
ಎಟಿಕಾ ವೆಲ್ತ್ ಸಂಸ್ಥೆಯ ಸಹ-ಸಂಸ್ಥಾಪಕ ಗಜೇಂದ್ರ ಕೊಠಾರಿ ಅವರು, ತಾವು ಪ್ರತಿ ತಿಂಗಳು ಮ್ಯೂಚುವಲ್ ಫಂಡ್ SIP ಗಳಲ್ಲಿ ಭಾರಿ ₹ 52 ಲಕ್ಷ ಹೂಡಿಕೆ ಮಾಡುತ್ತಿದ್ದು, ಪ್ರಸ್ತುತ ₹ 67 ಕೋಟಿ ನಿವ್ವಳ ಆಸ್ತಿ ಮೌಲ್ಯ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ಮುಂಬೈ ಮೂಲದ ಈ ಉದ್ಯಮಿ, ತಮ್ಮ ಸಂಪತ್ತು ನಿರ್ವಹಣೆಯ ತಂತ್ರಗಳನ್ನು ಹಂಚಿಕೊಂಡರು. ಅಲ್ಲದೆ, ಚಕ್ರ ಬಡ್ಡಿಯ (Compounding) ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯುವಜನರು ಸಾಧ್ಯವಾದಷ್ಟು ಬೇಗ ಉಳಿತಾಯ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ತಮ್ಮ ವೆಬ್‌ಸೈಟ್‌ನಲ್ಲಿ ಗಜೇಂದ್ರ ಕೊಠಾರಿ ಅವರು, ತಾವು ಅಸ್ಸಾಂನ ಜೋರ್ಹತ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲೂ ಇದನ್ನೇ ಪುನರುಚ್ಚರಿಸಿರುವ ಅವರು ತೀರಾ ಕಡಿಮೆ ಹಣದೊಂದಿಗೆ ಮುಂಬೈಗೆ ಬಂದ ದಿನಗಳನ್ನು ನೆನಪಿಸಿಕೊಂಡರು.
2004 ರಲ್ಲಿ ಮೊದಲ ಬಾರಿಗೆ ಮುಂಬೈಗೆ ಬಂದಾಗ, ಅಂಧೇರಿಯಲ್ಲಿ ತಿಂಗಳಿಗೆ ₹6,000 ಬಾಡಿಗೆಯ ಸಣ್ಣ ರೂಂ ನಲ್ಲಿ ಇತರ ಇಬ್ಬರೊಂದಿಗೆ ರೂಮ್‌ಮೇಟ್‌ಗಳ ಜೊತೆಗೆ ಇರುತ್ತಿದ್ದರು. ಅಂದರೆ ಇವರ ಪಾಲು ಕೇವಲ ₹2,000 ಆಗಿತ್ತು. ಆಗ ಅವರ ಮಾಸಿಕ ವೇತನ ₹30,000. ನಾನು ಅತ್ಯಂತ ಸರಳ ಜೀವನ ನಡೆಸುತ್ತಿದ್ದೆ, ಆದರೆ ಕಠಿಣ ಪರಿಶ್ರಮ ಪಡುತ್ತಿದ್ದೆ ಎಂದು ಅವರು ಹೇಳಿದರು.
16 ವರ್ಷಗಳ ಹಿಂದೆ, ಯಾವುದೇ ಯುವಕನಂತೆ ಕಣ್ಣುಗಳಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಮುಂಬೈಗೆ ಕಾಲಿಟ್ಟಿದ್ದೆ. ಮರೀನ್ ಡ್ರೈವ್‌ನಲ್ಲಿ ನಿಂತು ವೀಕ್ಷಿಸುವಾಗ, ಯಾವುದಾದರೂ ಒಂದು ದಿನ ಈ ಸಮುದ್ರಕ್ಕೆ ಅಭಿಮುಖವಾಗಿರುವ ಐಷಾರಾಮಿ ಮನೆಗಳಲ್ಲಿ ಒಂದನ್ನು ಖರೀದಿಸಿ ವಾಸಿಸಲು ನನಗೆ ಸಾಧ್ಯವೇ? ಎಂದು ಆಲೋಚಿಸುತ್ತಿದ್ದೆ ಎಂದಿದ್ದಾರೆ.
ವೈಯಕ್ತಿಕ ಹಣಕಾಸು ಸಲಹೆಗಾರರಾಗಿರುವ ಕೊಠಾರಿ, ತಾವು 30 ನೇ ವಯಸ್ಸಿನಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾಗಿ ಒಪ್ಪಿಕೊಳ್ಳುತ್ತಾರೆ. ಇಂದು ಅವರು ಸರಿಯಾದ ಹೂಡಿಕೆ ವಿಧಾನಗಳ ಪ್ರಬಲ ಪ್ರತಿಪಾದಕರಾಗಿದ್ದು, ದೀರ್ಘಾವಧಿಯ ಸಂಪತ್ತು ಸೃಷ್ಟಿಯಲ್ಲಿ ಚಕ್ರಬಡ್ಡಿಯ ಮಹತ್ವವನ್ನು ವಿವರಿಸುತ್ತಾರೆ.
ದೀರ್ಘಾವಧಿಯಲ್ಲಿ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸಬೇಕಾದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅನಿವಾರ್ಯ ಎಂಬುದನ್ನು ನಾನು ಕಂಡುಕೊಂಡೆ ಎಂದ ಅವರು, ಇಂದಿಗೂ ಹೆಚ್ಚಿನ ಭಾರತೀಯ ಕುಟುಂಬಗಳು ರಿಯಲ್ ಎಸ್ಟೇಟ್, ಫಿಕ್ಸ್ಡ್ ಡೆಪಾಸಿಟ್ ಮತ್ತು ಚಿನ್ನವನ್ನೇ ಹೆಚ್ಚು ನಂಬಿದ್ದಾರೆ ಎಂಬುದನ್ನು ಸುಲಭವಾಗಿ ವಿವರಿಸಿದರು.
ನಾನು ಈಕ್ವಿಟಿ ಅಥವಾ ಷೇರು ಎಂದು ಹೇಳಿದ ತಕ್ಷಣ, ಜನರು ಅದನ್ನು ಜೂಜು ಅಥವಾ ಅಪಾಯಕಾರಿ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪಾದ ಕಲ್ಪನೆ. ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಿದಾಗ, ನೀವು ಪ್ರಗತಿಯಲ್ಲಿರುವ ವ್ಯವಹಾರಗಳಲ್ಲಿ ಭಾಗಿದಾರರಾಗುತ್ತೀರಿ. ಹಣ ಗಳಿಸಲು ಇದು ವಿಶ್ವದ ಅತ್ಯಂತ ಬುದ್ಧಿವಂತ ಮಾರ್ಗ ಎಂದು ಅವರು ಹೇಳಿದರು.
ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಈ ಸಿಎಫ್‌ಎ (CFA), ನನ್ನ ಕುಟುಂಬ ಮತ್ತು ನಾನು ಸೇರಿ ಪ್ರತಿ ತಿಂಗಳು ₹52 ಲಕ್ಷ ಮೊತ್ತವನ್ನು ಎಸ್‌ಐಪಿ (SIP) ಮೂಲಕ ಹೂಡಿಕೆ ಮಾಡುತ್ತೇವೆ ಎಂದಿದ್ದಾರೆ.
ಕೇವಲ ಕೆಲವೇ ವರ್ಷಗಳಲ್ಲಿ ತಮ್ಮ ನಿವ್ವಳ ಆಸ್ತಿ ಮೌಲ್ಯ ₹62 ಕೋಟಿಯಿಂದ ₹67 ಕೋಟಿಗೆ ಏರಿಕೆಯಾಗಿದೆ ಎಂದು ಬಹಿರಂಗಪಡಿಸಿದ ಅವರು, ಒಮ್ಮೆ ಸೂಕ್ತ ಹೂಡಿಕೆ ಮಾಡಿದರೆ, ಸ್ವಲ್ಪ ಸಮಯದ ನಂತರ ನಿಮ್ಮ ಹಣವೇ ನಿಮಗಾಗಿ ದುಡಿಯಲು ಪ್ರಾರಂಭಿಸುತ್ತದೆ. 62 ಕೋಟಿ ರೂ. ಇದ್ದದ್ದು 67 ಕೋಟಿ ರೂ. ಎಂದು ಹೇಗೆ ಬದಲಾಯಿತು ಎಂಬುದು ನಿಮಗೇ ತಿಳಿಯುವುದಿಲ್ಲ ಎಂದು ಬಡ್ಡಿಯ ಶಕ್ತಿಯನ್ನು ಶ್ಲಾಘಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.