ಮನೆಯ ಖರ್ಚು-ವೆಚ್ಚಗಳನ್ನು ಸಮರ್ಥವಾಗಿ ನಿಭಾಯಿಸೋದು ಕೂಡ ಒಂದು ಕಲೆ. ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು, ಎಲ್ಲಿ ಉಳಿತಾಯ ಮಾಡಬೇಕು ಎಂಬ ಬಗ್ಗೆ ಸೂಕ್ತ ಯೋಜನೆ ರೂಪಿಸಿದಾಗ ಮಾತ್ರ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಹಾಗಾದ್ರೆ ಗೃಹಿಣಿಯರು ಮನೆಯ ನಿತ್ಯದ ಖರ್ಚುಗಳನ್ನು ತಗ್ಗಿಸಿ ಉಳಿತಾಯ ಮಾಡಲು ಏನ್ ಮಾಡ್ಬೇಕು? ಇಲ್ಲಿವೆ ಟಿಪ್ಸ್.
Business Desk:ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸಂಭಾಳಿಸುವ ಶಕ್ತಿ ಗೃಹಿಣಿಗಿದೆ. ಯಾವ ಮಹಿಳೆ ಖರ್ಚಿನ ವಿಷಯದಲ್ಲಿ ಜಾಣತನ ತೋರುತ್ತಾಳೋ ಆ ಕುಟುಂಬಕ್ಕೆ ಹಣಕಾಸಿನ ಸಮಸ್ಯೆಗಳು ಎದುರಾಗೋದು ಕಡಿಮೆ ಎಂದೇ ಹೇಳಬಹುದು. ಅದೆಷ್ಟೇ ಕಡಿಮೆ ಆದಾಯವಿದ್ರೂ ಮನೆಯ ಖರ್ಚು-ವೆಚ್ಚಗಳನ್ನು ಸಂಭಾಳಿಸಿ ಒಂದಿಷ್ಟು ಉಳಿತಾಯ ಮಾಡುವ ಕಲೆ ಮಹಿಳೆಗೆ ಕರಗತ. ಹಿಂದೆಲ್ಲ ಅಡುಗೆ ಮನೆಯ ಸಾಮಾನು ಡಬ್ಬಿಗಳೇ ಅಮ್ಮಂದಿರ ಪಿಗ್ಗಿ ಬ್ಯಾಂಕ್ . ಆದರೆ, ಈಗ ಕಾಲ ಬದಲಾಗಿದೆ. ಹಾಗೆಯೇ ಉಳಿತಾಯದ ವಿಧಾನ ಕೂಡ. ಹಿಂದಿಗಿಂತ ಇಂದು ಖರ್ಚು ಹೆಚ್ಚಿದೆ. ಹೀಗಾಗಿ ಹಣದ ನಿರ್ವಹಣೆ ವಿಚಾರದಲ್ಲಿ ಗೃಹಿಣಿ ಕೂಡ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ದಿನಸಿ ಸಾಮಗ್ರಿಗಳು, ಎಲ್ ಪಿಜಿ ಅಡುಗೆ ಸಿಲಿಂಡರ್, ವಿದ್ಯುತ್ ಬಿಲ್ ಸೇರಿದಂತೆ ನಿತ್ಯ ಬಳಕೆಯ ಎಲ್ಲ ವಸ್ತುಗಳು ದುಬಾರಿಯಾಗಿವೆ. ಹೀಗಿರುವಾಗ ತಿಂಗಳ ಖರ್ಚು ಕಳೆದು ಉಳಿತಾಯ ಮಾಡೋದು ಸುಲಭದ ಮಾತಲ್ಲ. ಆದರೆ, ಖರ್ಚು ಹೆಚ್ಚಾಗಿದೆ ಎಂಬ ಕಾರಣಕ್ಕೆ ಬಜೆಟ್ ಮೊತ್ತವನ್ನು ಹೆಚ್ಚಿಸುತ್ತ ಹೋಗುವ ಬದಲು ಎಲ್ಲಿ ಉಳಿತಾಯ ಮಾಡಬಹುದು ಅಥವಾ ಖರ್ಚಿಗೆ ಕಡಿವಾಣ ಹಾಕಬಹುದು ಎಂಬುದನ್ನು ಯೋಚಿಸಿ ಯೋಜನೆ ರೂಪಿಸಬೇಕು. ಹೊಸ ವರ್ಷದಿಂದಾದ್ರೂ ಮನೆಯ ಖರ್ಚು-ವೆಚ್ಚಗಳಿಗೆ ಸಂಬಂಧಿಸಿ ಪ್ಲ್ಯಾನ್ ಮಾಡುವ ಅಭ್ಯಾಸ ರೂಪಿಸಿಕೊಳ್ಳಿ. ನಿಮ್ಮ ತಿಂಗಳ ಹಣಕಾಸಿನ ಪ್ಲ್ಯಾನ್ ಗೆ ಇಲ್ಲಿವೆ 7 ಟಿಪ್ಸ್.
1.ಬಜೆಟ್ ಸಿದ್ಧಪಡಿಸಿ
ಪ್ರತಿ ತಿಂಗಳ ಖರ್ಚಿಗೆ ಸಂಬಂಧಿಸಿ ಬಜೆಟ್ ಸಿದ್ಧಪಡಿಸಿ. ದಿನಸಿ ಸಾಮಗ್ರಿಗಳು, ಹಣ್ಣು-ತರಕಾರಿ, ವಿದ್ಯುತ್, ನೀರಿನ ಬಿಲ್ ಹೀಗೆ ಮನೆಗೆ ಸಂಬಂಧಿಸಿದ ಪ್ರತಿ ವೆಚ್ಚವನ್ನು ಪಟ್ಟಿ ಮಾಡಿ. ಆ ಬಳಿಕ ಎಲ್ಲಿ ಹಣ ಉಳಿತಾಯ ಮಾಡಬಹುದು ಎಂಬ ಬಗ್ಗೆ ಯೋಚಿಸಿ. ಬಜೆಟ್ ಗೆ ಅನುಗುಣವಾಗಿ ಖರ್ಚು ಮಾಡಿ.
ಒಬ್ಬ ವ್ಯಕ್ತಿ ಎರಡು ಪಿಪಿಎಫ್ ಖಾತೆ ಹೊಂದಬಹುದಾ? ನಿಯಮ ಏನ್ ಹೇಳುತ್ತೆ?
2.ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ
ನಿಮ್ಮ ತಿಂಗಳ ಬಜೆಟ್ ಅನ್ನು ಒಮ್ಮೆ ಸರಿಯಾಗಿ ಗಮನಿಸಿ. ಎಲ್ಲಿ ನೀವು ಖರ್ಚನ್ನು ತಗ್ಗಿಸಬಹುದು ಎಂಬ ಬಗ್ಗೆ ಯೋಚಿಸಿ. ಉದಾಹರಣೆಗೆ ನೀವು ಹೋಟೆಲ್ ಗೆ ಜಾಸ್ತಿ ಹಣ ವ್ಯಯಿಸುತ್ತಿದ್ರೆ ಅದನ್ನು ಕಡಿಮೆ ಮಾಡಿ, ಮನೆಯಲ್ಲೇ ಆಹಾರ ತಯಾರಿಸುವ ಬಗ್ಗೆ ಯೋಚಿಸಿ. ವೀಕೆಂಡ್ ಗಳಲ್ಲಿ ಮನೆಯಲ್ಲಿ ವಿಶೇಷ ಅಡುಗೆ ಸಿದ್ಧಪಡಿಸೋದ್ರಿಂದ ಹೋಟೆಲ್ ಗೆ ವ್ಯಯಿಸುವ ಹಣ ಉಳಿಸಬಹುದು.
3.ಉತ್ತಮ ಬೆಲೆ ಎಲ್ಲಿದೆಯೋ ಅಲ್ಲೇ ಖರೀದಿಸಿ
ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನಗಳು ನಿಮ್ಮ ಮನೆ ಸುತ್ತಮುತ್ತ ಎಲ್ಲಿ ಸಿಗುತ್ತವೆ ಎಂಬುದನ್ನು ಪರಿಶೀಲಿಸಿ, ಅಲ್ಲೇ ಖರೀದಿಸಿ. ಆಫರ್ ಬೆಲೆಯಲ್ಲಿ ಮಾರಾಟ ನಡೆಯುತ್ತಿದ್ರೆ ಅಲ್ಲಿ ಖರೀದಿಸಿ. ಹಾಗೆಯೇ ಆನ್ ಲೈನ್ ಖರೀದಿ ಸಮಯದಲ್ಲಿ ಕೂಪನ್ ಗಳನ್ನು ಬಳಸಿಕೊಳ್ಳಿ.
4.ಕ್ರೆಡಿಟ್ ಕಾರ್ಡ್ ಬದಲು ನಗದು ಬಳಸಿ
ಕ್ರೆಡಿಟ್ ಕಾರ್ಡ್ ಬದಲು ನಗದು ಬಳಸಿ ವಸ್ತುಗಳನ್ನು ಖರೀದಿಸಿದಾಗ ನೀವು ಅನಗತ್ಯವಾಗಿ ಖರ್ಚು ಮಾಡೋದಿಲ್ಲ. ಅಲ್ಲದೆ, ನಿಮ್ಮ ಬಜೆಟ್ ನಲ್ಲಿರುವಷ್ಟೇ ಖರ್ಚು ಮಾಡುತ್ತೀರಿ. ಅದೇ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಅಗತ್ಯವಿಲ್ಲದಿದ್ರೂ ಕೆಲವು ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇರುತ್ತದೆ.
5.ಹೆಚ್ಚುವರಿ ಆದಾಯ ಗಳಿಸುವ ಮಾರ್ಗಗಳಿಗೆ ಹುಡುಕಿ
ಗೃಹಿಣಿಯಾಗಿ ನಿಮಗೆ ಯಾವುದೇ ಆದಾಯದ ಮೂಲಗಳು ಇಲ್ಲದಿರಬಹುದು. ಆದರೆ, ಹೆಚ್ಚುವರಿ ಆದಾಯ ಗಳಿಸಲು ಅನೇಕ ಮಾರ್ಗಗಳಿವೆ. ಗೃಹ ಆಧಾರಿತ ಉದ್ಯಮ ಪ್ರಾರಂಭಿಸಬಹುದು, ಫ್ರೀಲ್ಯಾನ್ಸ್ ಕೆಲಸ ಮಾಡಬಹುದು, ಮಕ್ಕಳಿಗೆ ಟ್ಯೂಷನ್, ಸಂಗೀತ, ನೃತ್ಯ ಇತ್ಯಾದಿ ಕಲಿಸುವ ಮೂಲಕ ಕೂಡ ಆದಾಯ ಗಳಿಸಲು ಅವಕಾಶವಿದೆ.
ಫುಡ್ ಸ್ಟಾಲ್ ಶುರು ಮಾಡಿ ಪ್ರಸಿದ್ಧಿಯಾದ ಮಹಿಳೆಯರಿವರು!
6.ನಿತ್ಯ ವೆಚ್ಚದಲ್ಲಿ ಉಳಿತಾಯ ಮಾಡಿ
ಮನೆಗೆ ಸಂಬಂಧಿಸಿದ ನಿತ್ಯದ ಕೆಲವು ವೆಚ್ಚಗಳನ್ನು ತಗ್ಗಿಸಲು ಅವಕಾಶವಿದೆ. ರೂಮ್ ನಿಂದ ಹೊರಗೆ ಹೋಗುವಾಗ ಲೈಟ್ ಆಫ್ ಮಾಡೋದು, ಇಂಧನ ಕ್ಷಮತೆಯುಳ್ಳ ಉಪಕರಣಗಳ ಬಳಕೆ, ಸೋಲಾರ್ ವಾಟರ್ ಹೀಟರ್ ಮುಂತಾದವುಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಮಾಡಬಹುದು. ಹಾಗೆಯೇ ಯಾವುದೇ ವಸ್ತು ಅಥವಾ ಉಪಕರಣ ಹಾಳಾದಾಗಹೊಸದು ಖರೀದಿಸಿ ತರುವ ಬದಲು ಅದನ್ನೇ ದುರಸ್ತಿ ಮಾಡಲು ಪ್ರಯತ್ನಿಸಿ. ಇದ್ರಿಂದ ಹಣ ಉಳಿತಾಯವಾಗುತ್ತದೆ.