿದಿರುವುದು ಎಸ್‌ಬಿಐನಲ್ಲಿ (2156 ಕೋಟಿ ರು.)

ಇನ್ನು ಇದೇ ಅವಧಿಯಲ್ಲಿ ಜೀವ ವಿಮಾ ಕಂಪನಿಗಳಲ್ಲಿ ವಾರಸುದಾರರಿಲ್ಲದ ಖಾತೆಗಳಲ್ಲಿ 16887 ಕೋಟಿ ರು. ಮತ್ತು ಇತರೆ ವಿಮಾ ಕಂಪನಿಗಳಲ್ಲಿ 989 ಕೋಟಿ ರು. ಬಾಕಿ ಉಳಿದಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೀಗೆ 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ವಹಿವಾಟು ನಡೆಯದ ಖಾತೆಗಳಲ್ಲಿ ಹಣವನ್ನು ವಾರಸುದಾರರಿಲ್ಲದ ಖಾತೆ ಎಂದು ಪರಿಗಣಿಸಿ ಆ ಖಾತೆಯಲ್ಲಿನ ಠೇವಣಿ ಮತ್ತು ಅದಕ್ಕೆ ಬಂದ ಬಡ್ಡಿ ಹಣವನ್ನು ಖಾತೆದಾರರ ಶಿಕ್ಷಣ ಮತ್ತು ಅರಿವು ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ ಮುಂದೆ ಯಾವುದೇ ಅರ್ಹ ಗ್ರಾಹಕರು ತಮ್ಮ ಹಣವನ್ನು ಮರಳಿ ಕೋರಿದರೆ ಅವರಿಗೆ ಬಡ್ಡಿ ಸಮೇತ ಹಣ ಮರಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ವಿಮಾ ಖಾತೆಯಲ್ಲಿನ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.

click me!