LED ಲೈಟ್ ಆಮದಿನ ಮೇಲೆ ಹದ್ದಿನ ಕಣ್ಣಿಟ್ಟ ಸರ್ಕಾರ| ಈ ಬಾರಿ ಚೀನಾ ಆಟ ನಡೆಯಲ್ಲ| ಭಾರತ ಸರ್ಕಾರದ ಅಗ್ನಿ ಪರೀಕ್ಷೆ ಪಾಸಾದ್ರೆ ಮಾತ್ರ ಸಿಗಲಿದೆ ಕೊಂಚ ಸಿಹಿ
ನವದೆಹಲಿ(ಅ.08): ದೀಪಾವಳಿಗೂ ಮೊದಲೇ ಸರ್ಕಾರ LED ಲೈಟ್ ಆಮದಿನ ಮೇಲೆ ಹದ್ದಿನ ಕಣ್ಣು ಇರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲ ನೂತನ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಅನ್ವಯ ಆಮದು ಮಾಡಿಕೊಂಡ LED ಲೈಟ್‌ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(BIS)ನ ನಿಯಮಗಳಲ್ಲಿ ಪಾಸಾಗಬೇಕು. ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿಸಿರುವ LED ಲೈಟ್‌ಗಳ ಆಮದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
DGFTಫಾರಿನ್ ಟ್ರೇಡ್ ಪಾಲಿಸಿಯಲ್ಲಿ ಕೆಲ ಬದಲಾವಣೆಗಳನ್ನೂ ಮಾಡಿದೆ. ಇದರ ಅನ್ವಯ ಗುಣಮಟ್ಟ ಪರಿಶೀಲನೆಗೆ BIS ರ್ಯಾಂಡಮ್ ಸ್ಯಾಂಪಲ್ ಪಡೆದು ಅವುಗಳ ಟೆಸ್ಟಿಂಗ್ ನಡೆಸುತ್ತದೆ. ಆದೇಶದನ್ವಯ ಒಂದು ವೇಳೆ ಯಾವುದಾದರೂ ಸ್ಯಾಂಪಲ್ ಈ ಟೆಸ್ಟ್‌ನಲ್ಲಿ ಫೇಲ್ ಆದರೆ ಅದರ ಸಂಪೂರ್ಣ ಶಿಪ್‌ಮೆಂಟ್ ತಡೆಹಿಡಿಯಲಾಗುತ್ತದೆ. ಈ ಮೂಲಕ ಇದು ಮುಂದೆ ಯಾವುದೇ ಉಪಯೋಗಕ್ಕಿಲ್ಲದಂತಾಗುತ್ತದೆ.
ಇನ್ನು ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಗೆ ಬುದ್ಧಿ ಕಲಿಸಲು ಕಳೆದ ವಾರದಲ್ಲಿ ಚೀನಾದಿಂದ ಆಮದು ಮಾಡುವ ವಸ್ತುಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಇಷ್ಟೇ ಅಲ್ಲದೇ ಕಳೆದ ಕೆಲ ವರ್ಷಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಬಳಸಲಾಗುವ ಲೈಟ್ಸ್, ಪ್ರತಿಮೆಗಳು ಅಥವಾ ಅಲಂಕಾರಿಕ ವಸ್ತುಗಳು ಬಹುತೇಕ ವಸ್ತುಗಳು ಚೀನಾದಿಂದ ಆಮದು ಮಾಡಿಕೊಂಡದ್ದಾಗಿರುತ್ತವೆ.
ಇನ್ನು ಆಮದು ಮಾಡುವ ಅನೇಕ ವಸ್ತುಗಳು ಅನ್ಯ ವಿಭಾಗದಡಿ ಅಕ್ರಮವಾಗಿ ಭಾರತಕ್ಕೆ ತರಲಾಗುತ್ತದೆ. ಹೀಗಾಗೇ ಸರ್ಕಾರ ಮತ್ತಷ್ಟು ಎಚ್ಚರದಿಂದಿದೆ.