
ನವದೆಹಲಿ (ಅ.15): ಅಮುಲ್ ಹಾಲು ಖರೀದಿಸೋರಿಗೆ ಬೇಸರದ ಸಂಗತಿ ಇದು. ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಹಾಲು ಹಾಗೂ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಸಂಪೂರ್ಣ ಕೆನೆಭರಿತ ಹಾಲು ಹಾಗೂ ಎಮ್ಮೆ ಹಾಲಿನ ದರವನ್ನು ಲೀಟರ್ ಗೆ 2ರೂ. ಏರಿಕೆ ಮಾಡಿದೆ. ಗುಜರಾತ್ ಹೊರತುಪಡಿಸಿ ಬೇರೆ ಎಲ್ಲ ರಾಜ್ಯಗಳಿಗೂ ಈ ಪರಿಷ್ಕೃತ ದರ ಅನ್ವಯಿಸಲಿದೆ. ಆಗಸ್ಟ್ ಹಾಗೂ ಮಾರ್ಚ್ ನಲ್ಲಿ ಕೂಡ ಅಮುಲ್ ಬೆಲೆಯೇರಿಕೆ ಮಾಡಿದೆ. ಹೀಗಾಗಿ ಇದು ಈ ವರ್ಷದಲ್ಲಿ ಮೂರನೇ ದರ ಹೆಚ್ಚಳವಾಗಿದೆ. ಈ ಬಗ್ಗೆ ಜಿಸಿಎಂಎಂಎಫ್ ಎಂಡಿ ಆರ್ .ಎಸ್. ಸುಧಿ ಮಾಹಿತಿ ನೀಡಿದ್ದಾರೆ ಕೂಡ. ಬೆಲೆ ಹೆಚ್ಚಳದ ಪರಿಣಾಮ ಸಂಪೂರ್ಣ ಕೆನೆಭರಿತ ಹಾಲಿನ ಬೆಲೆ ಪ್ರತಿ ಲೀಟರ್ ಗೆ 61ರೂ.ನಿಂದ 63ರೂ.ಗೆ ಏರಿಕೆಯಾಗಿದೆ. ಆಗಸ್ಟ್ ನಲ್ಲಿ ಅಮುಲ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಿತ್ತು. ಈ ಹೆಚ್ಚಳದಿಂದ ಅಮುಲ್ ಹಾಲಿನ ಎಂಆರ್‌ಪಿಯಲ್ಲಿ ಶೇ. 4 ರಷ್ಟು ಏರಿಕೆಯಾಗಿತ್ತು. ಅಮುಲ್ ಗೋಲ್ಡ್‌ಹಾಲಿನ ದರ ಅರ್ಧ ಲೀಟರ್‌ಗೆ 31 ರೂ., ಅಮುಲ್ ತಾಜಾ ಹಾಲು ಅರ್ಧ ಲೀಟರ್‌ಗೆ 25 ರೂ. ಹಾಗೂ ಅಮುಲ್ ಶಕ್ತಿ ಹಾಲು ಅರ್ಧ ಲೀಟರ್‌ಗೆ 28 ರೂ. ಗೆ ಹೆಚ್ಚಳವಾಗಿತ್ತು.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ತನ್ನ ಗ್ರಾಹಕರಿಂದ ಪಡೆದ ಪ್ರತಿ 1 ರೂಪಾಯಿಯಲ್ಲಿ ಅಂದಾಜು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. ಹೀಗಾಗಿ ಹಾಲಿನ (Milk) ದರ (rate) ಹೆಚ್ಚಳ ಹಾಲು ಉತ್ಪಾದಕರಿಗೆ ಉತ್ತಮ ಹಾಲಿನ ದರ ನೀಡಲು ನೆರವು ನೀಡಲಿದೆ. ಈ ಹಿಂದೆ ದರ ಹೆಚ್ಚಳ ಮಾಡಿದ ಸಂದರ್ಭದಲ್ಲಿ ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹಾಲಿನ ದರ ದುಬಾರಿಯಾಗುತ್ತಿದೆ ಎಂದು ಅಮುಲ್ ಕಂಪನಿ ಹೇಳಿತ್ತು.
ಸ್ಪೇನ್ ಪತ್ರಿಕೆಯಲ್ಲಿ Indian Economy ಪ್ರಗತಿ ತೋರಿಸಲು ಹಾವಾಡಿಗನ ಚಿತ್ರ: ಜಾಲತಾಣಗಳಲ್ಲಿ ಟೀಕೆ
ಆಗಸ್ಟ್ ನಲ್ಲಿ ಮದರ್ ಡೈರಿ ಕೂಡ ಹಾಲಿನ ದರ ಹೆಚ್ಚಳ ಮಾಡಿತ್ತು. ಲೀಟರ್‌ಗೆ 2 ರೂ. ಹೆಚ್ಚಳ ಮಾಡಿತ್ತು. ಕೆನೆಭರಿತ ಹಾಲಿನ ದರ ಪ್ರತಿ ಲೀಟರ್ ಗೆ 59ರೂ. ನಿಂದ 61ರೂ.ಗೆ ಹೆಚ್ಚಳವಾಗಿತ್ತು. ಇನ್ನು ಟೋನ್ಡ್ ಹಾಲಿನ ದರ 51ರೂ.ಗೆ ಏರಿಕೆಯಾಗಿತ್ತು. ಇನ್ನು ಡಬಲ್ ಡೋನ್ಡ್ ಹಾಲಿನ ದರ ಲೀಟರ್ ಗೆ 45ರೂ.ಗೆ ಏರಿಕೆಯಾಗಿತ್ತು. ಹಸುವಿನ ಹಾಲಿನ ದರ ಲೀಟರ್ ಗೆ 53ರೂ.ಗೆ ಹೆಚ್ಚಳವಾಗಿತ್ತು.
ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಅಮುಲ್ (Amul) ಮತ್ತು ಇತರ ಐದು ಸಹಕಾರ ಸಂಘಗಳನ್ನು ವಿಲೀನಗೊಳಿಸಿ ಬಹು-ರಾಜ್ಯ ಸಹಕಾರಿ ಸಂಘವನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅಮಿತ್ ಷಾ ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ಈಶಾನ್ಯ ಸಹಕಾರ ಪರಿಷತ್ತಿನ (ಎನ್‌ಇಸಿ) 70 ನೇ ಸಭೆಯಲ್ಲಿ ತಿಳಿಸಿದ್ದರು. ಭೂತಾನ್ (Bhutan), ನೇಪಾಳ (Nepal), ಬಾಂಗ್ಲಾದೇಶ (Bangladesh) ಮತ್ತು ಶ್ರೀಲಂಕಾದಂತಹ (Sri Lanka) ದೇಶಗಳಿಗೆ ಹಾಲನ್ನು ತಲುಪಿಸಲು ನಮಗೆ ದೊಡ್ಡ ಅವಕಾಶವಿದೆ ಮತ್ತು ಈ ವಿಶ್ವ ಮಾರುಕಟ್ಟೆಯನ್ನು ತಲುಪಲು ಸರ್ಕಾರವು ರಫ್ತು ಕೇಂದ್ರವಾಗಿ ಕಾರ್ಯನಿರ್ವಹಿಸುವ ಬಹು-ರಾಜ್ಯ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದ್ದರು. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಅಗತ್ಯವನ್ನು ಶಾ ಒತ್ತಿ ಹೇಳಿದ್ದರು.
ಬಿಲಿಯನ್ ಡಾಲರ್ ತಲುಪಿದ ಭಾರತದ ಮೊಬೈಲ್ ರಫ್ತು; Modi ನಾಯಕತ್ವ ಕಾರಣ: ರಾಜೀವ್ ಚಂದ್ರಶೇಖರ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.