
ಬೆಂಗಳೂರು (ಮಾ.24): ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮೊತ್ತಕ್ಕೆ ಸ್ಪೋರ್ಟ್ಸ್ ಟೀಮ್ ಮಾರಾಟವಾಗಿದೆ. ಬರೋಬ್ಬರಿ 16,706 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ಒಕ್ಕೂಟ ಖರೀದಿ ಮಾಡಿದೆ. ಆದರೆ, ಈ ಖರೀದಿ ಇನ್ನೂ ಬಿಸಿಸಿಐ ಹಾಗೂ ಭಾರತೀಯ ಸ್ಪರ್ಧಾ ಆಯೋಗದ (CCI) ಅಧಿಕೃತ ಅನುಮೋದನೆಗೆ ಒಳಪಟ್ಟಿದೆ. ಇದೆಲ್ಲದರ ನಡುವೆ ಅತ್ಯಂತ ಮಹತ್ವದ ವಿಚಾರ ಗೊತ್ತಾಗಿರೋದು ಏನೆಂದರೆ, 2018ರಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಮುಂಬೈ ಬ್ಯಾಟ್ಸ್‌ಮನ್ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್‌ಸಿಬಿಯ ಹೊಸ ಚೇರ್ಮನ್ ಆಗಿದ್ದಾರೆ.
ಕ್ರಿಕೆಟ್‌ನಲ್ಲಿ ಯಶಸ್ಸು ಸಿಗದ ಹಿನ್ನಲೆಯಲ್ಲಿ ತಂದೆ ಶತಕೋಟ್ಯಧಿಪತಿ ಆದಿತ್ಯ ಬಿರ್ಲಾ ಗ್ರೂಪ್‌ನ ಚೇರ್ಮನ್ ಆಗಿರುವ ಕುಮಾರ ಮಂಗಲಂ ಬಿರ್ಲಾ ಅವರ ವ್ಯವಹಾರಕ್ಕೆ ಕೂಡಿಕೊಂಡಿದ್ದರು. ಈಗ ಅವರು ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರಾಗಿದ್ದಾರೆ.
ಮುಂಬೈ ಪರವಾಗಿ ಲಿಸ್ಟ್ ಎ ಹಾಗೂ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ್ದ ಆರ್ಯಮಾನ್ ಬಿರ್ಲಾ, ಪ್ರಖ್ಯಾತ ಬಿರ್ಲಾ ಉದ್ಯಮಿ ಕುಟುಂಬದ 6ನೇ ತಲೆಮಾರಿನ ಸದಸ್ಯ. ಕುಮಾರ್ ಮಂಗಳಂ ಬಿರ್ಲಾ ಅವರು ಭಾರತದ ಮೂರನೇ ಅತಿದೊಡ್ಡ ಖಾಸಗಿ ವಲಯದ ಸಂಘಟಿತ ಸಂಸ್ಥೆಯಾದ 'ಆದಿತ್ಯ ಬಿರ್ಲಾ ಗ್ರೂಪ್'ನ ಅಧ್ಯಕ್ಷ. ಸಹೋದರಿ ಅನನ್ಯ ಬಿರ್ಲಾ ಅವರು 2016 ರಿಂದ ಪಾಪ್ ಮತ್ತು ಎಲೆಕ್ಟ್ರೋ ಪಾಪ್ ಪ್ರಕಾರದ ಪಾಶ್ಚಿಮಾತ್ಯ ಸಂಗೀತದಲ್ಲಿ ಗಾಯಕಿ ಹಾಗೂ ಗೀತರಚನೆಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಆಕೆಯೂ ಕೂಡ ಮ್ಯೂಸಿಕ್‌ನ ಮೇಲಿನ ಆಸಕ್ತಿಯನ್ನು ತೊರೆದು ಬಿರ್ಲಾ ಗ್ರೂಪ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
1997ರಲ್ಲಿ ಜನಿಸಿದ್ದ ಆರ್ಯಮಾನ್ ಬಿರ್ಲಾ, ವ್ಯವಹಾರದ ಕೌಟುಂಬಿಕ ಸಂಪ್ರದಾಯಕ್ಕಿಂತ ಭಿನ್ನವಾಗಿ, ಅವರು ಕ್ರಿಕೆಟ್ ಅನ್ನು ಆರಿಸಿಕೊಂಡಿದ್ದರು. ಮಹಾರಾಷ್ಟ್ರ ದೇಶಿಯ ತಂಡದ ಪರ ಆಡಿದ್ದ ಆರ್ಯಮಾನ್, 2017-18ರ ರಣಜಿ ಟ್ರೋಫಿಯ ಭಾಗವಾಗಿ 25 ನವೆಂಬರ್ 2017 ರಂದು ತಮ್ಮ ಮೊದಲ ಪಂದ್ಯವನ್ನು ಆಡಿದರು. ಒಡಿಶಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 16 ಮತ್ತು 6 ರನ್ ಗಳಿಸಿದರು ಮತ್ತು ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 51 ರನ್ ಗಳಿಸುವ ಮೂಲಕ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದ್ದರು. ನವೆಂಬರ್ 2018 ರಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು.
2018ರಲ್ಲಿ ರಾಜಸ್ಥಾನ ರಾಯಲ್ಸ್ ಐಪಿಎಲ್ ಟೀಮ್‌ಗೆ ಸೇರಿಕೊಂಡಿದ್ದ ಅವರು ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಛತ್ತೀಸ್‌ಗಢ ವಿರುದ್ಧದ ಮಧ್ಯಪ್ರದೇಶದ ಅಂಡರ್-13 ಪಂದ್ಯದಲ್ಲಿ ದ್ವಿಶತಕ ಬಾರಿಸಿ 10 ವಿಕೆಟ್‌ಗಳನ್ನು ಪಡೆದಿದ್ದು, ಐಪಿಎಲ್ ಆಡಿಷನ್‌ನಲ್ಲಿ ಸ್ಥಾನ ಪಡೆಯಲು ಅವರಿಗೆ ಸಹಾಯ ಮಾಡಿತು. ಸಿಕೆ ನಾಯ್ಡು ಟ್ರೋಫಿಯಲ್ಲಿ ಅವರು 6 ಪಂದ್ಯಗಳಲ್ಲಿ 79.5 ರ ಸರಾಸರಿಯಲ್ಲಿ 795 ರನ್ ಗಳಿಸಿದ್ದೂ ಕೂಡ ಐಪಿಎಲ್ ಒಪ್ಪಂದ ಪಡೆಯಲು ನೆರವಿಗೆ ಬಂದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.