
ನವದೆಹಲಿ(ಆ.4): ಭಾರತದಲ್ಲಿ ಉತ್ಪಾದಿಸಲಾದ ಡೇಟಾಗಳನ್ನು ದೇಶದೊಳಗೇ ಸಂಗ್ರಹಿಸಿ ಇಡಬೇಕು ಎಂದು ಕೇಂದ್ರ ಸರ್ಕಾರದ ಕ್ಲೌಡ್ ಕಂಪ್ಯೂಟಿಂಗ್ ನೀತಿಯ ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ. ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ ಜಾಗತಿಕ ತಂತ್ರಜ್ಞಾನ ದೈತ್ಯರಿಗೆ ಈ ಪ್ರಸ್ತಾವ ಭಾರೀ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಈ ನೀತಿ ಜಾರಿಗೆ ಬಂದರೆ, ಭಾರತದಲ್ಲಿರುವ ಡೇಟಾ ಸಂಗ್ರಹಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಈ ದೈತ್ಯ ಸಂಸ್ಥೆಗಳಿಗೆ ಬರಲಿದ್ದು, ಅವುಗಳು ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಹಲವು ಸ್ಟಾರ್ಟಪ್‌ಗಳಿಗೆ ಈ ನೀತಿ ವರದಾನವಾಗಲಿದೆ.
ಸರ್ಕಾರ ಡೇಟಾ ಸುರಕ್ಷತಾ ಕಾಯ್ದೆಯನ್ನು ಅಂತಿಮಗೊಳಿಸುತ್ತಿದ್ದು, ದೇಶದೊಳಗಿನ ಡೇಟಾವನ್ನು ಸ್ಥಳೀಯವಾಗಿಯೇ ಸಂಗ್ರಹಿಸಿಡುವ ಅನಿವಾರ್ಯತೆ ಸೃಷ್ಟಿಸಲಿದೆ. ಡಿಜಿಟಲ್ ಪಾವತಿಗಳು ಮತ್ತು ಇ-ಕಾಮರ್ಸ್ ವಲಯಗಳಿಗೂ ಸ್ಥಳೀಯವಾಗಿಯೇ ಡೇಟಾ ಸಂಗ್ರಹಿಸಿಡುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.
ಸ್ಥಳೀಯವಾಗಿಯೇ ಡೇಟಾ ಸಂಗ್ರಹವಾಗಿದ್ದರೆ, ಅಪರಾಧ ತನಿಖೆಗಳ ಸಂದರ್ಭದಲ್ಲಿ ಅಧಿಕಾರಿಗಳು ಸುಲಭವಾಗಿ ಅವುಗಳನ್ನು ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕ್ಲೌಡ್ ಸ್ಟೋರೆಜ್ ನೀತಿಯಲ್ಲಿ ಸರ್ಕಾರ ಬದಲಾವಣೆಗೆ ಮುಂದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.