
ಮುಂಬೈ: ದೇಶದ ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ನಿಧನಕ್ಕೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಪಾಲಿಗೆ ಅತ್ಯಂತ ಬೇಸರ ದಿನ, ಇವರ ಅಗಲಿಕೆ ನನ್ನಲ್ಲಿ ತೀವ್ರ ದುಃಖವನ್ನು ತುಂಬಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಟಾಟಾ ದೂರದೃಷ್ಟಿಯನ್ನು ಹೊಂದಿದ್ದ ಉದ್ಯಮಿ, ಕೊಡುಗೈ ದಾನಿ ಹಾಗೂ ತುಂಬಾ ಆತ್ಮೀಯರಾದ ಗೆಳೆಯ, ಅವರ ನಿಧನದಿಂದ ದುಃಖತಪ್ತರಾಗಿರುವ ಟಾಟಾ ಕುಟುಂಬ ಹಾಗೂ ಇಡೀ ಟಾಟಾ ಗ್ರೂಪ್‌ಗೆ ಹೃದಯದಳಾದಿಂದ ನನ್ನ ಸಂತಾಪ ಸೂಚಿಸುತ್ತಿದ್ದೇನೆ. ರತನ್ ಟಾಟಾ ಅವರ ನಿಧನದಿಂದ ದೇಶಕ್ಕೆ ತೀವ್ರ ನಷ್ಟವಾಗಿದೆ. ಇದು ಭಾರತಕ್ಕೆ ತುಂಬಾ ದುಃಖದ ದಿನ. ಕೇವಲ ಟಾಟಾ ಗ್ರೂಪ್‌ಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಇದು ಬೇಸರದ ವಿಚಾರ. ನನ್ನ ವೈಯಕ್ತಿಕವಾಗಿ ಹೇಳುವುದಾದರೆ ರತನ್ ಟಾಟಾ ಅವರ ನಿಧನ ನನ್ನಲ್ಲಿ ತೀವ್ರವಾದ ಬೇಸರವನ್ನು ತುಂಬಿದೆ. ನಾನೊಬ್ಬ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಇದೇ ವೇಳೆ ಟಾಟಾ ಜೊತೆಗಿನ ವೈಯಕ್ತಿಕ ಸಂವಾದಗಳನ್ನು ನೆನಪಿಸಿಕೊಂಡ ಮುಕೇಶ್ ಅಂಬಾನಿ, 'ಅವರೊಂದಿಗಿನ ನನ್ನ ಹಲವಾರು ಮಾತುಕತೆಗಳು ಅವರ ವ್ಯಕ್ತಿತ್ವದ ಉದಾತ್ತತೆ ಮತ್ತು ಅವರು ಮೈಗೂಡಿಸಿಕೊಂಡ ಉತ್ತಮ ಮಾನವೀಯ ಮೌಲ್ಯಗಳಿಂದ ಅವರ ಮೇಲೆ ನನ್ನ ಗೌರವವನ್ನು ಹೆಚ್ಚಿಸಿದೆ, ರತನ್ ಟಾಟಾ ಅವರು ದೂರದೃಷ್ಟಿಯ ಕೈಗಾರಿಕೋದ್ಯಮಿಯಾಗಿದ್ದು, ಮತ್ತು ಕೊಡುಗೈ ದಾನಿಯಾಗಿದ್ದ ಅವರು ಯಾವಾಗಲೂ ಸಮಾಜಕ್ಕೆ ಹೆಚ್ಚಿನ ಒಳಿತಾಗಲು ಶ್ರಮಿಸಿದರು.
ಭಾರತದ ಬೆಳವಣಿಗೆ ಮತ್ತು ಜಾಗತಿಕ ಮನ್ನಣೆಗೆ ಟಾಟಾ ಅವರ ಮಹತ್ವದ ಕೊಡುಗೆಗಳನ್ನು ಇದೇ ವೇಳೆ ಅಂಬಾನಿ ಸ್ಮರಿಸಿದರು. ರತನ್ ಟಾಟಾ ಅವರ ನಿಧನದಿಂದ, ಭಾರತವು ತನ್ನ ಅತ್ಯಂತ ಶ್ರೇಷ್ಠ ಮತ್ತು ಸಹೃದಯ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಟಾಟಾ ಭಾರತವನ್ನು ಜಗತ್ತಿಗೆ ಕೊಂಡೊಯ್ದರು ಮತ್ತು ವಿಶ್ವದ ಅತ್ಯುತ್ತಮವಾದದ್ದನ್ನು ಭಾರತಕ್ಕೆ ತಂದರು. ಅವರು ಹೌಸ್ ಆಫ್ ಟಾಟಾವನ್ನು ಸಂಸ್ಥೆಯಾಗಿಸಿದರು ಮತ್ತು ಅದನ್ನು ಅಂತರರಾಷ್ಟ್ರೀಯ ಉದ್ಯಮವನ್ನಾಗಿ ಮಾಡಿದರು. 1991 ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಟಾಟಾ ಗ್ರೂಪ್ 70 ಪಟ್ಟು ಹೆಚ್ಚು ಅಭಿವೃದ್ಧಿಯಾಯ್ತು. ರಿಲಯನ್ಸ್, ನೀತಾ ಅಂಬಾನಿ ಮತ್ತು ಅಂಬಾನಿ ಕುಟುಂಬದ ಪರವಾಗಿ, ಟಾಟಾ ಕುಟುಂಬ ಮತ್ತು ಇಡೀ ಟಾಟಾ ಗ್ರೂಪ್‌ನ ದುಃಖತಪ್ತ ಸದಸ್ಯರಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತಿದ್ದೇನೆ. ನೀವು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತೀರಿ ಓಂ ಶಾಂತಿ -ಮುಕೇಶ್ ಅಂಬಾನಿ ಎಂದು ಮುಕೇಶ್ ಅಂಬಾನಿಯವರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.