ಅಮೆರಿಕದ ಶಾರ್ಟ್‌ಸೆಲ್ಲರ್ ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ಒಂದೇ ಒಂದು ವರದಿಯಂದ ಅದಾನಿ ಗ್ರೂಪ್ ಒಂದೇ ವಾರದಲ್ಲಿ 10 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದೆ. ಈ ನಡುವೆ ಅದಾನಿ ಗ್ರೂಪ್‌ನ ಚೇರ್ಮನ್ ಗೌತಮ್ ಅದಾನಿ ವಿಶ್ವದ ಅಗ್ರ 20 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ.
ಮುಂಬೈ (ಫೆ.4): ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿತದ ಪ್ರಕ್ರಿಯೆ ಶುಕ್ರವಾರವೂ ಮುಂದುವರೆದಿದ್ದು, ಕಂಪನಿಯ ಒಟ್ಟಾರೆ ಷೇರು ಮೌಲ್ಯ ಮತ್ತೆ 20 ಶತಕೋಟಿ ಡಾಲರ್‌ನಷ್ಟುಕುಸಿತ ಕಂಡಿದೆ. ಇದರೊಂದಿಗೆ ಕಳೆದ 1 ವಾರದಲ್ಲಿ ಕಂಪನಿಯ ಷೇರು ಮೌಲ್ಯ ಕುಸಿತ 120 ಶತಕೋಟಿ ಡಾಲರ್ (ಅಂದಾಜು 10 ಲಕ್ಷ ಕೋಟಿ ರು.) ದಾಟಿದೆ. ಇನ್ನೊಂದೆಡೆ ಕಂಪನಿಯ ಷೇರು ಬೆಲೆ ಕುಸಿತದ ಪರಿಣಾಮ, ಗೌತಮ್ ಅದಾನಿ ಸಂಪತ್ತಿನಲ್ಲೂ ಭಾರೀ ಇಳಿಕೆ ಬಂದಿದ್ದು, ಅವರ ಒಟ್ಟಾರೆ ಸಂಪತ್ತು ಇದೀಗ 5 ಲಕ್ಷ ಕೋಟಿ ರು. ಆಸುಪಾಸಿಗೆ ಬಂದಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಅನ್ವಯ ಅವರೀಗ ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದು, 5 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ 21ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಜನವರಿ ಬಳಿಕ ಗೌತಮ್ ಅದಾನಿ ಆಸ್ತಿಯಲ್ಲಿ 4.85 ಲಕ್ಷ ಕೋಟಿ ರು.ಗೂ ಹೆಚ್ಚಿನ ಕುಸಿತ ದಾಖಲಾಗಿದೆ. ಅಂದರೆ ಬಹುತೇಕ ಶೇ.50ರಷ್ಟುಸಂಪತ್ತು ಕರಗಿ ಹೋಗಿದೆ. ತಿಂಗಳ ಹಿಂದಷ್ಟೇ ಅದಾನಿ ವಿಶ್ವದ 3ನೇ ಶ್ರೀಮಂತ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಅದಾನಿ ಸಮೂಹಕ್ಕೆ 27000 ಕೋಟಿ ರು. ಸಾಲ: ಅದಾನಿ ಸಮೂಹದ ಕಂಪನಿಗಳಿಗೆ ತಾನು ಒಟ್ಟಾರೆ 27000 ಕೋಟಿ ರು. ಸಾಲ ನೀಡಿರುವುದಾಗಿ ಅಥವಾ ಷೇರಿನಲ್ಲಿ ಹೂಡಿಕೆ ಮಾಡಿರುವುದಾಗಿ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರ, ‘ಎಸ್‌ಬಿಐನ ಒಟ್ಟಾರೆ ಒಟ್ಟಾರೆ ಸಾಲದಲ್ಲಿ ಅದಾನಿಗೆ ನೀಡಿರುವ ಪಾಲು ಶೇ.0.88ರಷ್ಟುಮಾತ್ರ. ಹೀಗಾಗಿ ಈ ಸಾಲದ ಪ್ರಮಾಣದ ಬ್ಯಾಂಕ್‌ನ ಸಾಲ ಮರುಪಾವತಿ ಬಾಧ್ಯತೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹೇಳಿದ್ದಾರೆ. ಅಲ್ಲದೆ ಅದಾನಿ ಸಮೂಹದ ಷೇರುಗಳ ಮೇಲೆ ಯಾವುದೇ ಸಾಲ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ‘ಮೇಲೆ ಪ್ರಸ್ತಾಪಿಸಲಾಗಿರುವ ಸಾಲದ ಯೋಜನೆಯು ಸಾಕಷ್ಟುಆಸ್ತಿ ಮತ್ತು ನಗದು ಚಲಾವಣೆಯನ್ನು ಹೊಂದಿದೆ. ಜೊತೆಗೆ ಅದಾನಿ ಕಂಪನಿ ಸಾಲ ಮರುಪಾವತಿಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ’ ಎಂದು ಹೇಳಿದ್ದಾರೆ
ಹಿಂಡೆನ್‌ಬರ್ಗ್ ವಿರುದ್ಧ ಕ್ರಮ ಕೋರಿ ಸುಪ್ರೀಂಗೆ ಅರ್ಜಿ: ಅದಾನಿ ಸಮೂಹದ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪ ಹೊರಿಸಿರುವ ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆಯ ನಾಥನ್ ಆ್ಯಂಡರ್ಸನ್ ಮತ್ತು ಅದರ ಭಾರತೀಯ ಸಹಯೋಗಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಈ ಅರ್ಜಿಯಲ್ಲಿ, ‘ಅದಾನಿ ಸಮೂಹದ ಕಂಪನಿಯ ಷೇರುಗಳನ್ನು ಕೃತಕವಾಗಿ ಬೀಳಿಸಿ, ಅಮಾಯಕ ಭಾರತೀಯ ಹೂಡಿಕೆದಾರರನ್ನು ವಂಚಿಸಲಾಗಿದೆ’ ಎಂದು ದೂರಲಾಗಿದೆ.
‘ಹಿಂಡನ್‌ಬರ್ಗ್ ಸಂಸ್ಥೆಯು, ಲೆಕ್ಕಾಚಾರದಲ್ಲಿನ ಅಕ್ರಮ, ಆಡಳಿತದಲ್ಲಿ ಲೋಪದೋಷ, ವಹಿವಾಟಿನ ಮಾಹಿತಿ ನೀಡದೇ ಇರುವ ಮೊದಲಾದ ವಿಷಯಗಳನ್ನು ಪತ್ತೆ ಹಚ್ಚಿ ಅಂಥವುಗಳ ಬಗ್ಗೆ ವರದಿ ಪ್ರಕಟಿಸುತ್ತದೆ. ವರದಿ ಪ್ರಕಟಕ್ಕೂ ಮುನ್ನ ಆ ಕಂಪನಿಗಳ ಷೇರು ಖರೀದಿಸಿ, ವರದಿ ಪ್ರಕಟಗೊಂಡ ಬಳಿಕ ಷೇರು ಬೆಲೆ ಇಳಿದಾಗ ಅದನ್ನು ಖರೀದಿಸಿ ಭಾರೀ ಲಾಭ ಮಾಡಿಕೊಳ್ಳುತ್ತದೆ. ಹೀಗಾಗಿ ಶಾರ್ಟ್ ಸೆಲ್ಲಿಂಗ್ ಅನ್ನು ನಿಷೇಧಿಸಬೇಕು. ಇದನ್ನು ಷೇರುದಾರರ ವಿರುದ್ಧದ ವಂಚನೆ ಎಂದು ಪರಿಗಣಿಸಬೇಕು. ಇಂಥ ಪ್ರಕರಣಗಳನ್ನು ವಂಚನೆ ಪ್ರಕರಣದಡಿ ತನಿಖೆ ನಡೆಸಬೇಕು’ ಎಂದು ವಕೀಲ ಎಂ.ಎಲ್.ಶರ್ಮಾ ಈ ಅರ್ಜಿ ಸಲ್ಲಿಸಿದ್ದಾರೆ.
ಅದಾನಿ ಗ್ರೂಪ್‌ಗೆ ಎಷ್ಟು ಸಾಲ ನೀಡಿದ್ದೀರಿ ಎನ್ನುವ ಮಾಹಿತಿ ಕೇಳಿದ ಆರ್‌ಬಿಐ!
ಡೌ ಜೋನ್ಸ್ ಸುಸ್ಥಿರ ಸೂಚ್ಯಂಕದಿಂದ ಅದಾನಿ ಷೇರು ಔಟ್: ಭಾರೀ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ ಷೇರುಗಳನ್ನು ತನ್ನ ಸುಸ್ಥಿರ ಸೂಚ್ಯಂಕ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಅಮೆರಿಕದ ‘ಡೌ ಜೋನ್ಸ್’ ಪ್ರಕಟಿಸಿದೆ. ಡೌ ಜೋನ್ಸ್ ಎನ್ನುವುದು, ಭಾರತದ ಸೆನ್ಸೆಕ್ಸ್, ನಿಫ್ಟಿರೀತಿಯಲ್ಲೇ ಇರುವ ಸೂಚ್ಯಂಕವಾಗಿದ್ದು, ಸುಸ್ಥಿರ ಸೂಚ್ಯಂಕದಲ್ಲಿ ಅದು 30 ಕಂಪನಿಗಳನ್ನು ಹೊಂದಿದೆ. ಫೆ.7ರಿಂದ ಜಾರಿಗೆ ಬರುವಂತೆ ಅದಾನಿ ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಅನ್ನು ಸೂಚ್ಯಂಕದಿಂದ ಹೊರಗಿಡುವುದಾಗಿ ಡೌ ಜೋನ್ಸ್ ಗುರುವಾರ ಮಾಹಿತಿ ನೀಡಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಹಾಗೂ ಅಂಬುಜಾ ಸಿಮೆಂಟ್ ಕಂಪನಿಗಳನ್ನು ಅಲ್ಪಾವಧಿ ಹೆಚ್ಚುವರಿ ನಿಗಾಪಟ್ಟಿಯಲ್ಲಿ ಇಡುವುದಾಗಿ ಬಾಂಬೆ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ (ಎನ್‌ಎಸ್‌ಇ) ಪ್ರಕಟಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.
ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ರೇಟಿಂಗ್ ಬದಲಿಸಿಲ್ಲ: ಈ ನಡುವೆ, ಇತ್ತೀಚಿನ ಬೆಳವಣಿಗೆ ಹೊರತಾಗಿಯೂ ಅದಾನಿ ಸಮೂಹದ ರೇಟಿಂಗ್‌ನಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ರೇಟಿಂಗ್ ಏಜೆನ್ಸಿಯಾದ ಫಿಚ್ ಹೇಳಿದೆ. ‘ಇನ್ನೊಂದೆಡೆ ಅದಾನಿ ಸಮೂಹದ ಬೆಳವಣಿಗೆಯನ್ನು ಪರಿಶೀಲಿಸಲಾಗುತ್ತಿದೆ. ಈ ಬೆಳವಣಿಗೆಗಳು ಮುಂದಿನ 1-2 ವರ್ಷ ಅವಧಿಯಲ್ಲಿ ಕಂಪನಿಯ ಸಾಲ ಸಂಗ್ರಹದ ಪ್ರಯತ್ನಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಮತ್ತೊಂದು ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಹೇಳಿದೆ.