ಅನಿಲ್‌ ಅಂಬಾನಿಯ 1100 ಕೋಟಿ ರು. ತೆರಿಗೆ ಮನ್ನಾ!

By Web DeskFirst Published Apr 14, 2019, 7:47 AM IST
Highlights

ಫ್ರಾನ್ಸ್‌ನಲ್ಲಿ ಅನಿಲ್‌ ಅಂಬಾನಿಯ 1100 ಕೋಟಿ ರು. ತೆರಿಗೆ ಮನ್ನಾ!| ರಫೇಲ್‌ ಡೀಲ್‌ ಬೆನ್ನಲ್ಲೇ ಫ್ರಾನ್ಸ್‌ ಸರ್ಕಾರದ ‘ಕೊಡುಗೆ’| ರಿಲಯನ್ಸ್‌ ಫ್ಲಾಗ್‌ ಫ್ರಾನ್ಸ್‌ ಕಂಪನಿಗೆ ಭಾರಿ ಅನುಕೂಲ| ಫ್ರಾನ್ಸ್‌ನ ‘ಲಿ ಮಾಂಡೆ’ ಪತ್ರಿಕೆಯಲ್ಲಿ ಸ್ಫೋಟಕ ವರದಿ

ನವದೆಹಲಿ[ಏ.14]: ಉದ್ಯಮಿ ಅನಿಲ್‌ ಅಂಬಾನಿಗೆ ಪ್ರಧಾನಿ ನರೇಂದ್ರ ಮೋದಿಯವರು ರಫೇಲ್‌ ಯುದ್ಧವಿಮಾನ ಖರೀದಿಯಲ್ಲಿ ಭಾರಿ ಲಾಭ ಮಾಡಿಕೊಟ್ಟಿದ್ದಾರೆಂದು ಕಾಂಗ್ರೆಸ್‌ ಪಕ್ಷ ಆರೋಪಿಸುತ್ತಿರುವುದರ ನಡುವೆಯೇ ಫ್ರಾನ್ಸ್‌ನ ದಿನಪತ್ರಿಕೆಯೊಂದು ಸ್ಫೋಟಕ ಸುದ್ದಿ ಪ್ರಕಟಿಸಿದೆ. 2015ರಲ್ಲಿ ಫ್ರಾನ್ಸ್‌ನಿಂದ ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದ ಅಂತಿಮಗೊಂಡಿದೆ ಎಂದು ಮೋದಿ ಪ್ರಕಟಿಸಿದ ಕೆಲವೇ ತಿಂಗಳಲ್ಲಿ ಫ್ರಾನ್ಸ್‌ ಸರ್ಕಾರ ಅನಿಲ್‌ ಅಂಬಾನಿಯ 1100 ಕೋಟಿ ರು. ತೆರಿಗೆ ಬಾಕಿಯನ್ನು ಮನ್ನಾ ಮಾಡಿದೆ ಎಂದು ಅಲ್ಲಿನ ರಾಷ್ಟ್ರೀಯ ದಿನಪತ್ರಿಕೆ ‘ಲಿ ಮಾಂಡೆ’ ವರದಿ ಮಾಡಿದೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಅನಿಲ್‌ ಅಂಬಾನಿ ಮಾಲಿಕತ್ವದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿ, ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಫ್ರಾನ್ಸ್‌ನ ಕಾನೂನು ಚೌಕಟ್ಟಿನೊಳಗೆ ಆ ದೇಶದ ಎಲ್ಲಾ ಕಂಪನಿಗಳಿಗೆ ಸಿಗುವ ಅನುಕೂಲವನ್ನು ಬಳಸಿಕೊಂಡು ತೆರಿಗೆ ವಿವಾದ ಬಗೆಹರಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ ಮಾಲಿಕತ್ವದಲ್ಲಿರುವ ರಿಲಯನ್ಸ್‌ ಫ್ಲಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಎಂಬ ಟೆಲಿಕಮ್ಯುನಿಕೇಷನ್ಸ್‌ ಕಂಪನಿ ಫ್ರಾನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಂಪನಿಯು 2007ರಿಂದ 2012ರ ಅವಧಿಯಲ್ಲಿ ಒಟ್ಟು 151 ಮಿಲಿಯನ್‌ ಯುರೋ (ಸುಮಾರು 1182 ಕೋಟಿ ರು.) ತೆರಿಗೆ ಪಾವತಿಸಬೇಕು ಎಂದು ಫ್ರಾನ್ಸ್‌ನ ತೆರಿಗೆ ಇಲಾಖೆಯು ತನಿಖೆ ನಡೆಸಿ 2015ರಲ್ಲಿ ನೋಟಿಸ್‌ ನೀಡಿತ್ತು.

ಅದೇ ವರ್ಷ ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಫ್ರಾನ್ಸ್‌ನ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್‌ ಹೊಲಾಂಡೆ ಮಧ್ಯೆ ಭಾರತಕ್ಕೆ 36 ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದವಾಯಿತು. ಆ ಒಪ್ಪಂದದ ಬೆನ್ನಲ್ಲೇ ಅಕ್ಟೋಬರ್‌ ತಿಂಗಳಿನಲ್ಲಿ ಫ್ರಾನ್ಸ್‌ನ ಅಧಿಕಾರಿಗಳು ರಿಲಯನ್ಸ್‌ನಿಂದ ಕೇವಲ 56 ಕೋಟಿ ರು. ತೆರಿಗೆ ಕಟ್ಟಿಸಿಕೊಂಡು ಇನ್ನುಳಿದ ಮೊತ್ತವನ್ನು ಮನ್ನಾ ಮಾಡಿದರು ಎಂದು ‘ಲಿ ಮಾಂಡೆ’ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ವಕ್ತಾರರು, ‘ಫ್ರಾನ್ಸ್‌ನ ತೆರಿಗೆ ಇಲಾಖೆಯ ತೆರಿಗೆ ಬೇಡಿಕೆಯೇ ಸಂಪೂರ್ಣ ಕಾನೂನುಬಾಹಿರವಾಗಿತ್ತು. 2008-12ರ ಅವಧಿಯಲ್ಲಿ ಫ್ಲಾಗ್‌ ಫ್ರಾನ್ಸ್‌ ಕಂಪನಿಗೆ 20 ಕೋಟಿ ರು. ನಷ್ಟವಾಗಿತ್ತು. ಆದರೂ ಫ್ರಾನ್ಸ್‌ನ ಅಧಿಕಾರಿಗಳು 1100 ಕೋಟಿ ರು.ಗಳಿಗೂ ಹೆಚ್ಚು ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದರು. ನಂತರ ಫ್ರಾನ್ಸ್‌ ಸರ್ಕಾರದ ತೆರಿಗೆ ಕಾಯ್ದೆಯನ್ನು ಬಳಸಿಕೊಂಡು ಪರಸ್ಪರ ಸಮ್ಮತಿಯ ಮೇಲೆ 56 ಕೋಟಿ ರು.ಗಳಷ್ಟುತೆರಿಗೆ ಪಾವತಿಸಿ ವ್ಯವಹಾರ ಚುಕ್ತಾ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದೆ.

click me!