
ನವದೆಹಲಿ (ಜೂ.29): ಈ ವರ್ಷದ ಪ್ರಾರಂಭದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಉದ್ಯಮಿ ಗೌತಮ್ ಅದಾನಿ, ಇತ್ತೀಚೆಗೆ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಕೊಂಡಿದ್ದು, ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರ ಭಾಗವಾಗಿಯೇ ಟೋಟಲ್ ಗ್ಯಾಸ್ ಲಿಮಿಟೆಡ್ ಜೊತೆಗೆ ಜಂಟಿ ಸಹಭಾಗಿತ್ವದಲ್ಲಿ ನಗರ ಅನಿಲ (ಗ್ಯಾಸ್) ಮೂಲಸೌಕರ್ಯ ವಿಸ್ತರಣೆಗೆ ಮುಂದಿನ 8-10 ವರ್ಷಗಳ ಅವಧಿಯಲ್ಲಿ 18 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಅದಾನಿ ಗ್ರೂಪ್ ಯೋಜನೆ ರೂಪಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವಾಹನಗಳಿಗೆ ಸಿಎನ್ ಜಿ ಹಾಗೂ ಮನೆಗಳು ಹಾಗೂ ಕೈಗಾರಿಕೆಗಳಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ ಪೂರೈಕೆ ವಿಸ್ತರಣೆಯ ಗುರಿಯನ್ನು ಕಂಪನಿ ಹೊಂದಿದೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಅದಾನಿ ಟೋಟಲ್ ಗ್ಯಾಸ್ ದೇಶದ 124 ಜಿಲ್ಲೆಗಳಲ್ಲಿ 52 ಪರವಾನಗಿಗಳನ್ನು ಹೊಂದಿದ್ದು, 460 ಸಿಎನ್ ಜಿ ಸ್ಟೇಷನ್ ಗಳು ಹಾಗೂ ಅಂದಾಜು 700,000 ಪೈಪ್ಡ್ ಅಡುಗೆ ಅನಿಲ ಗ್ರಾಹಕರನ್ನು ಹೊಂದಿದೆ. ಕಂಪನಿಯು ಭಾರತದಲ್ಲಿ ಶುದ್ಧ ಇಂಧನ ಆಯ್ಕೆಗಳಿಗೆ ಬೇಡಿಕೆ ಹೆಚ್ಚುತ್ತಿರೋದನ್ನು ಗಮನಿಸಿದೆ ಹಾಗೂ ಇದೇ ಕಾರಣದಿಂದ ಬೇಡಿಕೆಗೆ ಅನುಗುಣವಾಗಿ ತನ್ನ ಸಿಎನ್ ಜಿ ಸ್ಟೇಷನ್ ನೆಟ್ ವರ್ಕ್ ಹಾಗೂ ಪೈಪ್ ಲೈನ್ ಮೂಲಸೌಕರ್ಯ ವಿಸ್ತರಿಸುವ ಗುರಿ ಹೊಂದಿದೆ.
ಕಳೆದ ಆರ್ಥಿಕ ಸಾಲಿನಲ್ಲಿ (2022ರ ಏಪ್ರಿಲ್ ನಿಂದ 2023ರ ಮಾರ್ಚ್ ತನಕ) ಅದಾನಿ ಟೋಟಲ್ ಗ್ಯಾಸ್ ಹೆಚ್ಚುವರಿ ಮೂಲಸೌಕರ್ಯ ಸೃಷ್ಟಿಸಲು 1,150 ಕೋಟಿ ರೂ.ಗಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಿದೆ. ಶುದ್ಧ ಇಂಧನ ಮೂಲಗಳಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಬೇಡಿಕೆಯಿರುವ ಬಗ್ಗೆ ಸಕಾರಾತ್ಮಕ ಮನೋಭಾವ ಹೊಂದಿರುವ ಅದಾನಿ ಟೋಟಲ್ ಗ್ಯಾಸ್ ಸಿಎಫ್ ಒ ಪರಾಗ್ ಪರೀಖ್, ಮಾಲಿನ್ಯ ತಗ್ಗಿಸುವಲ್ಲಿ ಅನಿಲದ ಮಹತ್ವದ ಬಗ್ಗೆ ಕೂಡ ಹೆಚ್ಚಿನ ಒತ್ತು ನೀಡಿದ್ದಾರೆ.
ಸುಪ್ರೀಂ ಸಮಿತಿಯಿಂದ ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್: ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭರ್ಜರಿ ಜಿಗಿತ
ಲೈಸೆನ್ಸ್ ಹೊಂದಿರುವ ಪ್ರದೇಶಗಳಲ್ಲಿ ಉಕ್ಕಿನ ಪೈಪ್ ಲೈನ್ ಹಾಗೂ ಸಿಎನ್ ಜಿ ಸ್ಟೇಷನ್ ಗಳ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲು ಅದಾನಿ ಟೋಟಲ್ ಗ್ಯಾಸ್ ಸಿಇಒ ಸುರೇಶ್ ಪಿ.ಮಂಗ್ಲಾನಿ ಯೋಜನೆ ರೂಪಿಸಿದ್ದಾರೆ. ಮುಂದಿನ 7-8 ವರ್ಷಗಳ ಅವಧಿಯಲ್ಲಿ 1,800 ಸಿಎನ್ ಜಿ ಸ್ಟೇಷನ್ ಗಳನ್ನು ನಿರ್ಮಿಸುವ ಹಾಗೂ ಪೈಪ್ಡ್ ನ್ಯಾಚುರಲ್ ಗ್ಯಾಸ್ ಮೂಲಕ ಮನೆಗಳನ್ನು ಸಂಪರ್ಕಿಸುವ ಕಂಪನಿಯ ಬದ್ಧತೆ ಬಗ್ಗೆ ಕೂಡ ಸುರೇಶ್ ಪ್ರಸ್ತಾಪಿಸಿದ್ದಾರೆ. ಈ ಪ್ರಮುಖವಾದ ಅನಿಲ ವಿತರಣೆ ಉದ್ಯಮದ ಜೊತೆಗೆ ಕಂಪನಿಯು ಕಂಪ್ರೆಸ್ಡ್ ಬಯೋಗ್ಯಾಸ್ (CBG),ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಹಾಗೂ ಇತರ ಶುದ್ಧ ಇಂಧನ ಆಯ್ಕೆಗಳಿಗೆ ಸಂಬಂಧಿಸಿ ಉದ್ಯಮ ವಿಸ್ತರಿಸುವ ಗುರಿ ಹೊಂದಿದೆ.
ಭಾರತ ಸರ್ಕಾರ ಕೂಡ ನಗರ ಅನಿಲ ವಿತರಣೆಗೆ ಹೆಚ್ಚಿನ ಮಹತ್ವ ನೀಡಿದ್ದು, ಇದನ್ನು ದೇಶದ ಇಂಧನ ಮೂಲಗಳಲ್ಲಿ ನೈಸರ್ಗಿಕ ಅನಿಲದ ಪಾಲನ್ನು 2030ರೊಳಗೆ ಶೇ.6ರಿಂದ ಶೇ.30ಕ್ಕೆ ಏರಿಕೆ ಮಾಡುವ ಯೋಜನೆಯ ಭಾಗವಾಗಿ ಪರಿಗಣಿಸಿದೆ. ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಅದಾನಿ ಟೋಟಲ್ ಗ್ಯಾಸ್ ಎರಡು ಉಪಸಂಸ್ಥೆಗಳನ್ನು ಕೂಡ ಸ್ಥಾಪಿಸಿದೆ. ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಅದಾನಿ ಟೋಟಲ್ ಎನರ್ಜೀಸ್ ಇ-ಮೊಬಿಲಿಟಿ ಲಿಮಿಟೆಡ್ (ATEL) ಹಾಗೂ ಭಾರತದ ಬಯೋಮಾಸ್ ಇಂಧನ ಸಾಮರ್ಥ್ಯದ ಬಳಕೆಗೆ ಅದಾನಿ ಟೋಟಲ್ ಎನರ್ಜೀಸ್ ಬಯೋಮಾಸ್ ಲಿಮಿಟೆಡ್ (ATBL) ಎಂಬ ಸಂಸ್ಥೆಗಳನ್ನು ಸ್ಥಾಪಿಸಿದೆ.
ರಾಜ್ಯದಲ್ಲಿ ಅದಾನಿ ಗ್ರೂಪ್ ಹೂಡಿಕೆಗೆ ಮುಕ್ತ ಅವಕಾಶ: ಸಚಿವ ಎಂ.ಬಿ. ಪಾಟೀಲ್
ಅದಾನಿ ಟೋಟಲ್ ಎನರ್ಜೀಸ್ ಇ-ಮೊಬಿಲಿಟಿ ಲಿಮಿಟೆಡ್ (ATEL) ಪ್ರಸ್ತುತ ದ್ವಿಚಕ್ರ, fರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಇವಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ದೇಶಾದ್ಯಂತ ನಿರ್ಮಿಸುತ್ತಿದೆ. ಇನ್ನು ಅದಾನಿ ಟೋಟಲ್ ಎನರ್ಜೀಸ್ ಬಯೋಮಾಸ್ ಲಿಮಿಟೆಡ್ (ATBL) ಉತ್ತರ ಪ್ರದೇಶದಲ್ಲಿ ದೊಡ್ಡ ಕಂಪ್ರೆಸ್ಡ್ ಬಯೋಗ್ಯಾಸ (CBG) ಘಟಕ ನಿರ್ಮಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.