
ನವದೆಹಲಿ (ಜು.19): ಯೋಗ ಗುರು ಬಾಬಾ ರಾಮದೇವ್ ಮತ್ತು ಪ್ರಸಿದ್ಧ ಕವಿ ಕುಮಾರ್ ವಿಶ್ವಾಸ್ ನಡುವಿನ ಮಾತುಕತೆಗಳು ಸದಾ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುತ್ತವೆ. ದೆಹಲಿಯಲ್ಲಿ ನಡೆದ ರಾಮಾಯಣ ಸಿನಿಮಾದ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಅವರು, "ಪತಂಜಲಿ ಸಂಸ್ಥೆಯ ಮೇಲೆ ಕುಮಾರ್ ವಿಶ್ವಾಸ್ ಕಣ್ಣಿಟ್ಟಿದ್ದು, ಅದರ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ" ಎಂದು ವೇದಿಕೆಯ ಮೇಲೆಯೇ ಕಾಲೆಳೆದಿದ್ದಾರೆ. ಇದಕ್ಕೆ ತಕ್ಷಣವೇ ಕೈಮುಗಿದ ಕುಮಾರ್ ವಿಶ್ವಾಸ್, ಪತಂಜಲಿ ಆಡಳಿತ ತಮಗೆ ವಹಿಸಿಕೊಟ್ಟರೆ ಯಾವುದೇ ಸವಾಲಿಗೂ ಸಿದ್ಧ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ದೆಹಲಿಯ ಭಾರತ್ ಮಂಟಪದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣಂ’ ಚಲನಚಿತ್ರದ ಪ್ರೀ-ಟ್ರೇಲರ್ ಲಾಂಚ್ ಈವೆಂಟ್ ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ನಾಯಕರಾದ ರಣಬೀರ್ ಕಪೂರ್, ಸನ್ನಿ ಡಿಯೋಲ್, ನಟಿ ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ನಿತೇಶ್ ತಿವಾರಿ ಸೇರಿದಂತೆ ದೇಶದ ಪ್ರಮುಖ ಸಾಧು-ಸಂತರು ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಬಾಬಾ ರಾಮದೇವ್ ಹಾಗೂ ಕುಮಾರ್ ವಿಶ್ವಾಸ್ ಮುಖಾಮುಖಿಯಾದಾಗ ಈ ಸ್ವಾರಸ್ಯಕರ ಪ್ರಸಂಗ ಜರುಗಿತು.
ವೇದಿಕೆಯಲ್ಲಿ ಮಾತನಾಡಿದ ಬಾಬಾ ರಾಮದೇವ್, "ಕುಮಾರ್ ವಿಶ್ವಾಸ್ ಅವರ ದೃಷ್ಟಿ ಯಾವಾಗಲೂ ಪತಂಜಲಿಯ ಉತ್ತರಾಧಿಕಾರಿಯಾಗುವುದರ ಮೇಲೆಯೇ ಇರುತ್ತದೆ" ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರತಿಯಾಗಿ ಕುಮಾರ್ ವಿಶ್ವಾಸ್, "ಒಮ್ಮೆ ನಾನು ಬಾಬಾ ಅವರ ಬಳಿ ನನ್ನನ್ನು ದತ್ತು ತೆಗೆದುಕೊಳ್ಳಿ ಎಂದು ಕೇಳಿದ್ದೆ. ಆದರೆ ಅವರು, ದತ್ತು ಪಡೆದರೆ ನೀವು ಯೋಗಿಗಳಂತೆ ಮುಂಜಾನೆ 4 ಗಂಟೆಗೆ ಏಳಬೇಕು ಎಂದರು. ಅದಕ್ಕೆ ನಾನು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮದ ಮಾಲೀಕನಾದವನು ರಾತ್ರಿ ಮಲಗುವುದಾದರೂ ಏಕೆ? ಎಂದು ಉತ್ತರಿಸಿದ್ದೆ" ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಹಾಸ್ಯ ಚಟಾಕಿಯ ನಡುವೆಯೇ ಬಾಬಾ ರಾಮದೇವ್ ಅವರು, "ನಾನು ಕುಮಾರ್ ವಿಶ್ವಾಸ್ ಅವರನ್ನು ಇಂದೇ ಪತಂಜಲಿಯ ಉತ್ತರಾಧಿಕಾರಿ ಎಂದು ಘೋಷಿಸಲು ಸಿದ್ಧನಿದ್ದೇನೆ. ಆದರೆ, ಅದಕ್ಕಾಗಿ ಅವರು ನಾನು ಹೇಳುವ ಒಂದು ಕೆಲಸವನ್ನು ಮಾಡಿ ತೋರಿಸಬೇಕು" ಎಂದು ಸವಾಲು ಹಾಕಿದರು. ಬಳಿಕ ವೇದಿಕೆಯ ಮೇಲೆಯೇ ಯೋಗದ ಕಠಿಣ ಪ್ರಕ್ರಿಯೆಯಾದ 'ನೌಲಿ ಕ್ರಿಯೆ'ಯನ್ನು (Nauli Kriya) ಮಾಡಿ ತೋರಿಸಿದ ರಾಮದೇವ್, ಇದನ್ನು ಮಾಡುವಂತೆ ಕುಮಾರ್ ವಿಶ್ವಾಸ್‌ಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಕವಿ ವಿಶ್ವಾಸ್, ಉತ್ತರಾಧಿಕಾರಿಯಾಗಲು ನಾನು ಇದನ್ನು ಕೂಡ ಶೀಘ್ರದಲ್ಲೇ ಕಲಿಯುತ್ತೇನೆ ಎಂದು ಕೈಮುಗಿದರು.
ಈ ಹಾಸ್ಯ ಪ್ರಸಂಗದ ನಡುವೆ ಪತಂಜಲಿ ಸಂಸ್ಥೆಯ ಭಾರಿ ಯಶಸ್ಸಿನ ಆರ್ಥಿಕ ಅಂಕಿ-ಅಂಶಗಳು ಸಹ ಹೊರಬಿದ್ದಿವೆ. ಪತಂಜಲಿ ಫುಡ್ಸ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಇತಿಹಾಸದಲ್ಲೇ ಮೊದಲ ಬಾರಿಗೆ ವಾರ್ಷಿಕ ಕಾರ್ಯಾಚರಣೆಯ ಆದಾಯದಲ್ಲಿ 40,000 ಕೋಟಿ ರೂಪಾಯಿಗಳ ಬೃಹತ್ ಮೈಲಿಗಲ್ಲನ್ನು ದಾಟಿದೆ. ಇನ್ನು ಕಂಪನಿಯ ಇಡೀ ವರ್ಷದ ಎಬಿಟ್ಡಾ (EBITDA) ಒಟ್ಟು 1,931.52 ಕೋಟಿ ರೂಪಾಯಿಗಳಾಗಿ ದಾಖಲಾಗಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಗಳಿಸಿರುವ ಈ ಅಭೂತಪೂರ್ವ ಆರ್ಥಿಕ ಪ್ರಗತಿಯಲ್ಲಿ ಎಫ್‌ಎಂಸಿಜಿ (FMCG) ವ್ಯವಹಾರದ ಪಾತ್ರ ದೊಡ್ಡದಾಗಿದೆ. ಕಂಪನಿಯ ಒಟ್ಟು ಆದಾಯದಲ್ಲಿ ಎಫ್‌ಎಂಸಿಜಿ ಉದ್ಯಮದ ಕೊಡುಗೆ ಶೇಕಡಾ 27.60 ರಷ್ಟಿದ್ದರೆ, ಕಂಪನಿಯ ಒಟ್ಟಾರೆ ಎಬಿಟ್ಡಾ (EBITDA) ಗಳಿಕೆಯಲ್ಲಿ ಈ ವಿಭಾಗವು ಬರೋಬ್ಬರಿ ಶೇಕಡಾ 61.13 ರಷ್ಟು ಪಾಲನ್ನು ಹೊಂದುವ ಮೂಲಕ ಕಂಪನಿಯ ಪ್ರಧಾನ ಲಾಭದಾಯಕ ವಲಯವಾಗಿ ಹೊರಹೊಮ್ಮಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.