ಮುಂದುವರಿದ ಅದಾನಿ ಗ್ರೂಪ್ ಷೇರು ಕುಸಿತ; ಲೋವರ್ ಸರ್ಕ್ಯೂಟ್ ನಲ್ಲಿ 6 ಷೇರುಗಳು!

Published : Feb 13, 2023, 06:23 PM IST
ಮುಂದುವರಿದ ಅದಾನಿ ಗ್ರೂಪ್ ಷೇರು ಕುಸಿತ; ಲೋವರ್ ಸರ್ಕ್ಯೂಟ್ ನಲ್ಲಿ 6 ಷೇರುಗಳು!

ಸಾರಾಂಶ

ಅದಾನಿ ಗ್ರೂಪ್ ಷೇರುಗಳು ಸೋಮವಾರ ಕೂಡ ಭಾರೀ ಕುಸಿತ ಕಂಡಿವೆ. ಎಲ್ಲ 10  ಷೇರುಗಳು ನಷ್ಟದ ಮಟ್ಟದಲ್ಲಿದ್ದರೆ, 6 ಷೇರುಗಳು ಲೋವರ್ ಸರ್ಕ್ಯೂಟ್ ಮಿತಿಯಲ್ಲಿ ಲಾಕ್ ಆಗಿವೆ. ಈ ಮೂಲಕ ಸತತ ನಾಲ್ಕನೇ ವಾರವೂ ಅದಾನಿ ಗ್ರೂಪ್ ಷೇರುಗಳು ಕುಸಿತ ಮುಂದುವರಿಸಿವೆ. 

ಮುಂಬೈ (ಫೆ.13): ಅದಾನಿ ಗ್ರೂಪ್ ಷೇರುಗಳ ಕುಸಿತ ಈ ವಾರವೂ ಮುಂದುವರಿದಿದೆ. ಇಂದು (ಫೆ.13) ಅದಾನಿ ಗ್ರೂಪ್ ಎಲ್ಲ 10  ಷೇರುಗಳು ನಷ್ಟದ ಮಟ್ಟದಲ್ಲಿದ್ದರೆ, 6 ಷೇರುಗಳು ಲೋವರ್ ಸರ್ಕ್ಯೂಟ್ ಮಿತಿಯಲ್ಲಿ ಲಾಕ್ ಆಗಿವೆ. ಈ ಮೂಲಕ ಅದಾನಿ ಗ್ರೂಪ್ ಷೇರುಗಳು ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ವಾರವೂ ಹಿನ್ನಡೆ ಅನುಭವಿಸಿವೆ. ಅದಾನಿ ಗ್ರೂಪ್ ಮುಂದಿನ ಹಣಕಾಸು ವರ್ಷಕ್ಕೆ ಆದಾಯದ ಬೆಳವಣಿಗೆ ಗುರಿಯನ್ನು ಶೇ.15ರಿಂದ ಶೇ.20ಕ್ಕೆ ಇಳಿಕೆ ಮಾಡಿದೆ. ಇದು ಹಿಂದಿನ ಗುರಿ ಶೇ.40 ಹೋಲಿಸಿದ್ರೆ ಅತೀಕಡಿಮೆ ಎಂದು ಬ್ಲೂಮ್ ಬರ್ಗ್ ಇಂದು ವರದಿ ಮಾಡಿದ ಬಳಿಕ ಅದಾನಿ ಸಮೂಹದ ಷೇರುಗಳು ಗಮನಾರ್ಹ ಕುಸಿತ ದಾಖಲಿಸಿವೆ. ಇನ್ನು ಅದಾನಿ ಗ್ರೂಪ್ ತನ್ನ ಆದಾಯ ಗುರಿ ಪರಿಷ್ಕರಿಸಿದ ಬಳಿಕ ಹಾಗೂ ಮೂಡೀಸ್ ಈ ಸಮೂಹದ ನಾಲ್ಕು ಸಂಸ್ಥೆಗಳ ರೇಟಿಂಗ್ ತಗ್ಗಿಸಿರುವುದು ಕೂಡ ಷೇರುಗಳಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ. ಹಿಂಡನ್ ಬರ್ಗ್ ವರದಿ ಅದಾನಿ ಸಮೂಹದ ಮೇಲೆ ಷೇರು ಬೆಲೆ ತಿರುಚುವಿಕೆ ಹಾಗೂ ವಂಚನೆ ಆರೋಪ ಮಾಡಿದ ಬಳಿಕ ಅದಾನಿ ಸಮೂಹದ ಷೇರುಗಳು ಗಣನೀಯ ಕುಸಿತ ಕಂಡಿವೆ. 

ಅದಾನಿ ಗ್ರೂಪ್ ಈ ಹಿಂದಿನಂತೆ ವೇಗದ ವಿಸ್ತರಣೆ ಯೋಜನೆಗಳ ಬದಲು ಹಣಕಾಸಿನ ಸ್ಥಿರತೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ. ಪರಿಣಾಮವಾಗಿ ಬಂಡವಾಳ ವೆಚ್ಚವನ್ನು ತಗ್ಗಿಸುವ ನಿರ್ಧಾರ ಮಾಡಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿತ್ತು. ಈ ವರದಿ ಈಗಾಗಲೇ ಕುಸಿತದಲ್ಲಿರುವ ಅದಾನಿ ಗ್ರೂಪ್ ಷೇರುಗಳ ಬೆಲೆ ಇನ್ನಷ್ಟು ತಗ್ಗಲು ಕಾರಣವಾಗಿದೆ.

ಹಿಂಡನ್‌ಬರ್ಗ್‌ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್‌’ ನೇಮಕ

ಅದಾನಿ ಎಂಟರ್ ಪ್ರೈಸಸ್ ಲಿ. ಷೇರು ಗರಿಷ್ಠ ಶೇ. 7.37ರಷ್ಟು ಕುಸಿತ ದಾಖಲಿಸಿದೆ. ಇನ್ನು ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಷೇರುಗಳು ಶೇ.6.10ರಷ್ಟು ಇಳಿಕೆ ಕಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ ಮಿಷನ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್ ಮಿಷನ್ ಷೇರುಗಳು ಶೇ.5ರ ಲೋವರ್ ಸರ್ಕ್ಯೂಟ್ ನಲ್ಲಿ ಲಾಕ್ ಆಗಿವೆ. ಇನ್ನು ಅದಾನಿ ಗ್ರೂಪ್ ಖರೀದಿಸಿರುವ ಸಂಸ್ಥೆಗಳ ಷೇರುಗಳು ಕೂಡ ಇಳಿಕೆ ದಾಖಲಿಸಿವೆ. ಅದಾನಿ ಗ್ರೂಪ್ ಇತ್ತೀಚೆಗಷ್ಟೇ ಖರೀದಿಸಿರುವ ಅಂಬುಜಾ ಸಿಮೆಂಟ್ ಷೇರುಗಳು ಶೇ.  5.04 ಕುಸಿತ ದಾಖಲಿಸಿವೆ. ಇನ್ನು ಎಸಿಸಿ ಶೇ. 3.42 ಹಾಗೂ ಎನ್ ಡಿಟಿವಿ ಷೇರುಗಳು ಶೇ. 4.99 ಕುಸಿತ ದಾಖಲಿಸುವ ಮೂಲಕ ಲೋವರ್ ಸರ್ಕ್ಯೂಟ್ ನಲ್ಲಿವೆ. 

ಅದಾನಿ ಕಂಪನೀಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ; ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ ಎಂದ ಸುಪ್ರೀಂ

ಜನವರಿ 24ರಂದು ಅಮೆರಿಕ ಮೂಲದ ಹಿಂಡನ್ ಬರ್ಗ್ 100 ಪುಟಗಳ ವರದಿಯಲ್ಲಿ ವಂಚನೆ ಆರೋಪ ಮಾಡಿದ ಕೆಲವೇ ದಿನಗಳಲ್ಲಿ ಗೌತಮ್ ಅದಾನಿ 120 ಬಿಲಿಯನ್‌ ಡಾಲರ್‌ಗಿಂತಲೂ ಅಧಿಕ ನಷ್ಟ ಅನುಭವಿಸಿದ್ದಾರೆ. ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್‌ನ 20 ಸಾವಿರ ಕೋಟಿ ರು. ಮೌಲ್ಯದ ಷೇರು (ಎಫ್‌ಪಿಒ) ಮಾರಾಟವನ್ನು ಇತ್ತೀಚೆಗೆ ಸ್ಥಗಿತಗೊಳಿಸಿತ್ತು. ಈ ವಹಿವಾಟಿನಲ್ಲಿ ಹೂಡಿಕೆ ಮಾಡಲು ಬಂದಿದ್ದ ಇಬ್ಬರು ಮಾರಿಷಸ್‌ ಹೂಡಿಕೆದಾರರಿಗೂ ಅದಾನಿಗೂ ಯಾವ ನಂಟಿದೆ ಎಂಬ ಬಗ್ಗೆ ಮಾರುಕಟ್ಟೆ ನಿಯಂತ್ರಕ ‘ಸೆಬಿ’ ತನಿಖೆ ಪ್ರಾರಂಭಿಸಿದೆ. ಈ ತನಿಖೆಯ ಮಾಹಿತಿಯನ್ನು ಸೆಬೆ ಈ ವಾರ ಹಂಚಿಕೊಳ್ಳಲಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಇನ್ನು ಅದಾನಿ ಗ್ರೂಪ್ ಷೇರುಗಳು ತೀವ್ರ ಇಳಿಕೆ ದಾಖಲಿಸಿದ ಸಂದರ್ಭದಲ್ಲಿ ಕೈಗೊಂಡ ಕಣ್ಗಾವಲು ಕ್ರಮಗಳ ಬಗ್ಗೆ  ಸೆಬಿ ಫೆ.15ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಲಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌