ವಿಲೀನ ಖಂಡಿಸಿ ಸೆ.26ರಿಂದ 2 ದಿನ ಬ್ಯಾಂಕ್‌ ಸಂಘಟನೆಗಳ ಮುಷ್ಕರ!

By Web DeskFirst Published Sep 13, 2019, 10:00 AM IST
Highlights

ವಿಲೀನ ಖಂಡಿಸಿ ಸೆ.26ರಿಂದ 2 ದಿನ ಬ್ಯಾಂಕ್‌ ಸಂಘಟನೆಗಳ ಮುಷ್ಕರ| ಬೇಡಿಕೆ ಈಡೇರದೇ ಹೋದಲ್ಲಿ ನವೆಂಬರ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ| 10 ಬ್ಯಾಂಕ್‌ಗಳ ಮಹಾ ವಿಲೀನಕ್ಕೆ ಬ್ಯಾಂಕಿಂಗ್‌ ಸಂಘನಟೆಗಳ ವಿರೋಧ

ಚಂಡೀಗಢ[ಸೆ.13]: 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕ್‌ ರಚಿಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ವಿರುದ್ಧ ಬ್ಯಾಂಕಿಂಗ್‌ ಸಂಘಟನೆಗಳು ಸಿಡಿದೆದ್ದಿವೆ. ಸರ್ಕಾರದ ನಿರ್ಧಾರ ವಿರೋಧಿಸಿ ನಾಲ್ಕು ಬ್ಯಾಂಕಿಂಗ್‌ ಸಂಘಟನೆಗಳು ಸೆ.26​ ಮತ್ತು ಸೆ. 27ರಂದು ಮುಷ್ಕರಕ್ಕೆ ಕರೆ ನೀಡಿವೆ. ಅಲ್ಲದೆ, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸದೇ ಹೋದಲ್ಲಿ ನವೆಂಬರ್‌ 2ನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆಯನ್ನೂ ನೀಡಿವೆ.

ಒಬ್ಬರೂ ನೌಕರಿ ಕಳೆದುಕೊಳ್ಳಲ್ಲ: ವಿತ್ತ ಸಚಿವರ ಭರವಸೆ ಸುಳ್ಳಾಗಲ್ಲ?

10 ಬ್ಯಾಂಕ್‌ಗಳ ವಿಲೀನ ಮಾಡಿ 4 ಬ್ಯಾಂಕ್‌ ರಚಿಸುವ ನಿರ್ಧಾರ ಕೈಬಿಡಬೇಕು, ತಕ್ಷಣವೇ ವೇತನ ಪರಿಷ್ಕರಣೆ ಮಾಡಬೇಕು, ವಾರಕ್ಕೆ 5 ದಿನಗಳ ಕೆಲಸದ ನೀತಿ ಜಾರಿಗೆ ತರಬೇಕು, ಬ್ಯಾಂಕ್‌ಗಳಲ್ಲಿ ಪ್ರಸಕ್ತ ಜಾರಿಯಲ್ಲಿರುವ ತನಿಖಾ ಕಾರ್ಯ ವಿಧಾನದಲ್ಲಿ ಬಾಹ್ಯ ಸಂಸ್ಥೆಗಳ ಹಸ್ತಕ್ಷೇಪ ನಿಲ್ಲಿಸಬೇಕು, ನಿವೃತ್ತ ಸಿಬ್ಬಂದಿ ದೂರು ಇತ್ಯರ್ಥಪಡಿಸಬೇಕು, ಅಗತ್ಯ ನೇಮಕಾತಿ ನಡೆಸಬೇಕು, ಎನ್‌ಪಿಎಸ್‌ ರದ್ದು ಮಾಡಬೇಕು, ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕ ರದ್ದು ಮಾಡಬೇಕು, ಕಾರ್ಯನಿರ್ವಹಣೆ ತೃಪ್ತಿಕರ ಇಲ್ಲ ಎಂಬ ಅನುಮಾನದ ಮೇಲೆ ವೃಥಾ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಸಂಘಟನೆಗಳು ಒತ್ತಾಯಿಸಿವೆ.

ಕಣ್ಮರೆಯಾಗುತ್ತಿವೆ ಕರುನಾಡ ದೈತ್ಯ ಬ್ಯಾಂಕುಗಳು; ಕರಾವಳಿ ಆಸ್ಮಿತೆಗೆ ಪೆಟ್ಟು?

ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸರ್ಸ್ ಕಾನ್ಫೆಡರೇಷನ್‌ (ಎಐಬಿಒಸಿ), ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸ​ರ್‍ಸ್ ಅಸೋಸಿಯೇಷನ್‌ (ಎಐಬಿಒಎ), ಇಂಡಿಯನ್‌ ನ್ಯಾಷನಲ್‌ ಬ್ಯಾಂಕ್‌ ಆಫೀಸ​ರ್‍ಸ್ ಕಾಂಗ್ರೆಸ್‌ (ಐಎನ್‌ಬಿಒಸಿ), ನ್ಯಾಷನಲ್‌ ಆರ್ಗನೈಸೇಷನ್‌ ಆಫ್‌ ಬ್ಯಾಂಕ್‌ ಆಫೀಸರ್ಸ್ಸ್ (ಎನ್‌ಒಬಿಒ) ಸಂಘಟನೆಗಳು ಈ ಮುಷ್ಕರಕ್ಕೆ ಕರೆ ಕೊಟ್ಟಿವೆ.

ಕಳೆದ ಆ.30ರಂದು ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳನ್ನು ವಿಲೀನ ಮಾಡಿ 4 ದೊಡ್ಡ ಬ್ಯಾಂಕ್‌ ರಚನೆಯ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. ಇದು ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಲೀನ ಪ್ರಕ್ರಿಯೆಯಾಗಿತ್ತು.

click me!