ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಇನ್ಫೋಸಿಸ್ ಸಂಸ್ಥೆಯಲ್ಲಿ ಶೇ.0.93 ಷೇರುಗಳನ್ನು ಹೊಂದಿದ್ದಾರೆ. ಈ ಮೂಲಕ ಅವರು ಪ್ರತಿ ಷೇರಿನ ಮೇಲೆ ಅವರು 17.50ರೂ. ಗಳಿಸಲಿದ್ದು, ಜೂನ್ 2ರ ವೇಳೆಗೆ 68.17 ಕೋಟಿ ರೂ. ಗಳಿಸಲಿದ್ದಾರೆ.
ಬೆಂಗಳೂರು (ಏ.15): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಭಾರತದ ಎರಡನೇ ಅತೀದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ನಿಂದ ಡಿವಿಡೆಂಡ್ ರೂಪದಲ್ಲಿ 68.17 ಕೋಟಿ ರೂ. ಗಳಿಸಲಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿಯಾಗಿರುವ ಅಕ್ಷತಾ ಕಳೆದ ವರ್ಷ ಕಂಪನಿಯಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದರು. ಪ್ರತಿ ಷೇರಿನ ಮೇಲೆ ಅವರು 17.50ರೂ. ಗಳಿಸಲಿದ್ದು, ಜೂನ್ 2ರ ವೇಳೆಗೆ 68.17 ಕೋಟಿ ರೂ. ಗಳಿಸಲಿದ್ದಾರೆ. ಇದಕ್ಕಾಗಿ ಅವರು ತನ್ನ ಷೇರುಗಳನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಕಳೆದ ವರ್ಷ ಅಕ್ಷತಾ ಮೂರ್ತಿ ಗಳಿಸಿದ ಡಿವಿಡೆಂಟ್ ಸೇರಿಸಿದರೆ ಅವರ ಒಟ್ಟು ಆದಾಯ 132.4 ಕೋಟಿ ರೂ. ಕಳೆದ ಅಕ್ಟೋಬರ್ ನಲ್ಲಿ ಇನ್ಫೋಸಿಸ್ ಪ್ರತಿ ಷೇರಿನ ಮೇಲೆ 16.50ರೂ. ಮಧ್ಯಂತರ ಡಿವಿಡೆಂಡ್ ಘೋಷಿಸಿತ್ತು.
ಇನ್ಫೋಸಿಸ್ ಜನವರಿ -ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶ ಪ್ರಕಟಿಸಿದ್ದು, 6,128 ಕೋಟಿ ರೂ. ಲಾಭ ಗಳಿಸಿದೆ. ಹಾಗೆಯೇ ಪ್ರತಿ ಷೇರಿಗೆ 17.50ರೂ. ಡಿವಿಡೆಂಡ್ ಘೋಷಿಸಿತ್ತು.ಕಳೆದ ವರ್ಷ ಮೂರ್ತಿ ಪ್ರತಿ ಷೇರಿನ ಮೇಲೆ 31ರೂ. ಡಿವಿಡೆಂಡ್ ಪಡೆದಿದ್ದರು. ಇದರಿಂದ ಆಕೆಗೆ 120.76 ಕೋಟಿ ರೂ. ಸಿಕ್ಕಿತ್ತು. ಇನ್ಫೋಸಿಸ್ ನಲ್ಲಿರುವ ಆಕೆಯ ಷೇರುಗಳ ಮೌಲ್ಯ 5400 ಕೋಟಿ ರೂ. ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಕಳೆದ ಅಕ್ಟೋಬರ್ ನಲ್ಲಿ ಬ್ರಿಟನ್ (Britian) ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಸುನಕ್ ಬ್ರಿಟನ್ ಪ್ರಜೆಯಾಗಿದ್ದು, ಅಕ್ಷತಾ ಮಾತ್ರ ಭಾರತದ ಪೌರತ್ವ (Citizenship)ತೊರೆದಿಲ್ಲ. ಅನೇಕ ಯುರೋಪಿಯನ್ ರಾಷ್ಟ್ರಗಳಂತೆ ಭಾರತ ಕೂಡ ದ್ವಿ ಪೌರತ್ವಕ್ಕೆ ಅವಕಾಶ ನೀಡುವುದಿಲ್ಲ.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ
ಇಂಗ್ಲೆಂಡ್ (England) ಕಾನೂನಿನ ಪ್ರಕಾರ ಯಾವುದೇ ತೆರಿಗೆ ಪಾವತಿಸದೆ ಅಕ್ಷತಾ ಮೂರ್ತಿ ಅಲ್ಲಿ 15 ವರ್ಷ ನೆಲೆಸಬಹುದಾಗಿದೆ. ಈ ವಿಷಯದ ಕುರಿತು ಇಂಗ್ಲೆಂಡ್ ನಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದಿವೆ. ತನ್ನ ಆದಾಯದ ಮೇಲೆ ತೆರಿಗೆ (Tax) ಪಾವತಿಸುತ್ತಿರೋದಾಗಿ ಅಕ್ಷತಾ ಮೂರ್ತಿ ಸ್ಪಷ್ಟನೆ ಕೂಡ ನೀಡಿದ್ದರು.
ಕರ್ನಾಟಕದ ಹುಬ್ಬಳ್ಳಿಯಲ್ಲಿ(Hubli) ಜನಿಸಿದ ಅಕ್ಷತಾ ಮೂರ್ತಿ, ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಆ ಬಳಿಕ ಕ್ಯಾಲಿಫೋರ್ನಿಯಾದ ಕ್ಲಾರ್ ಮೊಂಟ್ ಮೆಕ್ ಕೆನ್ನ ಕಾಲೇಜಿನಿಂದ ಅರ್ಥಶಾಸ್ತ್ರ (Economics) ಹಾಗೂ ಫ್ರೆಂಚ್ (French) ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಲಾಸ್ ಏಂಜೆಲ್ಸ್ ಫ್ಯಾಷನ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ಹಾಗೂ ಮರ್ಚೆಂಡೈಸಿಂಗ್ ನಿಂದ ಫ್ಯಾಷನ್ ಡಿಸೈನಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಅಧ್ಯಯನ ನಡೆಸುತ್ತಿರುವ ಸಮಯದಲ್ಲಿ ರಿಷಿ ಸುನಕ್ ಅವರನ್ನು ಭೇಟಿಯಾದರು. 2009ರಲ್ಲಿ ಅವರಿಬ್ಬರು ವಿವಾಹವಾದರು. ಅವರಿಗೆ ಕೃಷ್ಣ ಹಾಗೂ ಅನೌಷ್ಕ ಎಂಬ ಇಬ್ಬರು ಮಕ್ಕಳಿದ್ದಾರೆ.
ಅಕ್ಷಯ ತೃತೀಯದಂದು ಈ ರೀತಿಯ ಚಿನ್ನದ ನಾಣ್ಯ ಖರೀದಿಸಿ…
ಮೂರ್ತಿ ಅವರ ಕುಟುಂಬ ಇನ್ಫೋಸಿಸ್ ನಲ್ಲಿ ಶೇ.3.6 ಷೇರುಗಳನ್ನು ಹೊಂದಿದೆ. ಇದರಲ್ಲಿ ನಾರಾಯಣ ಮೂರ್ತಿ ಶೇ.0.40, ಅವರ ಪತ್ನಿ ಸುಧಾ ಮೂರ್ತಿ ಶೇ.0.82, ಮಗ ರೋಹನ್ ಶೇ.1.45 ಹಾಗೂ ಮಗಳು ಅಕ್ಷತಾ ಶೇ. 0.93 ಷೇರುಗಳನ್ನು ಹೊಂದಿದ್ದಾರೆ. ಅಕ್ಷತಾ ಮೂರ್ತಿ 'ಅಕ್ಷತಾ ಡಿಸೈನ್ಸ್' ಎಂಬ ಫ್ಯಾಷನ್ ಡಿಸೈನಿಂಗ್ (Fashion Design) ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆ ಗ್ರಾಮೀಣ ಭಾಗದ ಕುಶಲಕರ್ಮಿಗಳನ್ನು ಒಟ್ಟುಗೂಡಿಸಿ ವಿಭಿನ್ನ ವಿನ್ಯಾಸದ ದಿರಿಸುಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.