
ನವದೆಹಲಿ (ನ.18): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಒಕ್ಕೂಟ ನಾಳೆ (ನ.19) ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ವಿವಿಧ ಬ್ಯಾಂಕ್ ಗಳ ಅನೇಕ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿರುವ ಕಾರಣ ಬ್ಯಾಂಕಿನ ದೈನಂದಿನ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಅಧಿಕಾರಿಗಳ ಮಟ್ಟದ ಸಿಬ್ಬಂದಿ ಈ ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ನಗದು ಠೇವಣಿಯಿಡುವುದು, ಚೆಕ್ ಕ್ಲಿಯರೆನ್ಸ್, ಎಟಿಎಂ, ವಿತ್ ಡ್ರಾ ಸೇರಿದಂತೆ ಅನೇಕ ಸೇವೆಗಳಲ್ಲಿ ತೊಂದರೆಯುಂಟಾಗಲಿದೆ. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮುಷ್ಕರದ ಸಂಬಂಧ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಅಲ್ಲದೆ, ಕೆಲವು ಬ್ಯಾಂಕ್ ಗಳು ನಾಳೆ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ಸಂದೇಶಗಳನ್ನು ಕೂಡ ಕಳುಹಿಸಿವೆ. ನಾಳೆ ಏನಾದ್ರೂ ಬ್ಯಾಂಕಿಗೆ ಹೋಗಿ ಮಾಡುವ ಕೆಲಸವಿದ್ರೆ ಅದನ್ನು ಸೋಮವಾರಕ್ಕೆ ಮುಂದೂಡುವುದು ಉತ್ತಮ. ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವುದು, ಬ್ಯಾಂಕಿಂಗ್ ಕಾರ್ಯಗಳನ್ನು ಹೊರಗುತ್ತಿಗೆ ನೀಡುವುದು ಹಾಗೂ ಕೆಲವು ಬ್ಯಾಂಕ್ ಗಳಲ್ಲಿ ವೇತನ ಪರಿಷ್ಕರಣೆಯನ್ನು ಅನುಷ್ಠಾನಗೊಳಿಸುವಲ್ಲಿನ ವಿಳಂಬವನ್ನು ಖಂಡಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಮುಷ್ಕರಕ್ಕೆ ಆಗ್ರಹಿಸಿವೆ.
'ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕುಗಳಿಗೆ ಮುಷ್ಕರ (Strike) ನಡೆಸುವ ಸಂಬಂಧ ನೋಟಿಸ್ ನೀಡಿದ್ದಾರೆ. ಸದಸ್ಯರು ತಮ್ಮ ಬೇಡಿಕೆಗಳಿಗೆ ಬೆಂಬಲವಾಗಿ ನವೆಂಬರ್ 19ರಂದು ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದು ಸಂಘಟನೆ ಮಾಹಿತಿ ನೀಡಿದೆ' ಎಂದು ನ.7ರಂದು ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. ನವೆಂಬರ್ 19 ಮೂರನೇ ಶನಿವಾರವಾಗಿರುವ ಕಾರಣ ಆ ದಿನ ಬ್ಯಾಂಕುಗಳಿಗೆ ರಜೆಯಿರೋದಿಲ್ಲ. ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕುಗಳಿಗೆ ರಜೆಯಿರುತ್ತದೆ. ಒಂದು ಮತ್ತು ಮೂರನೇ ಶನಿವಾರ ಬ್ಯಾಂಕು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಲವರು ಶನಿವಾರ ತಮಗೆ ರಜೆಯಿದೆ ಎಂಬ ಕಾರಣಕ್ಕೆ ನ.1ರಂದು ಬ್ಯಾಂಕಿಗೆ ಹೋಗುವ ಕೆಲಸವಿಟ್ಟುಕೊಂಡಿದ್ರೆ ಮುಂದೂಡೋದು ಒಳಿತು. ಆದರೆ, ಆನ್ ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ತೊಂದರೆಯುಂಟಾಗುವುದಿಲ್ಲ.
ಮುಂದಿನ ವರ್ಷ ಬೆಂಗಳೂರು ವಿಮಾನ ನಿಲ್ದಾಣದ ಐಪಿಒ; 30,000 ಕೋಟಿ ರೂ. ಮೌಲ್ಯದ ಷೇರು ಮಾರಾಟಕ್ಕೆ ನಿರ್ಧಾರ?
ಸಾರ್ವಜನಿಕ ವಲಯದ ಅನೇಕ ಬ್ಯಾಂಕ್ ಗಳಲ್ಲಿ ಅನೇಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಇದ್ರಿಂದ ಗ್ರಾಹಕರ ಖಾಸಗಿತನ ಹಾಗೂ ಹಣಕ್ಕೆ ಅಪಾಯವಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ಗಳು ಅನೇಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಕೆಲವು ಬ್ಯಾಂಕ್ ಗಳು 'ಕೈಗಾರಿಕಾ ವಿವಾದ (ತಿದ್ದುಪಡಿ) ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ನೌಕರರನ್ನು ಬಲವಂತವಾಗಿ ವರ್ಗಾವಣೆ ಮಾಡುತ್ತಿದೆ ಎಂದು ಅವರು ದೂರಿದ್ದಾರೆ. ಇತ್ತೀಚೆಗೆ ಬ್ಯಾಂಕ್ ಉದ್ಯೋಗಿಗಳ ಮೇಲೆ ಕೂಡ ದಾಳಿಗಳು ಹೆಚ್ಚುತ್ತಿವೆ. ಇದನ್ನು ಖಂಡಿಸಲು ಕೂಡ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಎಟಿಎಂ ಸೇವೆಯಲ್ಲೂ ವ್ಯತ್ಯಯ ಸಾಧ್ಯತೆ
ಇನ್ನು ನಿರಂತರ ಎರಡು ದಿನ ಬ್ಯಾಂಕಿಗೆ (Bank) ರಜೆಯಿರುವ (Holiday) ಕಾರಣ ಈ ಅವಧಿಯಲ್ಲಿ ಬ್ಯಾಂಕುಗಳ ಎಟಿಎಂನಲ್ಲಿ (ATM) ಹಣದ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ. ಇದ್ರಿಂದ ಎಟಿಎಂ ಬಳಕೆದಾರರು ನಗದು (Cash) ಸಿಗದೆ ತೊಂದರೆ ಅನುಭವಿಸಬೇಕಾದ ಸಾಧ್ಯತೆಯೂ ಇದೆ.
ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ
ಬ್ಯಾಂಕ್ ಮುಷ್ಕರದಲ್ಲಿ ಖಾಸಗಿ ಬ್ಯಾಂಕುಗಳು ಭಾಗವಹಿಸುವುದಿಲ್ಲ. ಹೀಗಾಗಿ ನಾಳೆ ಖಾಸಗಿ ಬ್ಯಾಂಕ್ ಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.