
ವಿಧಾನಸಭೆ(ಡಿ.28): ರಾಜ್ಯದಲ್ಲಿ ಕೈಗಾರಿಕಾ ವಲಯವನ್ನು ಉದ್ಯಮಿ ಸ್ನೇಹಿಯನ್ನಾಗಿಸುವ, ರಾಜ್ಯವನ್ನು ಜಾಗತಿಕ ಉತ್ಪಾದನಾ ಪ್ರಮುಖ ತಾಣವನ್ನಾಗಿ ಮಾಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ 2022’ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಹೂಡಿಕೆದಾರರ ಆಕರ್ಷಿಸಲು ಈ ಕಾಯ್ದೆ ಅನುಕೂಲವಾಗಲಿದೆ. ಜತೆಗೆ ಕೈಗಾರಿಕಾ ಪ್ರದೇಶಗಳ ನಿರ್ವಹಣೆ, ಅಭಿವೃದ್ಧಿಗೆ ಈ ಅಧಿನಿಯಮ ಸಹಕಾರಿಯಾಗಲಿದೆ. ಇನ್ನು ಪರಿಷತ್‌ನಲ್ಲಿ ಈ ವಿಧೇಯಕ ಅಂಗೀಕಾರವಾಗುವುದು ಬಾಕಿಯಿದೆ.
ಗುಜರಾತ್, ರಾಜಸ್ಥಾನದಲ್ಲಿ ಈ ಮಾದರಿಯ ಅಧಿನಿಯಮ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ದೊಡ್ಡ ಅಥವಾ ಅತಿದೊಡ್ಡ ಅಥವಾ ಬೃಹತ್ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶ, ಕ್ಲಸ್ಟರ್ ಸ್ಥಾಪಿಸಲು, ನಡೆಸಲು ನಿಯಂತ್ರಿಸಲು ಮತ್ತು ನಿರ್ವಹಿಸಲು, ರಾಜ್ಯವನ್ನು ಜಾಗತಿಕ ಉತ್ಪಾದನಾ ಪ್ರಮುಖ ತಾಣವಾಗಿ ಉಳಿಸಿಕೊಳ್ಳಲು, ವಿಶ್ವ ದರ್ಜೆಯ ಮೂಲಸೌಕರ್ಯ ಕಲ್ಪಿಸಲು, ಪೂರ್ವಭಾವಿ ನೀತಿ ಚೌಕಟ್ಟಿನಲ್ಲೇ ವಿಶೇಷ ಹೂಡಿಕಾ ವಿಧೇಯಕದ ಉದ್ದೇಶವಾಗಿದೆ.
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಹೊಸ ವರ್ಷದಲ್ಲಿ ಬಿಡುಗಡೆ?
ವಿಧಾನಸಭೆಯಲ್ಲಿ ವಿಶೇಷ ಹೂಡಿಕೆ ಪ್ರದೇಶದ ವಿಧೇಯಕವನ್ನು ಮಂಡಿಸಿದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಈಗಾಗಲೇ ರಾಜ್ಯದಲ್ಲಿರುವ 1250 ಎಕರೆ ಜಮೀನುವುಳ್ಳ ಕೈಗಾರಿಕಾ ಪ್ರದೇಶ ಹಾಗೂ ಹೊಸದಾಗಿ 2,500 ಎಕರೆ ಪ್ರದೇಶವುಳ್ಳ ಕೈಗಾರಿಕಾ ಪ್ರದೇಶಗಳನ್ನು ಈ ಅಧಿನಿಯಮದಡಿ ಬರುತ್ತವೆ. ವಿಶೇಷ ಹೂಡಿಕೆ ಪ್ರದೇಶವೆಂದು ಘೋಷಿಸಲಾಗುವುದು. ಇವುಗಳ ನಿರ್ವಹಣೆಗೆ ಅಧಿನಿಯಮದಡಿ ವಿಶೇಷ ಹೂಡಿಕೆ ಅಗ್ರ ಪ್ರಾಧಿಕಾರ ರಚಿಸುವುದು, ಪ್ರಾಧಿಕಾರದ ಮೂಲಕ ಆ ಪ್ರದೇಶಗಳನ್ನು ನಿರ್ವಹಣೆ ಹಾಗೂ ಅಭಿವೃದ್ಧಿ ಪಡಿಸುವುದಾಗಿದೆ. ಇಲ್ಲಿ ಹೂಡಿಕೆದಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಹೊರತುಪಡಿಸಿ ಉಳಿದ ಎಲ್ಲ ಅನುಮತಿಗಳನ್ನು ಈ ಪ್ರಾಧಿಕಾರವೇ ನೀಡಲಿವೆ. ಈ ಪ್ರಾಧಿಕಾರಕ್ಕೆ ಕೆಐಡಿಎಬಿ, ಆರ್‌ಡಿಪಿಆರ್ ಇಲಾಖೆಗಳಿಂದ ಒಪ್ಪಿಗೆ ಪಡೆಯಲಾಗಿದೆ. ಈ ಪ್ರದೇಶಗಳಿಂದ ಸಂಗ್ರಹವಾಗುವ ತೆರಿಗೆಯನ್ನು ಇದೇ ಪ್ರಾಧಿಕಾರ ಸಂಗ್ರಹಿಸುತ್ತದೆ. ಅದರಲ್ಲಿ ಶೇ.30ರಷ್ಟು ಸ್ಥಳೀಯ ಸಂಸ್ಥೆಗೆ ನೀಡಿದರೆ, ಉಳಿದ ಶೇ.70ರಷ್ಟು ತೆರಿಗೆಯಲ್ಲಿ ಆ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತದೆ ಎಂದು ವಿವರಿಸಿದರು.
ಒಬ್ಬ ವ್ಯಕ್ತಿ ಎರಡು ಪಿಪಿಎಫ್ ಖಾತೆ ಹೊಂದಬಹುದಾ? ನಿಯಮ ಏನ್ ಹೇಳುತ್ತೆ?
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಪಾಂಡೆ, ಇದು ಒಳ್ಳೆಯ ಮಸೂದೆ. ಆದರೆ, ಇದರ ಅನುಷ್ಠಾನ ಕಷ್ಟವಾಗಲಿದೆ. ಉಳಿದ ಇಲಾಖೆಗಳು ಇದಕ್ಕೆ ಅನುಮತಿಸುತ್ತವೆ ಎಂಬ ನಂಬಿಕೆಯಿಲ್ಲ ಎಂದು ತಿಳಿಸಿದರು.
ಅದಕ್ಕೆ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2013ರಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಟೌನ್‌ಶಿಪ್‌ಗೆ ಸಂಬಂಧಪಟ್ಟಂತೆ ನೀವೇ ಒಂದು ಬಿಲ್ ತಂದಿದ್ದೀರಿ. ಅದು ಅದರನ್ವಯವೇ ಎಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿ ಪಡಿಸಲಾಗಿದೆ. ಅದೇ ಮಾದರಿಯಲ್ಲಿ ಈ ಮಸೂದೆಯನ್ನು ತರಲಾಗಿದೆ. ಇದು ಬಂಡವಾಳ ಹೂಡಿಕೆದಾರರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ. ಜತೆಗೆ ವಿಶೇಷ ಹೂಡಿಕೆ ಪ್ರದೇಶದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಅಂಗೀಕಾರ:
ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಮಸೂದೆಯನ್ನು ಧ್ವನಿಮತಕ್ಕೆ ಹಾಕಿದರು. ಅದಕ್ಕೆ ಸದನದಲ್ಲಿ ಸರ್ವಾನುಮತದಿಂದ ಅಂಗೀಕಾರವಾಯಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.