ಅದಾನಿ ಸಮೂಹದ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಎಲ್‌ಐಸಿಯ ಷೇರುಗಳು ಇದೇ ಮೊದಲ ಬಾರಿಗೆ ಖರೀದಿ ಮೌಲ್ಯಕ್ಕಿಂತ ಕನಿಷ್ಠಕ್ಕೆ ಕುಸಿದಿದೆ. ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಎಲ್‌ಐಸಿ ಒಟ್ಟಾರೆ 35,917 ಕೋಟಿ ರೂ. ನಷ್ಟ ಅನುಭವಿಸಿದೆ.
ನವದೆಹಲಿ (ಫೆಬ್ರವರಿ 25, 2023): ಷೇರುಪೇಟೆಯಲ್ಲಿ ಉದ್ಯಮಿ ಗೌತಮ್ ಅದಾನಿ ಒಡೆತನದ ಕಂಪನಿಗಳ ಷೇರುಗಳ ಮೌಲ್ಯ ಇಳಿಕೆ ಮುಂದುವರೆದಿದ್ದು, ಕಳೆದ 1 ತಿಂಗಳಲ್ಲಿ 12 ಲಕ್ಷ ಕೋಟಿ ರೂ.ನಷ್ಟು ನಷ್ಟ ಅನುಭವಿಸಿವೆ. ಹಿಂಡನ್‌ಬರ್ಗ್ ವರದಿ ಪ್ರಕಟಕ್ಕೂ ಮುನ್ನ ಅಂದರೆ ಜನವರಿ 24ರಂದು ಗೌತಮ್ ಅದಾನಿ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 19 ಲಕ್ಷ ಕೋಟಿ ರೂ. ನಷ್ಟಿತ್ತು. ಅದು ಫೆಬ್ರವರಿ 24ರ ವೇಳೆಗೆ 7 ಲಕ್ಷ ಕೋಟಿ ರೂ. ಗೆ ಇಳಿದಿದೆ. ಅಂದರೆ ಒಂದು ತಿಂಗಳಲ್ಲಿ ಕಂಪನಿಯ ಷೇರು ಮೌಲ್ಯ 12 ಲಕ್ಷ ಕೋಟಿ ರೂ.ನಷ್ಟು ಭಾರೀ ಇಳಿಕೆ ಕಂಡಿದೆ. ಬಹುತೇಕ ಕಂಪನಿಗಳ ಷೇರು ಮೌಲ್ಯ 52 ವಾರಗಳ ಕನಿಷ್ಠಕ್ಕೆ ತಲುಪಿದೆ.
ಹಿಂಡನ್‌ಬರ್ಗ್ ವರದಿ (Hindenburg Report) ನಂತರ ಗೌತಮ್ ಅದಾನಿ (Gautam Adani) ಅವರ ವೈಯಕ್ತಿಕ ಸಂಪತ್ತು (Personal Asset) 9.80 ಲಕ್ಷ ಕೋಟಿ ರೂ.ನಿಂದ 3.36 ಲಕ್ಷ ಕೋಟಿ ರೂ.ಗೆ ಇಳಿದಿದೆ.
ಇದನ್ನು ಓದಿ: ಮುಚ್ಚಿದ ಲಕೋಟೆಯಲ್ಲಿ ತಜ್ಞರ ಹೆಸರು: ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ತಿರಸ್ಕಾರ
ಖರೀದಿಗಿಂತ ಕೆಳಗಿಳಿದ ಎಲ್‌ಐಸಿ ಹೂಡಿಕೆ ಮೊತ್ತ
ಅದಾನಿ ಸಮೂಹದ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಎಲ್‌ಐಸಿಯ ಷೇರುಗಳು (LIC Shares) ಇದೇ ಮೊದಲ ಬಾರಿಗೆ ಖರೀದಿ ಮೌಲ್ಯಕ್ಕಿಂತ ಕನಿಷ್ಠಕ್ಕೆ ಕುಸಿದಿದೆ. ಎಲ್‌ಐಸಿ ಅದಾನಿ ಸಮೂಹದ (Adani Group) ಹಲವು ಕಂಪನಿಗಳಲ್ಲಿ 30,127 ಕೋಟಿ ರು. ಹೂಡಿಕೆ ಮಾಡಿತ್ತು. ಆದರೆ ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಸತತವಾಗಿ ಇಳಿಕೆ ಕಂಡ ಪರಿಣಾಮ ಆ ಹೂಡಿಕೆ ಮೌಲ್ಯ ಇದೀಗ ಮೌಲ್ಯ ಇದೀಗ 26,862 ಕೋಟಿ ರೂ.ಗೆ ಇಳಿಕೆ ಕಂಡಿದೆ. ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಎಲ್‌ಐಸಿ ಒಟ್ಟಾರೆ 35,917 ಕೋಟಿ ರೂ. ನಷ್ಟ ಅನುಭವಿಸಿದೆ.
ಅದಾನಿ - ಹಿಂಡನ್‌ಬರ್ಗ್: ಮಾಧ್ಯಮ ವರದಿ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಕಾರ
ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವವರೆಗೆ ಅದಾನಿ- ಹಿಂಡನ್‌ಬರ್ಗ್ ವಿಷಯದ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ಸೂಚಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ‘ನಾವು ಮಾಧ್ಯಮಗಳಿಗೆ ಯಾವುದೇ ತಡೆಯಾಜ್ಞೆ ನೀಡಲು ಹೋಗುವುದಿಲ್ಲ’ ಎಂದಿದೆ. ಅದಾನಿ ಸಮೂಹದ ಮೇಲೆ ವಂಚನೆ ಆರೋಪ ಮಾಡಿರುವ ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಸಮೂಹದ ಷೇರುಗಳ ಕುಸಿತ ಕುರಿತ ಪ್ರಕರಣದಲ್ಲಿ ಫೆಬ್ರವರಿ 20ಕ್ಕೆ ಸುಪ್ರೀಂಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದೆ. ವಕೀಲ ಎಂ.ಎಲ್ ಶರ್ಮಾ ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಪೀಠವು ಶುಕ್ರವಾರ ತಿರಸ್ಕರಿಸಿತು.
ಇದನ್ನೂ ಓದಿ: ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ