
ನವದೆಹಲಿ (ಅ.21): ದೀಪಾವಳಿಗೆ ಬ್ಯಾಂಕ್ ಗೆ ಎಷ್ಟು ದಿನ ರಜೆಯಿರುತ್ತದೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು. ಹಾಗೆಯೇ ಧನ ತ್ರಯೋದಶಿಗೆ ಬ್ಯಾಂಕ್ ಕ್ಲೋಸ್ ಆಗಿರುತ್ತಾ? ಎಂಬ ಪ್ರಶ್ನೆನೂ ಕಾಡಬಹುದು. ದೀಪಾವಳಿಯ ಮೊದಲ ದಿನವೇ ಧನ ತ್ರಯೋದಶಿಯಾಗಿದ್ದು, ಅಲ್ಲಿಂದ ಐದು ದಿನಗಳ ಕಾಲ ಹಬ್ಬ ನಡೆಯುತ್ತದೆ. ನಾಳೆಯಿಂದ ಅಂದರೆ ಅಕ್ಟೋಬರ್ 22ರಿಂದ ಆರು ದಿನಗಳ ಕಾಲ ಬ್ಯಾಂಕ್ ಗೆ ರಜೆಯಿರುತ್ತದೆ. ಪ್ರತಿ ತಿಂಗಳ ಪ್ರಾರಂಭಕ್ಕೂ ಮುನ್ನವೇ ಆ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡುತ್ತದೆ. ಈ ರಜಾಪಟ್ಟಿ ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಕೆಲವು ರಜೆಗಳಷ್ಟೇ ಇಡೀ ದೇಶಕ್ಕೆ ಅನ್ವಯಿಸುತ್ತವೆ. ಇನ್ನು ಉಳಿದ ರಜೆಗಳು ಆಯಾ ಪ್ರದೇಶದ ಆಚರಣೆಗಳು, ಹಬ್ಬಗಳನ್ನು ಆಧರಿಸಿ ನೀಡಲಾಗುತ್ತದೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಹೀಗಾಗಿ ನಾಳೆಯಿಂದ ಆರು ದಿನಗಳ ಕಾಲ ಬ್ಯಾಂಕಿಗೆ ಹೋಗುವ ಕೆಲಸವಿದ್ರೆ ಅದನ್ನು ಮುಂದೂಡುವುದು ಉತ್ತಮ. ಇಲ್ಲವೆಂದ್ರೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ.
ಯಾವೆಲ್ಲ ದಿನ ರಜೆಯಿದೆ?
ಅಕ್ಟೋಬರ್ 22: ದೀಪಾವಳಿ ಮೊದಲ ದಿನವಾದ ಧನ ತ್ರಯೋದಶಿ ಅಥವಾ ಧಾಂತೇರಸ ದಿನ. ಇಡೀ ದೇಶಾದ್ಯಂತ ಬ್ಯಾಂಕ್ ಗಳು ಕ್ಲೋಸ್ ಆಗಿರುತ್ತವೆ. ಇದು ನಾಲ್ಕನೇ ಶನಿವಾರ ಕೂಡ ಹೌದು. ಹೀಗಾಗಿ ಈ ದಿನ ಹಬ್ಬ ಇಲ್ಲವೆಂದ್ರೂ ಬ್ಯಾಂಕ್ ಗೆ ರಜೆ.
ಅಕ್ಟೋಬರ್ 23: ಭಾನುವಾರವಾದ ಕಾರಣ ಬ್ಯಾಂಕಿಗೆ ರಜೆ.
ಅಕ್ಟೋಬರ್ 24: ಕಾಳಿ ಪೂಜೆ ಅಥವಾ ದೀಪಾವಳಿ (ಲಕ್ಷ್ಮೀ ಪೂಜೆ) ಅಥವಾ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಗ್ಯಾಂಗ್ಟಕ್, ಹೈದರಾಬಾದ್ ಹಾಗೂ ಇಂಫಾಲ್ ಹೊರತುಪಡಿಸಿ ಬೇರೆ ಎಲ್ಲ ಕಡೆ ರಜೆ.
ಅಕ್ಟೋಬರ್ 25: ಲಕ್ಷ್ಮೀ ಪೂಜೆ/ದೀಪಾವಳಿ/ಗೋವರ್ಧನ ಪೂಜೆ ಕಾರಣಕ್ಕೆ ಗ್ಯಾಂಗ್ಟಕ್, ಹೈದರಾಬಾದ್ ಹಾಗೂ ಇಂಫಾಲ್ ನಲ್ಲಿ ಬ್ಯಾಂಕುಗಳಿಗೆ ರಜೆ
ಅಕ್ಟೋಬರ್ 26: ಗೋವರ್ಧನ ಪೂಜೆ/ವಿಕ್ರಂ ಸಂವಂತ್ ಹೊಸ ವರ್ಷ ದಿನ/ ಬೈ ಬಿಜಿ/ಬೈ ದುಜಿ/ ದೀಪಾವಳಿ ಹಿನ್ನೆಲೆಯಲ್ಲಿ ಬ್ಯಾಂಕಿಗೆ ರಜೆ. ಬೆಂಗಳೂರು, ಅಹ್ಮದಾಬಾದ್, ಬೆಲ್ಪುರ, ಡೆಹ್ರಾಡೂನ್, ಗ್ಯಾಂಗ್ಟಕ್ , ಜಮ್ಮು, ಕಾನ್ಪುರ, ಲಖನೌ, ಮುಂಬೈ, ನಾಗ್ಪುರ, ಶಿಮ್ಲಾ ಹಾಗೂ ಶ್ರೀನಗರಗಳಲ್ಲಿ ಬ್ಯಾಂಕುಗಳಿಗೆ ರಜೆಯಿದೆ.
ಅಕ್ಟೋಬರ್ 27:ಬೈದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮೀ ಪೂಜೆ/ದೀಪಾವಳಿ/ನಿಂಗೋಲ್ ಚಕ್ಕೋಬ. ಗ್ಯಾಂಗ್ಟಕ್, ಇಂಫಾಲ್, ಕಾನ್ಪುರ ಹಾಗೂ ಲಖನೌಗಳಲ್ಲಿ ರಜೆ.
ದೀಪಾವಳಿಗೆ ಗೃಹಿಣಿಯರಿಗೆ ಶಾಕ್; ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸಾಧ್ಯತೆ!
ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 24ರಂದು ಆಚರಿಸಲಾಗುತ್ತಿದೆ. ಅಕ್ಟೋಬರ್ ಅಂದ್ರೇನೆ ಸಾಲು ಸಾಲು ಹಬ್ಬಗಳು. ಹೀಗಾಗಿ ಈ ತಿಂಗಳು ಬ್ಯಾಂಕುಗಳಿಗೆ ಒಟ್ಟು 21 ದಿನಗಳ ಕಾಲ ರಜೆಯಿದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ. ಹೀಗಾಗಿ ಈ ಸೇವೆಗಳನ್ನು ಗ್ರಾಹಕರು ಬಳಸಿಕೊಳ್ಳಬಹುದು.
ಷೇರು ಮಾರುಕಟ್ಟೆ ರಜೆ
ಬಿಎಸ್ ಇ (BSE) ಹಾಗೂ ಎನ್ ಎಸ್ ಇ (NSE) ಅಕ್ಟೋಬರ್ 24ರಂದು ದೀಪಾವಳಿ/ಲಕ್ಷ್ಮೀ ಪೂಜೆ ಪ್ರಯುಕ್ತ ಕ್ಲೋಸ್ ಆಗಿರುತ್ತದೆ. ಇನ್ನು ಅಕ್ಟೋಬರ್ 26, ಬುಧವಾರ ಕೂಡ ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳಿಗೆ ರಜೆಯಿದೆ. ಅ.24ರಂದು ಷೇರು ಮಾರುಕಟ್ಟೆಗಳಾದ ಎನ್ ಎಸ್ ಇ ಹಾಗೂ ಬಿಎಸ್ ಇ 50 ವರ್ಷಗಳ ಹಳೆಯ 'ಮುಹೂರ್ತ ಟ್ರೇಡಿಂಗ್' ಸಂಪ್ರದಾಯದ ಭಾಗವಾಗಿ ಒಂದು ಗಂಟೆ ತೆರೆದಿರುತ್ತದೆ. ಮುಹೂರ್ತ ಟ್ರೇಡಿಂಗ್ ಅನ್ನು ಹೊಸ ಸಂವತ್ಸರ 2079ರ ಪ್ರಾರಂಭದ ದ್ಯೋತಕವಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ದಿನ ಷೇರು ಮಾರುಕಟ್ಟೆ ಟ್ರೇಡಿಂಗ್ ಗೆ ಶುಭ ದಿನ ಎಂದು ಪರಿಗಣಿಸಲಾಗಿದೆ. ದೀಪಾವಳಿ ಮುಹೂರ್ತ ಟ್ರೇಡಿಂಗ್ ಸಂಜೆ 6:15ಕ್ಕೆ ಪ್ರಾರಂಭವಾಗಲಿದ್ದು, ಒಂದು ಗಂಟೆ ಬಳಿಕ ಅಂದರೆ 7:15ಕ್ಕೆ ಅಂತ್ಯವಾಗಲಿದೆ.
ಭಾರತದ ದಾನಿಗಳ ಪಟ್ಟಿಯಲ್ಲಿ ಶಿವ ನಡಾರ್ ನಂ.1; ಎರಡನೇ ಸ್ಥಾನಕ್ಕೆ ಜಾರಿದ ಅಜೀಂ ಪ್ರೇಮ್ ಜಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.