
ನವದೆಹಲಿ (ಮಾ.11): ಕೆಲವೇ ದಿನಗಳಲ್ಲಿ ಐಪಿಒ (IPO) ನಡೆಸಲು ಸಿದ್ಧತೆಯಲ್ಲಿ ತೊಡಗಿರೋ ಭಾರತೀಯ ಜೀವ ವಿಮಾ ನಿಗಮ (LIC) ಇಂದು (ಮಾ.11) ಪ್ರಸಕ್ತ ಆರ್ಥಿಕ ಸಾಲಿನ ಕೊನೆಯ ತ್ರೈಮಾಸಿಕ (Quater) ವರದಿ ಬಿಡುಗಡೆ ಮಾಡಿದೆ. ಕಳೆದ ಆರ್ಥಿಕ ಸಾಲಿಗೆ ಹೋಲಿಸಿದ್ರೆ ಈ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ (Profit) ಗಳಿಕೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಈ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಎಲ್ಐಸಿ (LIC) ಲಾಭ ಗಳಿಕೆ 234.91ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ಸಾಲಿನ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ ಗಳಿಕೆ ಕೇವಲ 91 ಲಕ್ಷ ರೂ. ಆಗಿತ್ತು.
ಪ್ರಸಕ್ತ ಹಣಕಾಸು ಸಾಲಿನ ಮೊದಲ 9 ತಿಂಗಳಲ್ಲಿ ಎಲ್ ಐಸಿ 1,642.78 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 2020-21ನೇ ಆರ್ಥಿಕ ಸಾಲಿನ ಇದೇ ಅವಧಿಯಲ್ಲಿ 7.08 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಆರು ತಿಂಗಳಲ್ಲಿ ಹೂಡಿಕೆಗಳನ್ನು (Investments) ಮಾರಾಟ ಮಾಡೋ ಮೂಲಕ ಎಲ್ಐಸಿ 29,102 ಕೋಟಿ ರೂ. ಲಾಭ ಗಳಿಸಿತ್ತು.
ಜೀವ ವಿಮಾ ಪಾಲಿಸಿದಾರರ (Policy holder) ಮೊದಲ ವರ್ಷದ ಪ್ರೀಮಿಯಂ (Premium) ಗಳಿಕೆ ಕೂಡ ಕಳೆದ ವರ್ಷದ 7,957.37ಕೋಟಿ ರೂ.ನಿಂದ 8,748.55 ಕೋಟಿ ರೂ.ಗೆ ಏರಿಕೆ ಕಂಡಿದೆ. ಇನ್ನು ರಿನಿವಲ್ ಪ್ರೀಮಿಯಂ ಕೂಡ ಹೆಚ್ಚಳ ಕಂಡುಬಂದಿದೆ. ಕಳೆದ ಬಾರಿಯ ಮೂರನೇ ತ್ರೈಮಾಸಿಕದಲ್ಲಿ 54,986.72 ಕೋಟಿ ರೂ. ಆಗಿದ್ದ ರಿನಿವಲ್ ಪ್ರೀಮಿಯಂ ಈ ಬಾರಿ 56,822.49 ಕೋಟಿ ರೂ.ಗೆ ಏರಿಕೆಯಾಗಿದೆ.
ಎಲ್ ಐಸಿ (LIC) ಫೆಬ್ರವರಿಯಲ್ಲೇ ಐಪಿಒ ಕರಡು (Draft) ಪ್ರತಿಗಳನ್ನು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ (SEBI) ಸಲ್ಲಿಕೆ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಎಲ್ಐಸಿ ಐಪಿಒಗೆ ಸೆಬಿ ಅನುಮತಿ ನೀಡಿದೆ. ಎಲ್ಐಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರ (Central Government) ಎಲ್ಐಸಿಯಲ್ಲಿನ ಶೇ.5ರಷ್ಟು ಷೇರುಗಳನ್ನು(Shares) ಮಾರಾಟ ಮಾಡಲು ಉದ್ದೇಶಿಸಿದೆ. ಈ ಮೂಲಕ 75,000 ಕೋಟಿ ರೂ. ಬಂಡವಾಳ (Investment) ಸಂಗ್ರಹಿಸೋ ಗುರಿ ಹೊಂದಿದೆ. ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವೇ ಆಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿ ತಲುಪಲು ಈ ಐಪಿಒ ನಿರ್ಣಾಯಕವಾಗಲಿದೆ.
LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!
ಎಲ್ಐಸಿ ಐಪಿಒನಲ್ಲಿ 26 ಕೋಟಿ ಪಾಲಿಸಿದಾರರಿಗೆ (Policy holders) 3.16 ಕೋಟಿ ಷೇರುಗಳನ್ನು (Shares) ಮೀಸಲಿಡಲಾಗಿದೆ. ಅಂದ್ರೆ ಶೇ.10ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಆದ್ರೆ ಪಾಲಿಸಿಯೊಂದಿಗೆ ಪ್ಯಾನ್ (PAN) ಜೋಡಿಸಿರೋ ಹಾಗೂ ಡಿಮ್ಯಾಟ್ ಖಾತೆ ಹೊಂದಿರೋ ಪಾಲಿಸಿದಾರರು ಮಾತ್ರ ಈ ಐಪಿಒನಲ್ಲಿ ಪಾಲ್ಗೊಳ್ಳಬಹುದಾಗಿದೆ. ಎಲ್ಐಸಿ ಪಾಲಿಸಿದಾರರು ಗರಿಷ್ಠ 4ಲಕ್ಷ ರೂ. ಮೌಲ್ಯದ ಷೇರು ಖರೀದಿಸಬಹುದಾಗಿದೆ. ಎಲ್ಐಸಿ ನೌಕರರಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಎಲ್ಐಸಿ ನೌಕರರು 6ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿಸಲು ಅವಕಾಶವಿದೆ. ಎಲ್ ಐಸಿ ಐಪಿಒನಲ್ಲಿ ಶೇ.35ರಷ್ಟು ರೀಟೆಲ್ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.
ಎಲ್ಐಸಿ ಐಪಿಒ (IPO) ಮುಂದಿನ ಆರ್ಥಿಕ ವರ್ಷಕ್ಕೆ ಮುಂದೂಡಲ್ಪಡೋ ಸಾಧ್ಯತೆಯೂ ಇದೆ ಎನ್ನಲಾಗಿದೆ. ರಷ್ಯಾ (Russia)-ಉಕ್ರೇನ್ (Ukraine) ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಐಸಿ (LIC) ಐಪಿಒ (IPO) ವೇಳಾಪಟ್ಟಿಯನ್ನು ಮರುಪರಿಶೀಲಿಸಲು ಸಭೆ ಕರೆಯಲಾಗಿದೆ ಎಂದು ಕೆಲವು ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.