
ಮುಂಬೈ(ಆ.5): ತಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರಿಂದ ವಿವಿಧ ಬ್ಯಾಂಕ್ ಗಳು 2017-18ರ ಸಾಲಿನಲ್ಲಿ 5,000 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿವೆ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಅತ್ಯಧಿಕ 2,433 ಕೋಟಿ ರೂ ದಂಡ ಸಂಗ್ರಹಿಸಿದೆ. ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಒಟ್ಟಾಗಿ ಶೇ 30ರಷ್ಟು ದಂಡ ಸಂಗ್ರಹಿಸಿವೆ. ಎಸ್‌ಬಿಐ ಸಂಗ್ರಹಿಸಿದ ದಂಡದ ಪ್ರಮಾಣ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ.
ಹಲವು ವರ್ಷಗಳ ಬಳಿಕ ಎಸ್‌ಬಿಐ ವಿತ್ತವರ್ಷ 2018ರಲ್ಲಿ ಈ ದಂಡ ವಿಧಿಸುವುದನ್ನು ಪುನರಾರಂಭಿಸಿತ್ತು. ಹಾಗಿದ್ದರೂ ಏಪ್ರಿಲ್‌ನಿಂದ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ಕಡಿಮೆ ಮಾಡಲಾಗಿದ್ದು, ದಂಡದ ಪ್ರಮಾಣವೂ ಕಡಿಮೆಯಾಗಿದೆ. ವಿತ್ತವರ್ಷ 2018ರ ಮೊದಲ 7 ತಿಂಗಳುಗಳಲ್ಲಿ ಎಸ್‌ಬಿಐ 1,700 ಕೋಟಿ ರೂ,ಗಳನ್ನು ದಂಡವಾಗಿ ಸಂಗ್ರಹಿಸಿತ್ತು.
ಉಳಿತಾಯ ಖಾತೆಗಳ ಮೇಲಿನ ದಂಡದ ಶೇಕಡಾವಾರು ಪ್ರಮಾಣ ಗಮನಿಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ಗಳು ಸಂಗ್ರಹಿಸಿದ ದಂಡದ ಮೊತ್ತ ಎಸ್‌ಬಿಐಗಿಂತ ಹೆಚ್ಚಾಗಿದೆ.
ಜನಧನ ಯೋಜನೆಯೆಡಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರ ಖಾತೆಗಳಲ್ಲೂ ಆರಂಭಿಕ ಉಳಿತಾಯದ ಮೊತ್ತವೇ 30.8 ಕೋಟಿ ರೂ.ಗಳಷ್ಟಿತ್ತು. ಹಾಗಿದ್ದರೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ವಸೂಲಾದ ದಂಡದ ಪ್ರಮಾಣ ಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.