ಸಾವು ಎದುರಿಗೆ ಇದ್ದಾಗಲೂ ಭಯಪಡದ ರತನ್‌ ಟಾಟಾ, ಘಟನೆ ನೆನಪಿಸಿಕೊಂಡ ಏರ್‌ಸೆಲ್‌ ಮಾಲೀಕ!

By Santosh Naik  |  First Published May 30, 2024, 5:22 PM IST

ಸಾವು ತಪ್ಪಸಲು ಸಾಧ್ಯವಿಲ್ಲದೇ ಇರುವ ವಿಚಾರವಾದರೂ, ಸಾವು ಎಂದಾಗ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆದರೆ, ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್‌ ಟಾಟಾ ಮಾತ್ರ, ಸಾವು ಎದುರಿಗೆ ಇದ್ದಾಗಲೂ ಒಂದುಚೂರು ಭಯಪಟ್ಟಿರಲಿಲ್ಲ ಎಂದು ಏರ್‌ಸೆಲ್‌ ಕಂಪನಿಯ ಮಾಲೀಕ ಹೇಳಿದ್ದಾರೆ.


ನೀವಿನ್ನು ಭೂಮಿಯ ಮೇಲೆ ಬದುಕೋದು ಕೇವಲ 30 ನಿಮಿಷ ಮಾತ್ರ ಅಂತಾ ಗೊತ್ತಾದಾಗ ನಿಮ್ಮ ರಿಯಾಕ್ಷನ್‌ ಹೇಗಿರಬಹುದು? ಕೆಲವರಿಗೆ ಆಘಾತವಾಗಬಹುದು, ಇನ್ನೂ ಕೆಲವರು ಪ್ಯಾನಿಕ್‌ ಆಗಿ ತಮ್ಮ ಸಂಬಂಧಿಗಳಿಗೆ ಕರೆ ಮಾಡಲು ಶುರು ಮಾಡಬಹುದು. ಇನ್ನೂ ಕೆಲವರು ತಮ್ಮ ಅಂತ್ಯವನ್ನು ನೆನಪಿಸಿಕೊಂಡು ಕಣ್ಣೀರಾಗಬಹುದು. ಆದರೆ, ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್‌ ಟಾಟಾ ಮಾತ್ರ ಹಾಗಲ್ಲ. ತಮ್ಮ ಬದುಕಿನಲ್ಲಿ ಇನ್ನು ಕೇವಲ 30 ನಿಮಿಷಗಳು ಇವೆ ಎಂದು ಗೊತ್ತಾದಾಗಲೂ ಬಹಳ ತಾಳ್ಮೆಯಿಂದ ಇದ್ದರು. ಈ ಸ್ಪೂರ್ತಿದಾಯಕ ವಿಚಾರವನ್ನು ಏರ್‌ಸೆಲ್‌ ಕಂಪನಿಯ (Aircel) ಅಧ್ಯಕ್ಷ ಸಿ.ಶಿವಂಕರನ್‌ ತಿಳಿಸಿದ್ದಾರೆ. Figuring Out With Raj Shamani ಯೂಟ್ಯೂಬ್‌ (YouTube) ಪಾಡ್‌ಕಾಸ್ಟ್‌ನಲ್ಲಿ ಸಿ. ಶಿವಶಂಕರನ್‌ (C Sivasankaran) ಮಾತನಾಡಿರುವ ಹಲವು ವಿಚಾರಗಳು ರೀಲ್ಸ್‌ ಆಗಿ ವೈರಲ್‌ ಆಗುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಅವರು ರತನ್‌ ಟಾಟಾ (Ratan Tata) ಹಾಗೂ ತಮ್ಮ ಜೊತೆಗೆ ಆದ ಆಘಾತಕಾರಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

ಸಿಂಗಾಪುರದಿಂದ ಸೆಷೀಲ್ಸ್‌ಗೆ ವಿಮಾನದಲ್ಲಿ ನಾನು ಹಾಗೂ ರತನ್‌ ಟಾಟಾ ಇಬ್ಬರೂ ಪ್ರಯಾಣ ಮಾಡುತ್ತಿದ್ದೆವು. ಈ ಹಂತದಲ್ಲಿ ನಮಗೆ ವಿಮಾನದ ಒಂದು ಇಂಜಿನ್‌ ವಿಫಲವಾಗಿದೆ ಅನ್ನೋ ಫ್ಲೈಟ್‌ ಅಲರಾಂ ಬಂದಿತ್ತು. ಈ ಹಂತದಲ್ಲಿ ನಮ್ಮ ಜೊತೆ ಇದ್ದ ಟಾಟಾ ಕಂಪನಿಯ ಕಾರ್ಯದರ್ಶಿಗಳ ಪೈಕಿ ಒಬ್ಬರು, ಹಾಗೇನಾದರೂ ಇನ್ನೊಂದು ಇಂಜಿನ್‌ ಕೂಡ ಫೇಲ್‌ ಆದರೆ, 30 ನಿಮಿಷಗಳ ಒಳಗಾಗಿ ವಿಮಾನ ಕ್ರ್ಯಾಶ್‌ ಆಗುವ ಸಾಧ್ಯತೆ ಇರುತ್ತದೆ ಎಂದರು. ಸಾವು ತಮ್ಮ ಹತ್ತಿರದಲ್ಲಿಯೇ ಇದೆ ಎನ್ನುವಾಗ ತಾನು ಹೇಗೆ ಎಲ್ಲಾ ವಿಚಾರಗಳಿಂದ ವಿಮುಖನಾದೆ ಅನ್ನೋದನ್ನು ಅವರು ನೆನಪಿಸಿಕೊಂಡರು. ಈ ಹಂತದಲ್ಲಿ ನಾನು ನನ್ನ ಮಗನಿಗೆ ಈಮೇಲ್‌ ಕಳುಹಿಸಿದ್ದೆ. ನನ್ನ ಜಿಮೇಲ್ ಖಾತೆಯ ಪಾಸ್‌ವರ್ಡ್‌ಗಳನ್ನು ಆತನೊಂದಿಗೆ ಹಂಚಿಕೊಂಡಿದ್ದೆ. ನಾನು ಇನ್ನೂ ಹೆಚ್ಚು ಕಾಲ ಬದುಕುತ್ತೇನೆ ಅಂದುಕೊಂಡಿದ್ದೆ. ಆದರೆ, ನಾನೀಗ ಸಾಯೋದು ಖಚಿತ ಅಂತಾ ಆಗ ಒಪ್ಪಿಕೊಂಡಿದ್ದೆ..' ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

Tap to resize

Latest Videos

ಶಿವಶಂಕರನ್‌ ಒಂದೆಡೆ ಈ ಕೆಲಸವನ್ನೆಲ್ಲಾ ಮಾಡುತ್ತಿದ್ದರೆ, ರತನ್‌ ಟಾಟಾ ಮಾತ್ರ ಇದ್ಯಾವುದರಿಂದಲೂ ವಿಚಲಿತರಾಗಿರಲಿಲ್ಲ. ಅವರು ತುಂಬಾ ಚಿಲ್‌ ಆಗಿದ್ದರು. ಈ ಹಂತದಲ್ಲಿ ನಾನೂ ಕೂಡ ಅವರಿಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು, ಪೈಲಟ್‌ಗಳಿಗೆ ಅವರ ಕೆಲಸವನ್ನು ಮಾಡಲು ಬಿಟ್ಟರೆ ಸಾಕು ಎಂದಿದ್ದರು.

ಆದರೆ, ಈ ಆತಂಕದ ಸನ್ನಿವೇಶ ದುರ್ಘಟನೆಯಲ್ಲಿ ಅಂತ್ಯವಾಗಲಿಲ್ಲ. ವಿಮಾನದ ಸೆಕೆಂಡ್‌ ಇಂಜಿನ್‌ ಫೇಲ್‌ ಆಗದ ಕಾರಣ, ವಿಮಾನ ಯಶಸ್ವಿಯಾಗಿ ಲ್ಯಾಂಡ್‌ ಆಗಿತ್ತು. ವಿಮಾನ ಲ್ಯಾಂಡ್‌ ಆಗುವ ಒಂದು ನಿಮಿಷ ಮುನ್ನ ನಾನು ಕಿಟಕಿಯಿಂದ ಇಡೀ ವಿಮಾನ ನಿಲ್ದಾಣವನ್ನು ನೋಡಿದೆ. ಇಡೀ ಏರ್‌ಪೋರ್ಟ್‌, ನಮ್ಮ ವಿಮಾನಕ್ಕೆ ಕಾಯುತ್ತಾ ನಿಂತಿತ್ತು. ಅಂಬ್ಯುಲೆನ್ಸ್‌ಗಳು, ಅಗ್ನಿಶಾಮಕದಳದ ವಾಹನಗಳು ಸಜ್ಜಾಗಿ ನಿಂತಿದ್ದವು ಎಂದು ಶಿವಶಂಕರನ್‌ ನೆನಪಿಸಿಕೊಂಡಿದ್ದಾರೆ.  "ವಿಮಾನವು ಲ್ಯಾಂಡ್‌ ಆದನಂತರ ಜ್ವಾಲೆಯಿಂದ ಸುಟ್ಟುಹೋಗದಂತೆ ರಕ್ಷಿಸಲು ಈ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನನಗೆ ತಿಳಿಸಿದ್ದರು' ಎಂದಿದ್ದಾರೆ.

ರಾಜಕಾರಣಿಗಳು ಮೂಗುತೂರಿಸಿದ್ದರಿಂದ Aircel ಕಂಪನಿ ಕಳ್ಕೊಂಡೆ, ಈಗ ದೇಶ ಬದಲಾಗಿದೆ ಎಂದ ಮಾಲೀಕ!

ಯಾರಿವರು ಶಿವಶಂಕರನ್‌: C. ಶಿವಶಂಕರನ್ ಅವರು 2G ಮತ್ತು 3G ಡೇಟಾ ಸೇವೆಗಳನ್ನು ಒದಗಿಸುವ ಭಾರತದ ಆರಂಭಿಕ ಮೊಬೈಲ್ ಆಪರೇಟರ್‌ಗಳಲ್ಲಿ ಒಂದಾದ ಏರ್‌ಸೆಲ್‌ನ ಸಂಸ್ಥಾಪಕರು. ಹಣಕಾಸಿನ ತೊಂದರೆಗಳಿಂದಾಗಿ ಕಂಪನಿಯು 2018 ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತು. ಶಿವಶಂಕರನ್ ಅವರು 1985 ರಲ್ಲಿ ಟೆನಿಸ್ ತಾರೆ ವಿಜಯ್ ಅಮೃತರಾಜ್ ಅವರ ತಂದೆ ರಾಬರ್ಟ್ ಅಮೃತರಾಜ್ ಅವರಿಂದ ಸ್ಟರ್ಲಿಂಗ್ ಕಂಪ್ಯೂಟರ್ಗಳನ್ನು ಖರೀದಿಸುವ ಮೂಲಕ ತಮ್ಮ ಉದ್ಯಮ ಪ್ರಯಾಣ ಆರಂಭಿಸಿದ್ದರು. ಅವರು ಕೇವಲ 33,000 ರೂ ಬೆಲೆಯ ಕೈಗೆಟುಕುವ PC ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಗೆ ಎಂಟ್ರಿಯಾಗಿದ್ದರು. ಈ ವೇಳೆ ಭಾರತದ ಮಾರುಕಟ್ಟೆಯಲ್ಲಿ ಪಿಸಿಗಳ ಸರಾಸರಿ ಮೊತ್ತವೇ 80 ಸಾವಿರವಾಗಿತ್ತು. ಇದರಿಂದಾಗಿ ಸ್ಟರ್ಲಿಂಗ್‌ ದೇಶದ ಅಗ್ರ ಮೂರು ಕಂಪ್ಯೂಟರ್ ಕಂಪನಿಗಳಲ್ಲಿ ಒಂದಾಗಲು ಕಾರಣವಾಯಿತು. ನಂತರ, ಅವರು ಸುನಿಲ್ ಮಿತ್ತಲ್ ಅವರ ಭಾರತಿ ಟೆಲಿಕಾಂನಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿದರು, 1997 ರ ವೇಳೆಗೆ ಕಂಪನಿಯ 10 ಪ್ರತಿಶತದಷ್ಟು ಸ್ವಾಧೀನಪಡಿಸಿಕೊಂಡರು. ಆದಾಗ್ಯೂ, ಮಂಡಳಿಯ ಸ್ಥಾನಕ್ಕಾಗಿ ಅವರ ವಿನಂತಿಯನ್ನು ನಿರಾಕರಣೆ ಮಾಡಲಾಗಿತ್ತು. ಕೊನೆಗೆ, ನಷ್ಟ ಮಾಡಿಕೊಂಡು ಏರ್‌ಟೆಲ್‌ ಕಂಪನಿಯ ಷೇರುಗಳನ್ನು ಮಿತ್ತಲ್‌ಗೆ ಮಾರಾಟ ಮಾಡಿದ್ದರು.

40 ಸಾವಿರ ಕೋಟಿ ಆಸ್ತಿ ಬಿಟ್ಟು ಸನ್ಯಾಸಿಯಾದ ಶ್ರೀಮಂತ!

click me!