
ಮುಂಬೈ (ಜು.18): ನೀವು ರಿಲಯನ್ಸ್ ಜಿಯೋ ಅಥವಾ ಭಾರ್ತಿ ಏರ್‌ಟೆಲ್ ಗ್ರಾಹಕರಾಗಿದ್ದೀರಾ? ಮುಂದಿನ ಬಾರಿ ರೀಚಾರ್ಜ್ ಮಾಡುವ ಮುನ್ನ 30 ದಿನಗಳ ಅವಧಿಗೆ ಯಾವ ಕಂಪನಿ ಅತ್ಯಂತ ಅಗ್ಗದ ಹಾಗೂ ಲಾಭದಾಯಕ ಪ್ಲಾನ್ ನೀಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಪ್ರಸ್ತುತ ಜಿಯೋ ಮತ್ತು ಏರ್‌ಟೆಲ್ ಎರಡೂ ಕಂಪನಿಗಳು 30 ದಿನಗಳ ವ್ಯಾಲಿಡಿಟಿಯ ಅತ್ಯಂತ ಅಗ್ಗದ ಪ್ಲಾನ್ ಅನ್ನು 355 ರೂಪಾಯಿಗೆ ನೀಡುತ್ತಿವೆ. ಎರಡೂ ಕಂಪನಿಗಳ ಪ್ಲಾನ್ ದರ ಒಂದೇ ಆಗಿದ್ದರೂ, ಇಂಟರ್ನೆಟ್ ಡೇಟಾ, ಎಸ್‌ಎಂಎಸ್ ಹಾಗೂ ಹೆಚ್ಚುವರಿ ಪ್ರಯೋಜನಗಳ (ಅಡಿಷನಲ್ ಬೆನಿಫಿಟ್ಸ್) ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.
ರಿಲಯನ್ಸ್ ಜಿಯೋ ತನ್ನ 355 ರೂಪಾಯಿ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಒಟ್ಟು 25 ಜಿಬಿ (GB) ಹೈ-ಸ್ಪೀಡ್ ಡೇಟಾ ಮತ್ತು ಅನಿಯಮಿತ (ಅನ್‌ಲಿಮಿಟೆಡ್) ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಪ್ರಯೋಜನ ಸಿಗಲಿದೆ.
ಹೆಚ್ಚುವರಿ ಆಫರ್‌ಗಳು: ಈ ಪ್ಲಾನ್‌ನೊಂದಿಗೆ ಜಿಯೋ ಭರ್ಜರಿ ಕೊಡುಗೆಗಳನ್ನು ನೀಡುತ್ತಿದ್ದು, 3 ತಿಂಗಳ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಷನ್, ಉಚಿತ ಜಿಯೋ ಕ್ಲೌಡ್ ಸ್ಟೋರೇಜ್, 18 ತಿಂಗಳವರೆಗೆ ಗೂಗಲ್ ಜೆಮಿನಿ ಪ್ರೋ (Google Gemini Pro) ಪ್ಲಾನ್, 5000 ಜಿಬಿ ಕ್ಲೌಡ್ ಸ್ಟೋರೇಜ್ ಹಾಗೂ 'ನ್ಯಾನೋ ಬನಾನಾ ಬೆನಿಫಿಟ್' ಒಳಗೊಂಡಿದೆ. ಈ ಪ್ಲಾನ್‌ನ ಅವಧಿ 30 ದಿನಗಳು.
ಏರ್‌ಟೆಲ್‌ನ 355 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಟ್ಟು 25 ಜಿಬಿ (GB) ಹೈ-ಸ್ಪೀಡ್ ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗುತ್ತದೆ. ಆದರೆ, ಇದರಲ್ಲಿ ಇಡೀ ಅವಧಿಗೆ ಒಟ್ಟು 300 ಎಸ್‌ಎಂಎಸ್ ಮಾತ್ರ ಲಭ್ಯವಿರಲಿದ್ದು, ಜೊತೆಗೆ 5 ರೂಪಾಯಿ ಟಾಕ್‌ಟೈಮ್ ಸಿಗಲಿದೆ.
ಹೆಚ್ಚುವರಿ ಆಫರ್‌ಗಳು: ಈ ಪ್ಲಾನ್‌ನಲ್ಲಿ ಏರ್‌ಟೆಲ್ 4 ಸಾವಿರ ರೂಪಾಯಿ ಮೌಲ್ಯದ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ (12 ತಿಂಗಳ ವ್ಯಾಲಿಡಿಟಿ), ರಿಯಲ್-ಟೈಮ್ ಸ್ಪ್ಯಾಮ್ ಕಾಲ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳು ಹಾಗೂ ಪ್ರತಿ 30 ದಿನಗಳಿಗೊಮ್ಮೆ ಒಂದು ಉಚಿತ ಹಲೋಟ್ಯೂನ್ ಬದಲಾಯಿಸುವ ಸೌಲಭ್ಯವನ್ನು ನೀಡುತ್ತಿದೆ. ಈ ಪ್ಲಾನ್‌ನ ವ್ಯಾಲಿಡಿಟಿಯೂ 30 ದಿನಗಳಾಗಿದೆ.
ಉಭಯ ಕಂಪನಿಗಳ ಆಫರ್‌ಗಳನ್ನು ಹೋಲಿಸಿ ನೋಡಿದಾಗ ಎಸ್‌ಎಂಎಸ್ ವಿಭಾಗದಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಜಿಯೋ ಪ್ರತಿದಿನ 100 ಎಸ್‌ಎಂಎಸ್ ನೀಡಿದರೆ, ಏರ್‌ಟೆಲ್ ಇಡೀ ತಿಂಗಳಿಗೆ ಒಟ್ಟು 300 ಎಸ್‌ಎಂಎಸ್ ಮಾತ್ರ ನೀಡುತ್ತದೆ. ಇನ್ನು ಜಿಯೋ ಯಾವುದೇ ಟಾಕ್‌ಟೈಮ್ ನೀಡುತ್ತಿಲ್ಲ, ಆದರೆ ಏರ್‌ಟೆಲ್ 5 ರೂ. ಟಾಕ್‌ಟೈಮ್ ನೀಡುತ್ತಿದೆ. ಇದರೊಂದಿಗೆ ಹೆಚ್ಚುವರಿ ಒಟಿಟಿ ಹಾಗೂ ಕ್ಲೌಡ್ ಸ್ಟೋರೇಜ್ ಪ್ರಯೋಜನಗಳಲ್ಲೂ ವ್ಯತ್ಯಾಸಗಳಿದ್ದು, ನಿಮ್ಮ ದೈನಂದಿನ ಬಳಕೆಗೆ ಯಾವುದು ಹೆಚ್ಚು ಸೂಕ್ತ ಎಂಬುದನ್ನು ನಿರ್ಧರಿಸಿ ರೀಚಾರ್ಜ್ ಮಾಡಿಕೊಳ್ಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.