
ಅಮೆರಿಕದಲ್ಲಿ ಕೇವಲ 2 ವರ್ಷದ ಮಗುವನ್ನು ಪ್ರೀ-ಸ್ಕೂಲ್ಗೆ ಸೇರಿಸಬೇಕೆಂದ್ರೂ ನಿಮ್ಮ ಖಾತೆಯಲ್ಲಿ ಲಕ್ಷ ಲಕ್ಷ ಹಣ ಇರ್ಬೇಕು. ಅಮೆರಿಕದ ಸಿಮ್ಸ್ಬರಿ ನಗರದಲ್ಲಿ ವಾಸಿಸುವ ಸೋನಲ್ ಚೌಧರಿ ತಮ್ಮ ಮಗಳ ಅಡ್ಮಿಷನ್ಗಾಗಿ ಎಷ್ಟು ಖರ್ಚು ಮಾಡಿದ್ದೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದಕ್ಕರ ದಾಖಲೆ ಕೂಡ ನೀಡಿದ್ದಾರೆ.
ಸೋನಲ್ ಚೌಧರಿ, 68 ವರ್ಷಗಳ ಇತಿಹಾಸ ಹೊಂದಿರುವ ಒಂದು ಪ್ರೀ-ಸ್ಕೂಲ್ಗೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿ ಫೀಸ್ ಜೊತೆಗೆ ಮಕ್ಕಳಿಗೆ ಹೇಗೆ ಕಲಿಸುತ್ತಾರೆ ಎಂಬುದನ್ನೂ ವಿವರಿಸಿದ್ದಾರೆ. ಈ ಶಾಲೆಯಲ್ಲಿ ಪ್ರತಿ 8 ಮಕ್ಕಳಿಗೆ 2 ಶಿಕ್ಷಕರಿರುತ್ತಾರೆ. ಮಕ್ಕಳಿಗೆ ಹಾಡು, ಆಟ, ಯೋಗ, ಚಿತ್ರಕಲೆ, ಬೋರ್ಡ್ ಚಟುವಟಿಕೆಗಳು ಸೇರಿದಂತೆ ಆಟವಾಡುತ್ತಲೇ ಶಿಕ್ಷಣ ನೀಡಲಾಗುತ್ತೆ. ಕ್ಲಾಸ್ ನಲ್ಲೇ ಮಕ್ಕಳಿಗಾಗಿ ಆಟಿಕೆಗಳು, ಜಾರುಬಂಡಿ, ವಿವಿಧ ಕಲಿಕಾ ಸಾಮಗ್ರಿಗಳನ್ನು ಇಟ್ಟು, ಮಕ್ಕಳಿಗೆ ಬೇಸರವಾಗದಂತೆ ನೋಡಿಕೊಳ್ಳಲಾಗುತ್ತೆ. ಆಶ್ಚರ್ಯದ ವಿಷಯ ಅಂದ್ರೆ, ಈ ತರಗತಿಗಳು ಬೆಳಗ್ಗೆ 8.45 ರಿಂದ ಶುರುವಾಗಿ 11.45ಕ್ಕೆ ಮುಕ್ತಾಯವಾಗುತ್ತೆ. ಅಂದರೆ ದಿನಕ್ಕೆ ಕೇವಲ ಮೂರು ಗಂಟೆಗಳ ಕಾಲ ಮಾತ್ರ ಶಾಲೆ ನಡೆಯುತ್ತೆ.
ಶಾಲೆ ನೀಡಿರುವ ಫೀಸ್ ವಿವರದ ಪ್ರಕಾರ, 2 ವರ್ಷದ ಮಗುವನ್ನು ವಾರಕ್ಕೆ 2 ದಿನ ಕಳುಹಿಸಿದರೆ ಸುಮಾರು 3.9 ಲಕ್ಷ, 3 ದಿನಕ್ಕೆ 5.6 ಲಕ್ಷ, 4 ದಿನಕ್ಕೆ 7.4 ಲಕ್ಷ ಮತ್ತು 5 ದಿನ ಕಳುಹಿಸಿದರೆ ಸುಮಾರು 9.3 ಲಕ್ಷ ವಾರ್ಷಿಕ ಫೀಸ್ ಪಾವತಿಸಬೇಕು. 3 ರಿಂದ 5 ವರ್ಷದ ಮಕ್ಕಳಿಗೂ ವಾರದಲ್ಲಿ ಎಷ್ಟು ದಿನ ಬರುತ್ತಾರೋ ಅದರ ಆಧಾರದ ಮೇಲೆ ಸುಮಾರು 3 ಲಕ್ಷದಿಂದ 7 ಲಕ್ಷದವರೆಗೆ ಶುಲ್ಕ ನಿಗದಿಯಾಗಿದೆ. ಇದರ ಜೊತೆಗೆ ಬೆಳಗ್ಗೆ ಬೇಗ ಬಿಡಲು ಅಥವಾ ಮಧ್ಯಾಹ್ನ ಹೆಚ್ಚು ಹೊತ್ತು ಶಾಲೆಯಲ್ಲೇ ಇರಿಸಲು ಪ್ರತಿದಿನ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಸೋನಲ್ ಹೇಳುವಂತೆ, ಇವು ಖಾಸಗಿ ಪ್ರೀ-ಸ್ಕೂಲ್ಗಳಾಗಿದ್ದು, ಕಿಂಡರ್ಗಾರ್ಟನ್ನಿಂದ 12ನೇ ತರಗತಿವರೆಗೆ ಅಮೆರಿಕದ ಬಹುತೇಕ ಸರ್ಕಾರಿ ಶಾಲೆಗಳು ಉಚಿತವಾಗಿವೆ. ಸುಮಾರು 90 ಶೇಕಡಾ ಮಕ್ಕಳು ಅಲ್ಲೇ ಓದುತ್ತಾರೆ. ಆದರೆ ಈ ಪ್ರೀ-ಸ್ಕೂಲ್ಗಳಲ್ಲಿ ಶಿಕ್ಷಕರ ಸಂಖ್ಯೆ, ಮಕ್ಕಳ ಆರೈಕೆ ಮತ್ತು ಕಲಿಕೆಯ ಗುಣಮಟ್ಟವನ್ನು ನೋಡಿದರೆ ಹಲವರು ಈ ಫೀಸ್ ಸಮಂಜಸ ಎಂದು ಅಭಿಪ್ರಾಯಪಡುತ್ತಾರೆ. ಮಕ್ಕಳಿಗೆ ಒಂದು ವರ್ಷಕ್ಕೆ ನೀಡುವ ಈ ಪೀಸ್ ನಲ್ಲಿ ಭಾರತದಲ್ಲಿ ಒಂದು ಹೊಸ ಮಾರುತಿ ಸುಜುಕಿ ಬ್ರೆಝಾ ಕಾರನ್ನೇ ಖರೀದಿಸಬಹುದು ಅಂತ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.