ಹವಾಲಾ ಜಾಲದ ಮೂಲಕ ದುಬೈಗೆ ಹಣ ವರ್ಗಾವಣೆ ಮಾಡಿದ ಆರೋಪ ಹಿನ್ನೆಲೆ ಜೋಯ್ ಅಲುಕ್ಕಾಸ್‌ನ 305 ಕೋಟಿ ರೂ. ಅನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ನವದೆಹಲಿ (ಫೆಬ್ರವರಿ 25, 2023): ಅಕ್ರಮ ಮಾರ್ಗಗಳ ಮೂಲಕ ದುಬೈಗೆ ಹಣ ವರ್ಗಾಯಿಸಿದ ಆರೋಪ ಪ್ರಕರಣದಲ್ಲಿ ಕೇರಳ ಮೂಲದ ಖ್ಯಾತನಾಮ ಆಭರಣ ಉದ್ಯಮ ಸಂಸ್ಥೆಯಾದ ಜೋಯ್ ಅಲುಕ್ಕಾಸ್‌ಗೆ ಸೇರಿದ 305 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಜಪ್ತಿ ಮಾಡಿದೆ. ಸಂಸ್ಥೆಯು, ಹವಾಲಾ ಮಾರ್ಗಗಳ ಮೂಲಕ ದುಬೈಗೆ ಹಣ ರವಾನಿಸಿದೆ ಎಂಬ ಅರೋಪಗಳ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಕೇರಳದ ಹಲವು ನಗರಗಳಲ್ಲಿ ಇರುವ ಸಂಸ್ಥೆಯ ವಿವಿಧ ಆಸ್ತಿಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕ ಮಾಹಿತಿ ಆಧರಿಸಿ ಈ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಮಾಹಿತಿ ನೀಡಿದೆ.
ಜಪ್ತಿ (Seize) ಮಾಡಲಾದ ಆಸ್ತಿಯಲ್ಲಿ (Assets) ತ್ರಿಶೂರ್‌ನ ಶೋಭಾ ನಗರದಲ್ಲಿ ನಿವೇಶನ ಮತ್ತು ವಸತಿ ಕಟ್ಟಡ ಒಳಗೊಂಡ ₹ 81.54 ಕೋಟಿ ಮೌಲ್ಯದ 33 ಸ್ಥಿರಾಸ್ತಿ (Immovable Properties), ₹ 91.22 ಲಕ್ಷ ಮೌಲ್ಯದ ಮೂರು ಬ್ಯಾಂಕ್ ಖಾತೆಗಳು (Bank Accounts), ₹ 5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿಗಳು (Fixed Deposit) ಮತ್ತು 217.81 ಕೋಟಿ ಮೌಲ್ಯದ ಜೋಯಾಲುಕ್ಕಾಸ್ ಷೇರುಗಳನ್ನು (Joyalukkas Shares) ಸಹ ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.
ಇದನ್ನು ಓದಿ: ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್‌ಗೆ 40 ಕೋಟಿ ವಂಚನೆ: ಇಡಿ ಕಸ್ಟಡಿಗೆ ಆರೋಪಿ
ಜೋಯ್ ಅಲುಕ್ಕಾಸ್ ವರ್ಗೀಸ್ ಒಡೆತನದ ಜೋಯ್ ಅಲುಕ್ಕಾಸ್ ಸಂಸ್ಥೆಯು ಹವಾಲಾ ಮಾರ್ಗದ ಮೂಲಕ ದುಬೈನಲ್ಲಿರುವ ಜೋಯ್ ಅಲುಕ್ಕಾಸ್ ಎಲ್‌ಎಲ್‌ಸಿ ಕಂಪನಿಗೆ ಹಣ ವರ್ಗಾವಣೆ ಮಾಡಿದೆ ಎಂಬ ಮಾಹಿತಿ ತನಿಖೆ ವೇಳೆ ಕಂಡುಬಂದಿತ್ತು. ಜೊತೆಗೆ ಕಂಪನಿಯ ಅಧಿಕಾರಿಗಳ ನಡುವಣ ಇ ಮೇಲ್ ಮಾಹಿತಿ ಮತ್ತು ಇತರೆ ಅಧಿಕೃತ ದಾಖಲೆಗಳು ಕೂಡಾ ಹವಾಲಾ ಜಾಲದ ಮೂಲಕ ಹಣ ಸಾಗಣೆಯನ್ನು ಖಚಿತಪಡಿಸಿವೆ. ಭಾರತದಲ್ಲಿ ಸಂಸ್ಥೆ ಮಾಡಿದ ಲಾಭವನ್ನು ಅಕ್ರಮವಾಗಿ ದುಬೈಗೆ ಸಾಗಿಸಿ ಅಲ್ಲಿ ವರ್ಗೀಸ್ ಅವರ ಶೇ.100ರಷ್ಟು ಒಡೆತನ ಹೊಂದಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿತ್ತು.
ವಿಶೇಷವೆಂದರೆ ಜೋಯ್ ಅಲುಕ್ಕಾಸ್ ಕಂಪನಿ 2300 ಕೋಟಿ ರೂ. ಮೌಲ್ಯದ ಐಪಿಒ ಬಿಡುಗಡೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಯಾವುದೇ ಮಾಹಿತಿ ನೀಡದೆ ಐಪಿಒ ಬಿಡುಗಡೆಯಿಂದ ಹಿಂದೆ ಸರಿದಿತ್ತು.
ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಅಪ್ 2ನೇ ಶಾಸಕನ ಬಂಧನ: ಅಬಕಾರಿ ಹಗರಣದಲ್ಲಿ ಕೇಜ್ರಿ ಆಪ್ತನ ವಿಚಾರಣೆ
ಕಂಪನಿಯು ತನ್ನ IPO ದಾಖಲೆಗಳನ್ನು ಬೇಗನೆ, ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಒಳಪಟ್ಟು ಮತ್ತೆ ಫೈಲ್ ಮಾಡಲು ಯೋಜಿಸಿತ್ತು ಎಂದು ಜೋಯ್ ಅಲುಕ್ಕಾಸ್ ಮುಖ್ಯ ಕಾರ್ಯನಿರ್ವಾಹಕ ಬೇಬಿ ಜಾರ್ಜ್ ಮಂಗಳವಾರ ರಾಯಿಟರ್ಸ್‌ಗೆ ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ್ದರು. ಮುಖ್ಯವಾಗಿ ದಕ್ಷಿಣ ಭಾರತದ ಮೇಲೆ ಕೇಂದ್ರೀಕರಿಸುವ ಆಭರಣ ಚಿಲ್ಲರೆ ವ್ಯಾಪಾರಿಯಾದ ಜೋಯ್ ಅಲುಕ್ಕಾಸ್ ಮಾರುಕಟ್ಟೆಯ ಚಂಚಲತೆ ಮತ್ತು ಹೆಚ್ಚಿನ ಹಣದುಬ್ಬರದ ನಡುವೆ ತನ್ನ IPO ಯೋಜನೆಗಳನ್ನು ವಿಳಂಬಗೊಳಿಸಿರುವುದು ಅಥವಾ ಹಿಂತೆಗೆದುಕೊಂಡಿರುವ ಇತ್ತೀಚಿನ ಕಂಪನಿ. ಜೋಯ್ ಅಲುಕ್ಕಾಸ್ ಕಂಪನಿಯು ಸರಿಸುಮಾರು 68 ನಗರಗಳಲ್ಲಿ ಶೋರೂಂಗಳನ್ನು ಹೊಂದಿದೆ.
ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಂದ ಹಣದಲ್ಲಿ ಕಮೀಷನ್: ಇಡಿಯಿಂದ ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಬಂಧನ