ಅಟಲ್ ಪಿಂಚಣಿ ಯೋಜನೆಗೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಯೋಜನೆಗೆ ಈ ತನಕ 5 ಕೋಟಿ ಜನರು ಸೇರ್ಪಡೆಗೊಂಡಿದ್ದಾರೆ. 2022ನೇ ಸಾಲಿನಲ್ಲೇ 1.25 ಕೋಟಿ ಹೊಸ ನೋಂದಣಿಯಾಗಿದೆ. ಇನ್ನು ಈ ಯೋಜನೆಗೆ ಸೇರ್ಪಡೆಗೊಳ್ಳುತ್ತಿರುವ ಮಹಿಳೆಯರ ಪ್ರಮಾಣದಲ್ಲಿ ಕೂಡ ಹೆಚ್ಚಳವಾಗಿದೆ.
ನವದೆಹಲಿ (ಫೆ.1): ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು. ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಯೋಜನೆಗೆ ಈ ತನಕ 5 ಕೋಟಿ ಜನರು ನೋಂದಣಿ ಮಾಡಿಸಿದ್ದಾರೆ. 2022ನೇ ಸಾಲಿನಲ್ಲೇ 1.25 ಕೋಟಿ ಹೊಸ ನೋಂದಣಿಯಾಗಿದೆ. 2021ನೇ ಸಾಲಿನಲ್ಲಿ 92 ಲಕ್ಷ ಜನರು ಈ ಯೋಜನೆಗೆ ನೋಂದಣಿ ಮಾಡಿಸಿದ್ದರು. ಅಂದ್ರೆ ಈ ಯೋಜನೆಗೆ ಸೇರ್ಪಡೆಗೊಳ್ಳುತ್ತಿರುವ ಜನರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪಿಎಫ್ ಆರ್ ಡಿಎ ಅಂಕಿಅಂಶಗಳ ಅನ್ವಯ ಅಟಲ್ ಪಿಂಚಣಿ ಯೋಜನೆಗೆ ನೋಂದಣಿಯಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2021ನೇ ಸಾಲಿನಲ್ಲಿ ಈ ಯೋಜನೆಗೆ ಸೇರ್ಪಡೆಗೊಂಡ ಮಹಿಳೆಯರ ಪ್ರಮಾಣ ಶೇ. 38ರಷ್ಟಿತ್ತು. 2022ನೇ ಸಾಲಿನಲ್ಲಿ ಇದು ಶೇ.45ಕ್ಕೆ ಹೆಚ್ಚಳವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು 29 ಬ್ಯಾಂಕ್ ಗಳಲ್ಲಿ ತೆರೆಯಬಹುದಾಗಿದೆ. 18 ಹಾಗೂ 40 ವರ್ಷಗಳ ನಡುವಿನ ತೆರಿಗೆ ಪಾವತಿ ಮಾಡದ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀವು ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಬಹುದು. ಇನ್ನು ಪ್ರತಿ ತಿಂಗಳು ನಿಮಗೆ ಎಷ್ಟು ಪಿಂಚಣಿ ಸಿಗುತ್ತದೆ ಎಂಬುದು ನಿಮ್ಮ ಹೂಡಿಕೆಯನ್ನು ಆಧರಿಸಿರುತ್ತದೆ. ಇನ್ನು ತಿಂಗಳ ಹೂಡಿಕೆ ಮೊತ್ತ ಕೂಡ ನೀವು ತಿಂಗಳಿಗೆ 1,000 ರೂ. ಹಾಗೂ 5,000 ರೂ. ನಡುವೆ ಎಷ್ಟು ಪಿಂಚಣಿ ಪಡೆಯುತ್ತೀರಿ ಎಂಬುದನ್ನು ಆಧರಿಸಿ ಬದಲಾಗುತ್ತದೆ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳ ತನಕ ಹೂಡಿಕೆ ಮಾಡಬೇಕು. ಉದಾಹರಣೆಗೆ ಯಾರಾದರೂ 18 ನೇ ವಯಸ್ಸಿನಲ್ಲಿ 5,000ರೂ. ತಿಂಗಳ ಪಿಂಚಣಿ ಪಡೆಯಲು ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ ಆತ ತಿಂಗಳಿಗೆ 210 ರೂ. ಪಾವತಿಸಬೇಕು.
100 ,200, 500 ರೂ ಸೇರಿದಂತೆ ನೋಟುಗಳ ಬದಲಾವಣೆಗೆ RBIನಿಂದ ಮಹತ್ವದ ಮಾರ್ಗಸೂಚಿ!
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಚಂದಾದಾರರ ಕೊಡುಗೆಯ ಶೇ.50ರಷ್ಟನ್ನು ಅಥವಾ ವಾರ್ಷಿಕ 1,000ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ನೀಡುತ್ತದೆ. ಸರ್ಕಾರದ ಈ ಕೊಡುಗೆ ಇಲ್ಲಿಯ ತನಕ ಇತರ ಸಾಮಾಜಿಕ ಭದ್ರತ ಯೋಜನೆಗಳ ಫಲಾನುಭವಿ ಆಗದಿರೋರಿಗೆ ಮಾತ್ರ ಲಭಿಸುತ್ತದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ಆನ್ ಲೈನ್ ನಲ್ಲಿ ತೆರೆಯಲು ಅವಕಾಶ ನೀಡಲಾಗಿದೆ. ಆನ್ ಲೈನ್ ನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಪಿಎಫ್ ಆರ್ ಡಿ ಅಧಿಸೂಚನೆ ಮೂಲಕ ತಿಳಿಸಿತ್ತು.
ಅದಾನಿ ಗ್ರೂಪ್‌ಗೆ ಎಷ್ಟು ಸಾಲ ನೀಡಿದ್ದೀರಿ ಎನ್ನುವ ಮಾಹಿತಿ ಕೇಳಿದ ಆರ್‌ಬಿಐ!
ಅಟಲ್ ಪಿಂಚಣಿ ಯೋಜನೆಯಿಂದ ಹೊರಹೋಗೋದು ಹೇಗೆ?
*ಚಂದಾದಾರರು ಮರಣ ಹೊಂದಿದ್ದರೆ: ಚಂದಾದಾರರು ಮರಣ ಹೊಂದಿದರೆ, ಅವರ ಪತಿ ಅಥವಾ ಪತ್ನಿಗೆ ಪಿಂಚಣಿ ನೀಡಲಾಗುತ್ತದೆ. ಇನ್ನು ಇಬ್ಬರೂ ಅಂದರೆ ಚಂದಾದಾರರು ಹಾಗೂ ಪತಿ ಅಥವಾ ಪತ್ನಿ ಮರಣ ಹೊಂದಿದ್ರೆ ಪಿಂಚಣಿಯನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
*60 ವರ್ಷ ಪೂರ್ಣಗೊಂಡ ಬಳಿಕ: 60 ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿ ಹಣವನ್ನು ಶೇ.100ರಷ್ಟು ವರ್ಷಾಷನಗೊಳಿಸಿದ್ರೆ ಆಗ ಯೋಜನೆಯಿಂದ ಹೊರಹೋಗಬಹುದು.
*60 ವರ್ಷಕ್ಕಿಂತ ಮೊದಲು ನಿರ್ಗಮನ: 60 ವರ್ಷಗಳಿಗಿಂತ ಮೊದಲು ಈ ಯೋಜನೆಯಿಂದ ನಿರ್ಗಮಿಸಲು ಅವಕಾಶವಿಲ್ಲ. ವಿಶೇಷ ಸಂದರ್ಭಗಳಲ್ಲಿ ಅಂದ್ರೆ ಫಲಾನುಭವಿ ಸಾವನ್ನಪ್ಪಿದ್ದಲ್ಲಿ ಮಾತ್ರ ಈ ಯೋಜನೆಯಿಂದ ನಿರ್ಗಮಿಸಲು ಅವಕಾಶವಿದೆ.