ಆರ್ಥಿಕ ಹಿಂಜರಿಕೆ ಮೂಲ ಎಲ್ಲಿದೆ? ಪರಿಹಾರವೇನು?

By Web DeskFirst Published Sep 12, 2019, 1:58 PM IST
Highlights

ಅಗತ್ಯ ಅಥವಾ ಬೇಡಿಕೆಗಿಂತ ಮಿತಿಮೀರಿ ಮತ್ತು ಕೊಳ್ಳುವ ಸಾಮರ್ಥ್ಯವಿಲ್ಲದ ಕಾಲದಲ್ಲೂ ವಾಹನ ಮುಂತಾದ ಐಷಾರಾಮಿ ವಸ್ತುಗಳನ್ನು ಅತಿಯಾಗಿ ಉತ್ಪಾದಿಸಿದರೆ ಆರ್ಥಿಕ ಸಂಕಟ ಎದುರಾಗದೆ ಮತ್ತೇನು ಆಗುತ್ತದೆ?

ಡಾ| ಮಲ್ಲಿಕಾರ್ಜುನ ಗುಮ್ಮಗೋಳ

ಧಾರವಾಡ[ಸೆ.12]: ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತು ಭಾರತದ ಕೃಷಿ ಸಂಸ್ಕೃತಿಯ ಪ್ರಾತಿನಿಧಿಕ ವ್ಯಾಖ್ಯೆ. ಕೈಗಾರಿಕೆಗಳು ಅನ್ನವನ್ನು ಉತ್ಪಾದಿಸಲಾರವು. ಅನ್ನಕ್ಕಾಗಿ ನಾವು ಕೃಷಿಯನ್ನೇ ಅವಲಂಬಿಸಬೇಕು. ನಾಗರಿಕತೆಗೆ ಕೈಗಾರಿಕೆಗಳು, ಯಂತ್ರೋಪಕರಣಗಳು ಬೇಕು. ಆದರೆ ಅವುಗಳೇ ಬದುಕಲ್ಲ. ಆದರೆ ಯಂತ್ರಗಳನ್ನೇ ಬದುಕಾಗಿಸಿಕೊಂಡ ನಮ್ಮ ನಗರಗಳು ಅನ್ನ ನೀಡುವ ಹಳ್ಳಿಗಳನ್ನು ಕೊಂಪೆಗಳನ್ನಾಗಿ ಮಾಡಿವೆ. ಉದ್ಯೋಗ, ಅಭಿವೃದ್ಧಿ, ಪ್ರಗತಿ ಎಂಬ ಧಾವಂತದಲ್ಲಿ ಕೈಗಾರಿಕೆಗಳು ಹೆಚ್ಚಾಗಿ, ಕೈಗಾರಿಕಾ ಉತ್ಪಾದನೆಗಳು ಹೆಚ್ಚಾಗಿ, ಜನರಲ್ಲಿ ಅವುಗಳನ್ನು ಕೊಳ್ಳುವ ತಾಕತ್ತು ಕಡಿಮೆಯಾಗಿ, ತಯಾರಿಸಿದ ಸರಕು ಬಿಕರಿಯಾಗದೆ ಕೈಗಾರಿಕೋದ್ಯಮ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದೆ.

ಆರ್ಥಿಕತೆ ನಿಜಕ್ಕೂ ಕುಸಿಯುತ್ತಿದೆಯಾ?: ಭರವಸೆಯ ಬೆಳಕೊಂದು ಕಾಣುತ್ತಿದೆಯಾ?

ಮಧ್ಯಮ ವರ್ಗದವರು ಕಾರು ಮಾಲಿಕರಾಗುವ ಅವಕಾಶ ಕಲ್ಪಿಸಿದ ಮಾರುತಿ ಉದ್ಯೋಗ ಲಿಮಿಟೆಡ್‌ ಈಗ ತನ್ನ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಉದ್ಯೋಗಿಗಳನ್ನು ಹೊರಕ್ಕೆ ಕಳಿಸುತ್ತಿದೆ. ಇದು ಕೇವಲ ಇದೊಂದೇ ಉದ್ಯಮದ ಕತೆಯಲ್ಲ. ಗಾರ್ಮೆಂಟ್‌ ಉದ್ಯಮ ಸೇರಿದಂತೆ ಹಲವಾರು ಕೈಗಾರಿಕೋದ್ಯಮಗಳು ಉದ್ಯೋಗ ಕಡಿತ ಮಾಡುತ್ತಿವೆ. ಅಗತ್ಯ ಅಥವಾ ಬೇಡಿಕೆಗಿಂತ ಮಿತಿಮೀರಿ ಮತ್ತು ಕೊಳ್ಳುವ ಸಾಮರ್ಥ್ಯವಿಲ್ಲದ ಕಾಲದಲ್ಲೂ ವಾಹನ ಮುಂತಾದ ಐಷಾರಾಮಿ ವಸ್ತುಗಳನ್ನು ಉತ್ಪಾದಿಸಿದರೆ ಆರ್ಥಿಕ ಸಂಕಟ ಎದುರಾಗದೆ ಮತ್ತೇನು ಆಗುತ್ತದೆ?

ಕೃಷಿ ಪೂರಕ ಉದ್ಯಮ ಬೆಳೆಯಬೇಕು

ಕೃಷಿಗೆ ಅಂಟಿದ ಬರ, ನೆರೆ, ಬೆಳೆಹಾನಿ, ಬೆಲೆ ಕುಸಿತ, ಬಡತನ ಎಂಬ ಜಾಡ್ಯಗಳಲ್ಲಿ ಸಿಕ್ಕು ತಮ್ಮ ಮಕ್ಕಳು ನರಕಯಾತನೆ ಅನುಭವಿಸಬಾರದು ಎಂದು ರೈತರು ಸಾಲಸೋಲ ಮಾಡಿ ತಮ್ಮ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಕೊಡಿಸಲು ಹೆಣಗುತ್ತಾರೆ. ಹೀಗೆ ಶಿಕ್ಷಣ ಪಡೆದ ಯುವ ಜನರು ಶಹರದ ಯುವಕರೊಂದಿಗೆ ಉದ್ಯೋಗಕ್ಕಾಗಿ ಪೈಪೋಟಿಗೆ ಬೀಳಬೇಕಾಗುತ್ತದೆ. ಒಂದು ಕೆಲಸಕ್ಕೆ ಸಾವಿರಾರು, ಲಕ್ಷಾಂತರ ಅಭ್ಯರ್ಥಿಗಳು ಸಾಲುಗಟ್ಟಿ ಆಸೆ ಕಂಗಳಿಂದ ಕಾಯುತ್ತಾರೆ.

ಸಿಂಗ್ ಮಾತು ಕೇಳಿ: ಮೋದಿಗೆ ಅಡ್ವೈಸ್ ಮಾಡೋದು ಶಿವಸೇನೆ ಚಾಳಿ!

ಎಷ್ಟು ಜನರಿಗೆ ಕೆಲಸ ಕೊಡಲು ಸಾಧ್ಯ? ಆದ್ದರಿಂದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೋಳಿ, ಕುರಿ ಸಾಕಣೆ, ಕೃಷಿ ಕರಕುಶಲ ಉತ್ಪನ್ನಗಳ ತಯಾರಿಕೆ ಮುಂತಾದ ವೃತ್ತಿಗಳಿಗೆ ಪೂರಕವಾದ ಉದ್ಯಮಗಳು ಬೆಳೆಯಬೇಕು. ಉದ್ಯೋಗ ಅರಸಿ ವಲಸೆ ಹೋಗುವ ಮತ್ತು ವಲಸೆ ಹೋಗಿ ವಸತಿ, ನೀರು, ಶಿಕ್ಷಣ, ಆರೋಗ್ಯ ಮುಂತಾದ ಮೂಲಭೂತ ಸೌಲಭ್ಯಗಳ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನರಳುವ ಸನ್ನಿವೇಶ ಇದರಿಂದ ನಿವಾರಣೆಯಾಗುತ್ತದೆ. ಉದ್ಯೋಗ, ವಲಸೆÜ ಕಾರಣದಿಂದಾಗಿ ಶಹರದ ಬದುಕು ನರಕಯಾತನೆಯಾಗುವುದು ತಪ್ಪುತ್ತದೆ.

ಕೃಷಿಗೆ ಮರಳುವ ಸಮಯವಿದು

ಈ ದೇಶದಲ್ಲಿ ಜನಸಂಖ್ಯೆ ಬೆಳವಣಿಗೆಗೂ ಕಡಿವಾಣವಿಲ್ಲ. ವಾಹನ ಉತ್ಪಾದನೆ ಮತ್ತು ಅವುಗಳನ್ನು ಹೊಂದುವುದಕ್ಕೂ ಮಿತಿಯಿಲ್ಲ. ಅತಿಯಾದರೆ ಯಾವ ಆಪತ್ತು ಎದುರಾಗುತ್ತದೋ ಅದು ಇಂದು ಆಗುತ್ತಿದೆ. ಉದ್ಯಮಗಳ ಆರ್ಥಿಕ ಹಿನ್ನಡೆ ತಪ್ಪಿಸುವಲ್ಲಿ ಕರ ವಿನಾಯಿತಿ, ಆರ್ಥಿಕ ನೆರವು ಮುಂತಾದವುಗಳನ್ನು ಕೇಂದ್ರ ಸರ್ಕಾರ ಘೋಷಿಸುತ್ತಿದೆ. ಆದರೆ ಕೊನೆಯ ಹಂತಕ್ಕೆ ಬಂದು ನಿಂತ ಯಾಂತ್ರಿಕ ಬದುಕನ್ನು ಇನ್ನೆಷ್ಟುಮುಂದಕ್ಕೆ ನೂಕಿಕೊಂಡು ಹೋಗಲು ಸಾಧ್ಯ? ಒಂದಲ್ಲಾ ಒಂದು ದಿನ ಮರಳಿ ಕೃಷಿಗೆ ತೆರಳುವ ದಿನ ಬಂದೇ ಬರುತ್ತವೆ.

ನಮ್ಮ ದೇಶದ ಕೃಷಿ ವರ್ಷದಲ್ಲಿ ಕೇವಲ 200-240 ದಿನಗಳ ದುಡಿಮೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಇಂತಹ ವ್ಯವಸಾಯವನ್ನು ಅವಲಂಬಿಸಿ ಶೇ.40ರಷ್ಟುಕೂಲಿಕಾರರು, ಶೇ.45ರಷ್ಟುಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಶೇ.7.5ರಷ್ಟುಕೃಷಿ ಅವಲಂಬಿತ ಕಸುಬುಗಳಲ್ಲಿ ತೊಡಗಿಕೊಂಡವರು ಬದುಕುತ್ತಿದ್ದಾರೆ. ಕೃಷಿ ಹಿನ್ನಡೆ ಮತ್ತು ಹಳ್ಳಿಗಳಲ್ಲಿ ಉದ್ಯೋಗದ ಕೊರತೆಯಿಂದಾಗಿ ಉತ್ತಮ ಬದುಕನ್ನು ಅರಸಿ ಹಳ್ಳಿಗಳಿಂದ ದೊಡ್ಡ ಸಂಖ್ಯೆಯಲ್ಲಿ ಯುವಜನರು ಶಹರಗಳಿಗೆ ವಲಸೆ ಹೋಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 2015ಕ್ಕೆ 40 ಕೋಟಿ ರೈತರು ಉದ್ಯೋಗ ಅರಸಿ ಶಹರಗಳಿಗೆ ವಲಸೆ ಹೋಗಿದ್ದಾರೆ. ಇದರಿಂದಾಗಿ 2030ರ ಹೊತ್ತಿಗೆ ನಗರದ ಜನಸಂಖ್ಯೆ ದೇಶದ ಶೇ.70ರಷ್ಟುಹಾಗೂ ಗ್ರಾಮವಾಸಿಗಳ ಸಂಖ್ಯೆ ಶೇ.30ರಷ್ಟುಆಗಲಿದೆ.

ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

ಅಲ್ಲೂ ಬದುಕು ಕಟ್ಟಿಕೊಳ್ಳಬಹುದು

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಾಕಷ್ಟುಅವಕಾಶಗಳಿವೆ. ಸಹಜ ಮತ್ತು ಸಾವಯವ ಕೃಷಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಆದರೆ ಕೃಷಿ ಪದ್ಧತಿ ಇಂದು ತುಂಬಾ ಬದಲಾಗಿದೆ. ರೆಂಟೆ, ಕುಂಟೆ, ಬಿತ್ತನೆ ಮುಂತಾದ ಕೆಲಸಗಳಿಗೆ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ಮಾನವ ಶಕ್ತಿಯ ಕೈಗೆ ಸಿಗಬೇಕಾದ ಕೆಲಸವನ್ನು ಯಂತ್ರಗಳು ಕಸಿದುಕೊಂಡಿವೆ. ಯಂತ್ರಗಳ ಖರೀದಿ ಮತ್ತು ಅವುಗಳ ಇಂಧನಕ್ಕಾಗಿಯೇ ನಮ್ಮ ದುಡಿಮೆ ಖರ್ಚಾಗುತ್ತದೆ. ಜಾನುವಾರುಗಳ ಉಳುಮೆ ಇಲ್ಲದೆ, ಕೊಟ್ಟಿಗೆ ಗೊಬ್ಬರ ಇಲ್ಲದೆ ಫಲವತ್ತತೆ ಕುಂಠಿತವಾಗಿದೆ.

ಕಳೆ ತೆಗೆದು ಅದನ್ನೇ ಗೊಬ್ಬರವಾಗಿ ಪರಿವರ್ತಿಸಿ ಹೊಲದಲ್ಲಿ ಸಮೃದ್ಧ ಬೆಳೆ ತೆಗೆಯುವ ಪದ್ಧತಿ ಮಾಯವಾಗಿದೆ. ಕಳೆನಾಶಕ ಸಿಂಪಡಣೆಯಿಂದ ಕಳೆಯೇನೋ ಹೋಗುತ್ತದೆ. ಆದರೆ ಭೂಸಾರ ಹಾಳಾಗುತ್ತದೆ. ರಸಗೊಬ್ಬರ, ಕ್ರಿಮಿನಾಶಕ ಬಳಕೆಯೂ ಕೃಷಿಯನ್ನು ಬಗ್ಗಡ ಮಾಡುತ್ತಿದೆ. ದೈಹಿಕ ಶ್ರಮ, ದೇಸಿ ವಸ್ತುಗಳ ಬಳಕೆ ಮುಂತಾದವುಗಳ ಅಗತ್ಯ ಮತ್ತು ಅನಿವಾರ್ಯದ ಬಗ್ಗೆ ಮಹಾತ್ಮ ಗಾಂಧೀಜಿ ಒತ್ತಿ ಹೇಳುತ್ತಿದ್ದರು. ಆದರೆ ಅವರ ಶಿಷ್ಯ ನೆಹರು ಕೈಗಾರಿಕಾ ಕ್ರಾಂತಿಯ ಕನಸನ್ನು ಬಿತ್ತಿದರು. ಈ ಕೈಗಾರಿಕಾ ಕ್ರಾಂತಿ ಸುಸ್ಥಿರ ಬದುಕಿನ ಅಡಿಪಾಯವನ್ನು ಅಲುಗಾಡಿಸುತ್ತಿದೆ.

ಮತ್ತೊಂದೆಡೆ ಹಸಿರು ಕ್ರಾಂತಿಯ ಫಲವಾಗಿ ಹೆಚ್ಚಾದ ಕೃಷಿ ಉತ್ಪಾದನೆಗಳನ್ನು ಸಂಗ್ರಹಿಸಲು ಸೂಕ್ತ ಸ್ಥಳವಿಲ್ಲದೆ ಹಾಗೂ ಇಲಿ, ಹೆಗ್ಗಣ, ಕ್ರಿಮಿ ಕೀಟಗಳ ಬಾಧೆಯಿಂದ ಶೇ.20ರಿಂದ 30ರಷ್ಟುಆಹಾರ ಧಾನ್ಯ ಹಾಳಾಗಿ ಹೋಗುತ್ತಿದೆ. ಇಂತಹ ಹೆಚ್ಚುವರಿ ಆಹಾರೋತ್ಪನ್ನಗಳನ್ನು ಸಂಸ್ಕರಿಸುವ, ಸಂಗ್ರಹಿಸುವ, ಹೊಸ ಹೊಸ ಉಪ ಉತ್ಪನ್ನಗಳನ್ನು ತಯಾರಿಸುವ, ರಫ್ತು ಮಾಡುವ ಅವಕಾಶಗಳನ್ನು ಸೃಷ್ಟಿಸಿದರೆ ಕೃಷಿಗೆ ಶುಕ್ರದೆಸೆ ಬರುತ್ತದೆ. ರೈತನಾಗುವ ಪುಣ್ಯ ಕೆಲಸದ ಕಡೆಗೆ ನಿರುದ್ಯೋಗಿಗಳು ಹೊರಳುತ್ತಾರೆ. ಕೈ ಕೆಸರಾಗುವ ಮೂಲಕ ಬಾಯಿ ಮೊಸರಾಗುವುದಷ್ಟೆಅಲ್ಲ ದೈಹಿಕ ಶ್ರಮ, ಚಟುವಟಿಕೆ ಹೆಚ್ಚಾಗಿ ಆರೋಗ್ಯ ಭಾಗ್ಯ ಲಭಿಸುತ್ತದೆ. ಕೃಷಿ ಉತ್ಪನ್ನಗಳ ಆಮದು ಮತ್ತು ರಪ್ತು ನೀತಿ ರೈತರ ಹಿತಕ್ಕಿಂತ ಮಧ್ಯವರ್ತಿಗಳ ಮತ್ತು ಸರ್ಕಾರದ ಹಿತಕ್ಕೆ ಅನುಗುಣವಾಗಿ ನಡೆಯುತ್ತಿರುವುದು ವಿಪರ್ಯಾಸ.

click me!