ವಿಶ್ವದ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಗಳಲ್ಲೊಂದಾದ ಅಲಿಬಾಬಾ ಗ್ರೂಪ್ ತನ್ನ ಆಂತರಿಕ ಆಡಳಿತದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ. ಅದರ ಭಾಗವಾಗಿ ಕಂಪನಿಗೆ ನೂತನ ಮುಖ್ಯ ಹಣಕಾಸು ಅಧಿಕಾರಿಯನ್ನು ನೇಮಕ ಮಾಡಿದೆ.
ಹೆಚ್ಚುತ್ತಿರೋ ಸ್ಪರ್ಧೆ, ಆರ್ಥಿಕ ಹಿಂಜರಿತ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಜಗತ್ತಿನ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾದ ಅಲಿಬಾಬಾ (Alibaba) ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ತನ್ನ ಅಂತಾರಾಷ್ಟ್ರೀಯ ಹಾಗೂ ದೇಶೀಯ ಇ-ಕಾಮರ್ಸ್ ಉದ್ಯವನ್ನು ಮರುಸಂಘಟಿಸೋದಾಗಿ ಮಾಹಿತಿ ನೀಡಿರೋ ಜೊತೆ ಹೊಸ ಮುಖ್ಯ ಹಣಕಾಸು ಅಧಿಕಾರಿಯನ್ನು (CFO)ನೇಮಕ ಮಾಡಿರೋದಾಗಿ ಘೋಷಿಸಿದೆ. ಪ್ರಸ್ತುತ ಕಂಪನಿಯ ಉಪ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರೋ ಟೋಬಿ ಕ್ಸು (Toby Xu) ಏ.1ರಿಂದ ನೂತನ ಸಿಎಫ್ಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇ-ಕಾಮರ್ಸ್ ಕ್ಷೇತ್ರದಲ್ಲಿ ಹೆಚ್ಚುತ್ತಿರೋ ಸ್ಪರ್ಧೆ, ಆರ್ಥಿಕ ಹಿಂಜರಿತದ ಜೊತೆ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಶಿಸ್ತುಕ್ರಮ ತರೋ ಉದ್ದೇಶದಿಂದ ಅಲಿಬಾಬಾ ಈ ಬದಲಾವಣೆಗಳನ್ನು ಕೈಗೊಳ್ಳಲು ಮುಂದಾಗಿದೆ. ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಡಿಜಿಟಲ್ ಕಾಮರ್ಸ್ ಹಾಗೂ ಚೀನಾ ಡಿಜಿಟಲ್ ಕಾಮರ್ಸ್ ಎಂಬ ಎರಡು ಹೊಸ ಘಟಕಗಳನ್ನು ತೆರೆಯಲು ಉದ್ದೇಶಿಸಿರೋದಾಗಿಯೂ ಅಲಿಬಾಬಾ ತಿಳಿಸಿದೆ. ಸಂಸ್ಥೆಯ ಪ್ರಗತಿಗೆ ವೇಗ ನೀಡೋದು ಹಾಗೂ ಹೆಚ್ಚು ಚಾಣಾಕ್ಷ್ಯತನದಿಂದ ಕಾರ್ಯನಿರ್ವಹಿಸೋ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದಿದೆ.
undefined
ವಾರೆನ್ ಬಫೆಟ್ ಗೆ ಬಿಟ್ ಕಾಯಿನ್ ಅಂದ್ರೆ ಅಲರ್ಜಿ, ಯಾಕ್ ಗೊತ್ತಾ?
ಅಂತಾರಾಷ್ಟ್ರೀಯ ಡಿಜಿಟಲ್ ಕಾಮರ್ಸ್ ಘಟಕ ಅಲಿಬಾಬಾದ ವಿದೇಶಿ ರಾಷ್ಟ್ರಗಳ ಗ್ರಾಹಕರಿಗೆ ಸ್ಪಂದಿಸೋ ಜೊತೆ ಸಗಟು ವ್ಯವಹಾರದ ಉಸ್ತುವಾರಿ ವಹಿಸಲಿದೆ. ಅಲಿಎಕ್ಸ್ ಪ್ರೆಸ್( AliExpress),ಅಲಿಬಾಬಾ.ಕಾಮ್(Alibaba.com) ಹಾಗೂ ಲಝಡ (Lazada)ಈ ಘಟಕದಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಟೌಬವೋ ( Taobao) ಹಾಗೂ ಟಿ ಮಾಲ್ (Tmall) ಅಧ್ಯಕ್ಷರಾಗಿರೋ ಜಿಯಾಂಗ್ ಫ್ಯಾನ್ (Jiang Fan) ಈ ಘಟಕವನ್ನು ಮುನ್ನಡೆಸಲಿದ್ದಾರೆ. ಚೀನಾ ಡಿಜಿಟಲ್ ಕಾರ್ಮಸ್ ಘಟಕ ದೇಶೀಯ ಕಾಮರ್ಸ್ ಉದ್ಯಮದ ನೇತೃತ್ವ ವಹಿಸಲಿದೆ. ಇದನ್ನು ಅಲಿಬಾಬಾದ ಸಂಸ್ಥಾಪಕ ಸದಸ್ಯ ಟ್ರೂಡೆ ಡೈ (Trudy Dai) ಮುನ್ನಡೆಸಲಿದ್ದಾರೆ ಎಂದು ಅಲಿಬಾಬಾ ಸಂಸ್ಥೆ ಮಾಹಿತಿ ನೀಡಿದೆ.
ಟೋಬಿ ಕ್ಸು ನೂತನ ಸಿಎಫ್ಒ
ಏಪ್ರಿಲ್1 ರಿಂದ ಕಂಪನಿಯ ನೂತನ ಮುಖ್ಯ ಹಣಕಾಸು ಅಧಿಕಾರಿ (CFO) ಆಗಿ ಪ್ರಸ್ತುತ ಉಪ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರೋ ಟೋಬಿ ಕ್ಸು (Toby Xu)ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಮ್ಯಾಗಿ ವೂ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯ ನಾಯಕತ್ವ ಬದಲಾವಣೆ ಯೋಜನೆ ಭಾಗವಾಗಿ ಈ ನೇಮಕ ಮಾಡಲಾಗಿದೆ ಎಂದು ಅಲಿಬಾಬಾ ತಿಳಿಸಿದೆ.
ಕ್ಸು ಮೂರು ವರ್ಷಗಳ ಹಿಂದೆ ಅಲಿಬಾಬಾ ಸೇರಿದ್ದರು. 2019ರ ಜುಲೈನಲ್ಲಿ ಅವರನ್ನು ಉಪ ಸಿಎಫ್ಒ ಆಗಿ ನೇಮಕ ಮಾಡಲಾಗಿತ್ತು. ಈಗಿನ ಸಿಎಫ್ಒ ವು ಅಲಿಬಾಬಾಕ್ಕೆ ಸಂಬಂಧಿಸಿದ ಮೂರು ಪಬ್ಲಿಕ್ ಲಿಸ್ಟಿಂಗ್(Public listing) ನಡೆಸಲು ನೆರವು ನೀಡಿದ್ದರು. ಇವರು ಅಲಿಬಾಬಾ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ರಿಲಯನ್ಸ್ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್!
ದಂಡ ವಿಧಿಸಿದ್ದ ಚೀನಾ ಸರ್ಕಾರ
ವ್ಯಾಪಾರಿಗಳು ಅನ್ಯ ಆನ್‌ಲೈನ್ ಇ-ಕಾಮರ್ಸ್ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿಪಡಿಸುವ ಮೂಲಕ ಏಕಸ್ವಾಮ್ಯ ಸೃಷ್ಟಿಸಿದ ಕಾರಣಕ್ಕಾಗಿ ಆಲಿಬಾಬಾ ಗ್ರೂಪ್ ಮೇಲೆ ಚೀನಾ ಸರ್ಕಾರ ಈ ವರ್ಷದ ಏಪ್ರಿಲ್ ನಲ್ಲಿ 20 ಸಾವಿರ ಕೋಟಿ ರೂ. ದಂಡ ವಿಧಿಸಿತ್ತು. 2019ರಲ್ಲಿ ದೇಶೀಯವಾಗಿ ಆಲಿಬಾಬಾ ಎಷ್ಟುಆದಾಯವನ್ನು ಗಳಿಸಿತ್ತೋ ಅದರಲ್ಲಿ ಈ ದಂಡದ ಪಾಲು ಶೇ.4ರಷ್ಟಾಗಲಿದೆ ಎಂದು ದಂಡ ವಿಧಿಸಿರುವ ಚೀನಾದ ಮಾರುಕಟ್ಟೆನಿಯಂತ್ರಣ ಸಂಸ್ಥೆ ತಿಳಿಸಿದೆ.
ಆಗಸ್ಟ ನಲ್ಲಿ 10 ಉದ್ಯೋಗಿಗಳು ವಜಾ
ಆಲಿಬಾಬಾ ಕಂಪನಿ ಮ್ಯಾನೇಜರ್ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪ ಭಾರಿ ಸದ್ದು ಮಾಡಿತ್ತು. ಈ ಲೈಂಗಿಕ ದೌರ್ಜನ್ಯ ಮಾಹಿತಿ ಸಾರ್ವಜನಿಕವಾಗಿ ಸೋರಿಕೆ ಮಾಡಿದ ಆರೋಪದಡಿ ಆಲಿಬಾಬ ಕಂಪನಿ ತನ್ನ 10 ಉದ್ಯೋಗಿಗಳನ್ನುಆಗಸ್ಟ್ ನಲ್ಲಿ ವಜಾ ಮಾಡಿತ್ತು.ಆಲಿಬಾಬಾ ಮಾಜಿ ಮ್ಯಾನೇಜರ್ ವಿರುದ್ಧ ಮಹಿಳಾ ಉದ್ಯೋಗಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಳು. ಈ ಪ್ರಕರಣ ವಿಶ್ವದಲ್ಲಿ ಭಾರಿ ಸಚಂಲನ ಮೂಡಿಸಿತ್ತು. ಈ ಮಹಿಳಾ ಉದ್ಯೋಗಿ ತನಗಾದ ಲೈಂಗಿಕ ದೌರ್ಜನ್ಯ ಕುರಿತ ಫೋನ್ ಚಾಟ್ ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಈ ಪೋಸ್ಟ್‌ಗಳನ್ನು ಕಂಪನಿಯ 10 ಉದ್ಯೋಗಿಗಳು ಶೇರ್ ಮಾಡಿಕೊಂಡಿದ್ದರು. ಇಷ್ಟೇ ಅಲ್ಲ ಈ ಲೈಂಗಿಕ ದೌರ್ಜನ್ಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡಿಸಿದ್ದರು. ಹೀಗಾಗಿ 10 ಉದ್ಯೋಗಿಗಳನ್ನು ಆಲಿಲಾಬಾ ಕಂಪನಿ ವಜಾ ಮಾಡಿತ್ತು.