ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ
ಎಟಿಎಂನಿಂದ ಹರಿದ, ಹಾಳಾದ ಇಲ್ಲವೇ ಕೊಳಕಾಗಿರುವ ನೋಟು ಸಿಕ್ಕಿದ ತಕ್ಷಣ ಟೆನ್ಷನ್ ಆಗೋದು ಸಹಜ. ಆದ್ರೆ, ಈ ನೋಟುಗಳನ್ನು ಬ್ಯಾಂಕುಗಳಲ್ಲಿ ಹೊಸ ನೋಟುಗಳಿಗೆ ವಿನಿಮಯ ಮಾಡಲು ಸಾಧ್ಯವಿದೆ. ಆದರೆ, ಅದಕ್ಕೆ ಕೆಲವೊಂದು ಷರತ್ತುಗಳು ಹಾಗೂ ನಿಯಮಗಳಿವೆ.
Business Desk: ಕರೆನ್ಸಿ ನೋಟಿನ ಮೇಲೆ ಯಾರದ್ದೋ ಹೆಸರು ಅಥವಾ ಚಿತ್ರ ಇಲ್ಲವೆ ಇನ್ನೇನೋ ಬರೆದಿರುತ್ತಾರೆ. ಇನ್ನೂ ಕೆಲವೊಮ್ಮೆ ಕರೆನ್ಸಿ ನೋಟುಗಳು ಹಾಳಾದ ಸ್ಥಿತಿಯಲ್ಲಿ ನಮಗೆ ಸಿಗುತ್ತವೆ. ಕೆಲವೊಮ್ಮೆ ಎಟಿಎಂನಿಂದ ಕೂಡ ನಮಗೆ ಇಂಥ ನೋಟುಗಳು ಸಿಗಬಹುದು. ಇಂಥ ನೋಟುಗಳನ್ನು ಸಾಮಾನ್ಯವಾಗಿ ಸ್ವೀಕರಿಸಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಅದರಲ್ಲೂ ನೋಟು ಸ್ವಲ್ಪ ಹರಿದ ಸ್ಥಿತಿಯಲ್ಲಿದ್ರಂತೂ ಯಾರೂ ತೆಗೆದುಕೊಳ್ಳುವುದಿಲ್ಲ. ಯಾರೋ ರಸ್ತೆಬದಿ ವ್ಯಾಪಾರಿಗಳೋ ಅಥವಾ ಬ್ಯಾಂಕ್ ಶಾಖೆಯಿಂದಲೂ ಅಥವಾ ಇನ್ಯಾರೋ ವ್ಯಕ್ತಿಯಿಂದ ಇಂಥ ನೋಟು ಸಿಕ್ಕಿದ್ರೆ ತಕ್ಷಣವೇ ಹಿಂತಿರುಗಿಸಬಹುದು. ಆದರೆ, ಎಟಿಎಂ ಯಂತ್ರದಿಂದಲೇ ಇಂಥ ನೋಟು ಹೊರಬಂದ್ರೆ ಆಗ ಏನ್ ಮಾಡೋದು? ಎಟಿಎಂ ಮಷಿನ್ ಗೆ ಹಿಂತಿರುಗಿಸಲು ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಏನ್ ಮಾಡ್ಬೇಕು ಎಂಬುದೇ ಬಹುತೇಕರಿಗೆ ತಿಳಿಯೋದಿಲ್ಲ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಾರ ಇಂಥ ಹಾಳಾದ ಕರೆನ್ಸಿ ನೋಟುಗಳನ್ನು ಕೆಲವೊಂದು ಪ್ರಕರಣಗಳಲ್ಲಿ ಹಿಂತಿರುಗಿಸಿ ಹೊಸ ನೋಟುಗಳನ್ನು ಪಡೆಯಬಹುದು. ಅದು ಹೇಗೆ? ಇಂಥ ಹಾಳಾದ ಕರೆನ್ಸಿ ನೋಟುಗಳನ್ನು ಎಲ್ಲಿ ಹಿಂತಿರುಗಿಸಬಹುದು? ಇಲ್ಲಿದೆ ಮಾಹಿತಿ.
ವಿನಿಮಯ ಹೇಗೆ?
ಕೊಳಕಾಗಿರುವ, ವಿರೂಪಗೊಂಡ ಅಥವಾ ಹಾನಿಯಾಗಿರುವ ನೋಟುಗಳನ್ನು ಯಾವುದೇ ಸಾರ್ವಜನಿಕ ವಲಯದ ಬ್ಯಾಂಕಿನ ಶಾಖೆಗಳಲ್ಲಿ ನೀಡಿ ಬದಲಿಗೆ ಹೊಸ ನೋಟುಗಳನ್ನು ಪಡೆಯಬಹುದು. ಇನ್ನು ಹಾಳಾಗಿರುವ ನೋಟುಗಳನ್ನು ಖಾಸಗಿ ವಲಯದ ಬ್ಯಾಂಕಿನ ಯಾವುದೇ ಕರೆನ್ಸಿ ಚೆಸ್ಟ್ ಶಾಖೆಯಲ್ಲಿ ( currency chest branch) ಹೊಸ ನೋಟಿಗೆ ವಿನಿಮಯ ಮಾಡಿಕೊಳ್ಳಬಹುದು. ಇನ್ನು ಆರ್ ಬಿಐ ವಿತರಣಾ ಕಚೇರಿಯಲ್ಲಿ (issue office) ಕೂಡ ಹಾನಿಯಾಗಿರುವ ನೋಟು ನೀಡಿ ಹೊಸ ನೋಟು ಪಡೆಯಬಹುದು. ಹಾನಿ ಅಥವಾ ಕೊಳಕಾಗಿರುವ ನೋಟುಗಳನ್ನು ವಿನಿಮಯ ಮಾಡಲು ಬ್ಯಾಂಕ್ ಶಾಖೆಯಲ್ಲಿ ನೀವು ಯಾವುದೇ ಅರ್ಜಿ ತುಂಬಿಸಬೇಕಾದ ಅಗತ್ಯವಿಲ್ಲ.
ಈ ಐದು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ ಸಿಗುತ್ತೆ ಐದು ಲಕ್ಷ ರೂ. ವೈಯಕ್ತಿಕ ಸಾಲ!
ಟಿಎಲ್ಆರ್ ಕವರ್ಸ್ ವ್ಯವಸ್ಥೆ
ತುಂಡಾಗಿರುವ ನೋಟುಗಳ ವಿನಿಮಯಕ್ಕೆ ಆರ್ ಬಿಐ ಟ್ರಿಪಲ್ ಲಾಕ್ ರೆಸೆಪ್ಟಕಲ್ (TLR) ಕವರ್ಸ್ ಸೌಲಭ್ಯ ಒದಗಿಸಿದೆ. ಈ ವಿಧಾನದಲ್ಲಿ ನೋಟು ವಿನಿಮಯಕ್ಕೆ ಆರ್ ಬಿಐ ವಿಚಾರಣಾ ಕೌಂಟರ್ ನಿಂದ ಟಿಎಲ್ ಆರ್ ಕವರ್ ಪಡೆಯಬೇಕು. ಆ ಬಳಿಕ ತುಂಡಾಗಿರುವ ನೋಟುಗಳನ್ನು ಅದರೊಳಗೆ ಹಾಕಿ ನಿಮ್ಮ ಹೆಸರು, ವಿಳಾಸ ಹಾಗೂ ನೀವು ಜಮೆ ಮಾಡುತ್ತಿರುವ ನೋಟಿನ ವಿವರಗಳನ್ನು ಕವರ್ ಮೇಲ್ಭಾಗದಲ್ಲಿ ನಮೂದಿಸಿರುವ ಸಂಬಂಧಿತ ಕಾಲಂಗಳಲ್ಲಿ ತುಂಬಿಸಿ ಟ್ರಿಪಲ್ ಲಾಕ್ ರೆಸೆಪ್ಟಕಲ್ (TLR) ಕವರ್ ಒಳಗೆ ಹಾಕಿ ಲಾಕ್ ರೆಸೆಪ್ಟಕಲ್ ಬಾಕ್ಸ್ ಒಳಗೆ ಹಾಕಬೇಕು. ಹಾಳಾದ ನೋಟುಗಳನ್ನು ಸಲ್ಲಿಕೆ ಮಾಡಿರುವ ಬಗ್ಗೆ ನಿಮಗೆ ಟೋಕನ್ ನೀಡಲಾಗುತ್ತದೆ. ನೀವು ಜಮೆ ಮಾಡಿರುವ ನೋಟಿನ ವಿನಿಮಯ ಮೌಲ್ಯವನ್ನು ಬ್ಯಾಂಕ್ ಡ್ರಾಫ್ಟ್ (bank draft) ಅಥವಾ ಪೇ ಆರ್ಡರ್ ( pay order) ಮೂಲಕ ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.
FD ಇಡುವ ಮುನ್ನ ಸಾಲ, ತೆರಿಗೆ ಬಗ್ಗೆ ತಿಳಿದ್ಕೊಳ್ಳಿ, ಸುಮ್ಮ ಸುಮ್ಮನೆ ಠೇವಣಿ ಇಡ್ಬೇಡಿ
ಈ ಷರತ್ತುಗಳು ಅನ್ವಯಿಸುತ್ತವೆ
ಕರೆನ್ಸಿ ನೋಟುಗಳನ್ನು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ವಿನಿಮಯಕ್ಕೆ ಸ್ವೀಕರಿಸಲಾಗುತ್ತದೆ. ಸ್ವಲ್ಪ ತುಂಡಾಗಿರುವ, ಕಲೆಯಿರುವ, ಮಣ್ಣಾಗಿರುವ ಅಥವಾ ಎರಡು ತುಂಡಾಗಿರುವ ನೋಟುಗಳನ್ನು ಕೊಳಕಾದ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಇಂಥ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ಆದರೆ, ನೋಟಿನ ಮೇಲಿರುವ ಸಂಖ್ಯೆಗಳಿರುವ ಭಾಗ ತುಂಡಾಗಿರಬಾರದು.
ನೋಟುಗಳಲ್ಲಿ ಅಗತ್ಯ ಭಾಗಗಳು ಇಲ್ಲದಿದ್ದರೆ ಅಂಥವುಗಳನ್ನು ತುಂಡಾಗಿರುವ ಅಥವಾ ಕತ್ತರಿಸಲ್ಪಟ್ಟ ನೋಟುಗಳು ಎಂದು ಆರ್ ಬಿಐ ಪರಿಗಣಿಸುತ್ತದೆ. ಕರೆನ್ಸಿ ವಿತರಣಾ ಪ್ರಾಧಿಕಾರ, ಕ್ಲಾಸ್, ಪ್ರಾಮಿಸ್, ಸಹಿ, ಅಶೋಕ ಸ್ತಂಭ, ಲಾಂಛನ, ಮಹಾತ್ಮ ಗಾಂಧಿ ಫೋಟೋ ಹಾಗೂ ವಾಟರ್ ಮಾರ್ಕ್ ಇರದಿದ್ರೆ ಅಂಥ ನೋಟುಗಳನ್ನು ತುಂಡಾಗಿರುವ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಈ ನೋಟುಗಳನ್ನು ಸುಲಭವಾಗಿ ವಿನಿಮಯ ಮಾಡಬಹುದು. ಆದರೆ, ವಿನಿಮಯ ಮೌಲ್ಯವನ್ನು ಆರ್ ಬಿಐ ನೋಟು ರೀಫಂಡ್ ನಿಯಮಗಳಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ತುಂಬಾ ಕೊಳಕಾಗಿರುವ ಹಾಗೂ ಸುಟ್ಟು ಹೋಗಿರುವ ಮುಂತಾದ ಸ್ಥಿತಿಯಲ್ಲಿರುವ ನೋಟುಗಳನ್ನು ಯಾವುದೇ ಬ್ಯಾಂಕಿನ ಶಾಖೆಯಲ್ಲಿ ವಿನಿಮಯಕ್ಕೆ ಪರಿಗಣಿಸಲಾಗೋದಿಲ್ಲ.