Amazon Now: ಮಂಗಳೂರು, ಮೈಸೂರಿಗೆ ಕಾಲಿಟ್ಟ ದೈತ್ಯ ಗಾತ್ರದ ಅಮೆಜಾನ್‌ ಕಂಪೆನಿ; 2800 ಕೋಟಿ ರೂ ಹೂಡಿಕೆ

Published : Apr 27, 2026, 04:17 PM IST
Amazon Now

ಸಾರಾಂಶ

Amazon Now 2800 Crore Rupees Investment: ಅಮೆಜಾನ್‌ ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಬೆಂಗಳೂರು: ಭಾರತದ 'ಕ್ವಿಕ್ ಕಾಮರ್ಸ್' (ವೇಗದ ವಿತರಣೆ) ಮಾರುಕಟ್ಟೆಯಲ್ಲಿ ದಿನ ದಿನಕ್ಕೂ ಪೈಪೋಟಿ ಜೋರಾಗಿದ್ದು, ಈ ವಲಯದಲ್ಲಿ ಪಾರುಪತ್ಯ ಸಾಧಿಸಲು ಇ-ಕಾಮರ್ಸ್ ದೈತ್ಯ 'ಅಮೆಜಾನ್' ಹೆಜ್ಜೆಯಿಟ್ಟಿದೆ. ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ತನ್ನ ಮಹತ್ವಾಕಾಂಕ್ಷೆಯ 'ಅಮೆಜಾನ್ ನೌ' ಸೇವೆಯನ್ನು ಈಗಾಗಲೇ ಆರಂಭಿಸಿರುವ ಕಂಪನಿ ಇದೀಗ ಈ ಸೇವೆಯನ್ನು ದೇಶದ 100 ನಗರಗಳಿಗೆ ವಿಸ್ತರಿಸುವುದಾಗಿ ಹೇಳಿದೆ.

2,800 ಕೋಟಿ ರೂ. ಹೂಡಿಕೆ

ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವಾಗಿ ಹೊರಹೊಮ್ಮುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.

ಮಂಗಳೂರು, ಮೈಸೂರಿನತ್ತ ಅಮೆಜಾನ್ ಚಿತ್ತ! 

ಈಗಾಗಲೇ ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೆಜಾನ್ ನೌ', ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಡುತ್ತಿದೆ.

ಈ ವಿಸ್ತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೆಜಾನ್ ದೇಶಾದ್ಯಂತ 1,000ಕ್ಕೂ ಹೆಚ್ಚು ವಿಶೇಷ 'ಮೈಕ್ರೋ-ಫುಲ್‌ಫಿಲ್‌ಮೆಂಟ್ ಕೇಂದ್ರ'ಗಳನ್ನು (ಎಂಎಫ್‌ಸಿ) ಸ್ಥಾಪಿಸುತ್ತಿದೆ. ಕರ್ನಾಟಕದ ನಗರಗಳಲ್ಲದೆ ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಲಕ್ನೋ, ಕಾನ್ಪುರ, ಚಂಡೀಗಢ, ಅಹಮದಾಬಾದ್, ಮೀರತ್, ಪಾಣಿಪತ್, ಕೊಚ್ಚಿ, ಅಮೃತಸರ ಮತ್ತು ವೈಜಾಗ್ ಸೇರಿದಂತೆ ಒಟ್ಟು 100 ಎರಡನೇ ಹಾಗೂ ಮೂರನೇ ಸ್ಥರದ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದೆ.

ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು-ತರಕಾರಿ

'ಅಮೆಜಾನ್ ನೌ' ಸೇವೆಯ ಅಡಿಯಲ್ಲಿ ಗ್ರಾಹಕರಿಗೆ ದಿನಸಿ (ಹಣ್ಣು, ತರಕಾರಿ, ಫ್ರೋಜನ್ ಫುಡ್), ವೈಯಕ್ತಿಕ ಆರೈಕೆ ಉತ್ಪನ್ನಗಳು, ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು, ಸಣ್ಣ ಗೃಹೋಪಯೋಗಿ ವಸ್ತುಗಳು, ಮಕ್ಕಳ ಉತ್ಪನ್ನಗಳು, ಸಾಕುಪ್ರಾಣಿಗಳ ಆಹಾರ ಮತ್ತು ಆರೋಗ್ಯ ಸಪ್ಲಿಮೆಂಟ್‌ಗಳು ಕೆಲವೇ ನಿಮಿಷಗಳಲ್ಲಿ ಡೆಲಿವರಿಯಾಗಲಿವೆ.

ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಮಾತ್ರವಲ್ಲ 16,000ಕ್ಕೂ ಹೆಚ್ಚು ರೈತರಿಗೂ ಲಾಭವಾಗಲಿದ್ದು, ಅಮೆಜಾನ್‌ನ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಲಾಭವನ್ನು ಇವರು ಪಡೆಯಲಿದ್ದಾರೆ. ಇವರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ಮಾರಾಟಗಾರರ ಮೂಲಕ ನೇರವಾಗಿ ಮತ್ತು ಅತಿ ವೇಗವಾಗಿ ಗ್ರಾಹಕರ ಕೈಸೇರಲಿವೆ.

ಅಮೆಜಾನ್ ಇದಕ್ಕಾಗಿ ಬೃಹತ್‌ ಜಾಲವನ್ನು ನಿರ್ಮಿಸಿದ್ದು ಸಾವಿರಾರು ದಿನಬಳಕೆ ವಸ್ತುಗಳು ನಿಮಿಷಗಳಲ್ಲಿ ಡೆಲಿವರಿಯಾಗಲಿದ್ದರೆ, 10 ಲಕ್ಷಕ್ಕೂ ಹೆಚ್ಚು ವಸ್ತುಗಳು ಬುಕ್ ಮಾಡಿದ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ವಸ್ತುಗಳು ಮರುದಿನ ಗ್ರಾಹಕರ ಕೈ ಸೇರಲಿವೆ.

ಪ್ರೈಮ್ ಸದಸ್ಯರ ಶಾಪಿಂಗ್ ಮೂರು ಪಟ್ಟು ಏರಿಕೆ!

"ಗ್ರಾಹಕರು 'ಅಮೆಜಾನ್ ನೌ' ಸೇವೆಯ ವೇಗ, ಮೌಲ್ಯ ಮತ್ತು ರೈತರಿಂದ ನೇರವಾಗಿ ಪಡೆಯುವ ತಾಜಾ ಉತ್ಪನ್ನಗಳ ಗುಣಮಟ್ಟವನ್ನು ಮೆಚ್ಚಿಕೊಂಡಿದ್ದಾರೆ,” ಎಂದಿರುವ ಅಮೆಜಾನ್ ಇಂಡಿಯಾದ 'ಎವರಿಡೇ ಎಸೆನ್ಶಿಯಲ್ಸ್‌ʼ ವಿಭಾಗದ ಉಪಾಧ್ಯಕ್ಷ ಹರ್ಷ ಗೋಯಲ್, “ಈ ಯಶಸ್ಸಿನ ಹಿನ್ನೆಲೆಯಲ್ಲಿ 1,000ಕ್ಕೂ ಹೆಚ್ಚು ಮೈಕ್ರೋ-ಫುಲ್‌ಫಿಲ್‌ಮೆಂಟ್ ಕೇಂದ್ರಗಳ ಜಾಲದೊಂದಿಗೆ 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.

'ಅಮೆಜಾನ್ ನೌ' ಬಳಸಲು ಆರಂಭಿಸಿದಾಗಿನಿಂದ ಪ್ರೈಮ್ ಸದಸ್ಯರ ಶಾಪಿಂಗ್ ಪ್ರಮಾಣ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಈ ವಿಸ್ತರಣೆ ಬಳಿಕವೂ ಪ್ರೈಮ್ ಸದಸ್ಯರು 'ಅನಿಯಮಿತ ಉಚಿತ ಡೆಲಿವರಿ' ಸೌಲಭ್ಯವನ್ನು ಪಡೆಯಲಿದ್ದಾರೆ.

ನಿಮ್ಮ ಪಿನ್‌ಕೋಡ್‌ನಲ್ಲಿ ಸೇವೆ ಲಭ್ಯವಿದೆಯೇ? ಚೆಕ್ ಮಾಡುವುದು ಹೇಗೆ?

ತಾವಿರುವ ಪ್ರದೇಶದ ಪಿನ್‌ಕೋಡ್‌ನಲ್ಲಿ 'ಅಮೆಜಾನ್ ನೌ' ಕ್ವಿಕ್ ಡೆಲಿವರಿ ಸೇವೆ ಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸಲು, ಗ್ರಾಹಕರು ಅಮೆಜಾನ್ ಆ್ಯಪ್ ತೆರೆದು ಮುಖಪುಟದ ಮೇಲ್ಭಾಗದ ಬ್ಯಾನರ್‌ನಲ್ಲಿರುವ ಸಿಡಿಲಿನ ಅಥವಾ Lightning ಆಕಾರದ 'Now' ಐಕಾನ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೇ 1ರಿಂದ LPG ಮತ್ತಷ್ಟು ದುಬಾರಿ? ಹೊಸ ನಿಯಮಗಳ ಬಗ್ಗೆ ಇಂದೇ ತಿಳಿದುಕೊಳ್ಳಿ
ಎಂಆರ್‌ಪಿಎಲ್ 4ನೇ ತ್ರೈಮಾಸಿಕದಲ್ಲಿ 119 ಕೋಟಿ ರು. ನಿವ್ವಳ ಲಾಭಾಂಶ- ಕಳೆದ ವರ್ಷ 85 ಚಿಲ್ಲರೆ ಮಾರಾಟದ ಸ್ಟೇಷನ್‌ ಆರಂಭ