ಸರ್ಕಾರದ ಬಹುನಿರೀಕ್ಷಿತ 5ಜಿ ತರಂಗಾಂತರ ಹರಾಜು ಪಕ್ರಿಯೆ ಅಂತ್ಯಗೊಂಡಿದೆ. ಕಳೆದ ಏಳು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಶತಕೋಟ್ಯಧಿಪತಿ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಗರಿಷ್ಠ ಬಿಡ್ ಮಾಡಿದೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಜಿಯೋ 1,50,173 ಕೋಟಿ ರೂಪಾಯಿಯನ್ನು ಹರಾಜಿನ ವೇಳೆ ಬಿಡ್ ಮಾಡಿದೆ ಎನ್ನಲಾಗಿದೆ.
ನವದೆಹಲಿ (ಆ.1): ಭಾರತದ ಈವರೆಗಿನ ಅತ್ಯಂತ ದೊಡ್ಡ ತರಂಗಾಂತರ ಹರಾಜು ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಈ ಏಳು ದಿನಗಳ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರದ ದಾಖಲೆ ಮಾರಾಟವಾಗಿದೆ. ಈ ಹರಾಜಿನಲ್ಲಿ, ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (ಜಿಯೋ) ಕಂಪನಿಯು ಗರಿಷ್ಠ ಮೊತ್ತದ ಬಿಡ್ ಮಾಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಹರಾಜಿನಲ್ಲಿ ಒಟ್ಟು 1,50,173 ಕೋಟಿ ಮೊತ್ತವನ್ನು ಜಿಯೋ ಬಿಡ್ ಮಾಡಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ 5G ಸ್ಪೆಕ್ಟ್ರಮ್‌ನ ಹರಾಜು ಮೊತ್ತವು, ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್ ಹರಾಜಿನ ಮೊತ್ತಕ್ಕಿಂತ ದುಪ್ಪಟ್ಟು, 2010ರಲ್ಲಿ ನಡೆದ 3ಜಿ ಹರಾಜು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ 4ಜಿ ಸ್ಪೆಕ್ಟ್ರಮ್ ಹರಾಜಿನಿಂದ ಸರ್ಕಾರ, 77,815 ಕೋಟಿ ರೂಪಾಯಿ ಆದಾಯ ಪಡೆದಿದ್ದರೆ, 3ಜಿ ತರಂಗಾಂತರ ಹರಾಜು 50,968.37 ಕೋಟಿ ರೂಪಾಯಿ ಮೊತ್ಯಕ್ಕೆ ಹರಾಜಾಗಿತ್ತು. 4ಜಿಗೆ ಹೋಲಿಸಿದರೆ 5ಜಿಯಲ್ಲಿ 10 ಪಟ್ಟು ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ ರೇಡಿಯೋ ಫ್ರೀಕ್ವೆನ್ಸಿಗಾಗಿ ಅತಿ ಹೆಚ್ಚು ಬಿಡ್ ಮಾಡಿದೆ. ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್ ನಂತರದ ಸ್ಥಾನಗಳಲ್ಲಿವೆ.
ಅದಾನಿ ಮೊದಲ ಪ್ರವೇಶ: ಪಿಟಿಐ ವರದಿಯ ಪ್ರಕಾರ, ಖಾಸಗಿ ಟೆಲಿಕಾಂ ನೆಟ್‌ವರ್ಕ್ ಅನ್ನು ಸ್ಥಾಪಿಸಲು ಅದಾನಿ ಗ್ರೂಪ್ (Adani Group) 26 MHz ಸ್ಪೆಕ್ಟ್ರಮ್ ಅನ್ನು ಖರೀದಿಸಿದೆ. ಆದರೆ, ಯಾವ ಕಂಪನಿ ಸ್ಪೆಕ್ಟ್ರಮ್ ಖರೀದಿಸಿದೆ ಎಂಬ ವಿವರ ಹರಾಜಿನ ಮಾಹಿತಿ ಸಂಪೂರ್ಣ ಹೊರಬಿದ್ದ ಬಳಿಕವಷ್ಟೇ ತಿಳಿಯಲಿದೆ. ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ನೀಡಿತ್ತು, ಆದರೆ 600 MHz, 800 MHz ಮತ್ತು 2300 MHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್‌ಗೆ ಯಾವುದೇ ಬಿಡ್‌ಗಳನ್ನು ಸ್ವೀಕರಿಸಲಾಗಿಲ್ಲ. ಸುಮಾರು ಮೂರನೇ ಎರಡರಷ್ಟು ಬಿಡ್‌ಗಳು 5G ಬ್ಯಾಂಡ್‌ಗಾಗಿ (3300 MHz ಮತ್ತು 26 GHz), ಆದರೆ ಬೇಡಿಕೆಯ ಕಾಲು ಭಾಗಕ್ಕಿಂತ ಹೆಚ್ಚಿನವು 700 MHz ಬ್ಯಾಂಡ್‌ನಲ್ಲಿ ಬಂದವು. ಈ ಬ್ಯಾಂಡ್ ಕಳೆದ ಎರಡು ಹರಾಜಿನಲ್ಲಿ (2016 ಮತ್ತು 2021) ಮಾರಾಟವಾಗದೆ ಉಳಿದುಕೊಂಡಿತ್ತು.
5ಜಿ ಸ್ಪೆಕ್ಟ್ರಮ್ ಗೆ ಭಾರೀ ಬೇಡಿಕೆ; ಎರಡನೇ ದಿನ 1.49 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆ
4G ಸ್ಪೆಕ್ಟ್ರಮ್ ಹರಾಜು ಮಾಹಿತಿ: ಕಳೆದ ವರ್ಷ ನಡೆದ ಹರಾಜಿನಲ್ಲಿ ರಿಲಯನ್ಸ್ ಜಿಯೋ (Reliance Jio) 57,122.65 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಮ್ ಖರೀದಿ ಮಾಡಿತ್ತು. ಭಾರ್ತಿ ಏರ್‌ಟೆಲ್ ಸುಮಾರು 18,699 ಕೋಟಿಗೆ ಬಿಡ್ ಮಾಡಿತ್ತು ಮತ್ತು ವೊಡಾಫೋನ್ ಐಡಿಯಾ 1,993.40 ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಖರೀದಿತ್ತು. ಈ ವರ್ಷ ಕನಿಷ್ಠ 4.3 ಲಕ್ಷ ಕೋಟಿ ಮೌಲ್ಯದ ಒಟ್ಟು 72 GHz ರೇಡಿಯೋ ತರಂಗಗಳನ್ನು ಬಿಡ್‌ಗೆ ಹಾಕಲಾಗಿದೆ. ಹರಾಜಿನ ಕುರಿತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Telecom Minister Ashwini Vaishnav) ಅವರು ಮಾತನಾಡಿದ್ದು, 5G ಹರಾಜು ಮೊಬೈಲ್ ಉದ್ಯಮವು ವಿಸ್ತರಣೆಯಾಗಲು ಬಯಸುತ್ತದೆ ಹಾಗೂ ಬೆಳವಣಿಗೆಯ ಹಂತ ತಲುಪಿದೆ ಎನ್ನುವುದನ್ನು ತೋರಿಸುತ್ತದೆ ಎಂದಿದ್ದರು. ಸ್ಪೆಕ್ಟ್ರಮ್‌ಗೆ ನಿಗದಿಪಡಿಸಿರುವ ಮೀಸಲು ಬೆಲೆ ಸಮಂಜಸವಾಗಿದೆ ಮತ್ತು ಇದು ಹರಾಜು ಫಲಿತಾಂಶದಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.
5G Spectrum Auction:5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್ ಎಂಟ್ರಿ; ಜಿಯೋ, ಏರ್ ಟೆಲ್ ಗೆ ಬಿಗ್ ಶಾಕ್!
ಮುಂದೇನು?: ಹರಾಜು ಮುಗಿದ ನಂತರ, ಈಗ ಮೊಬೈಲ್ ಕಂಪನಿಗಳು ತಮ್ಮ ಬಿಡ್‌ಗಳ ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಇದರ ನಂತರ, ಕಂಪನಿಗಳು ಸ್ಪೆಕ್ಟ್ರಮ್ ಪಡೆದಿರುವ ಏರ್‌ವೇವ್‌ಗಳನ್ನು ಸರ್ಕಾರವು ವಿತರಿಸುತ್ತದೆ. ಇದರ ನಂತರ ಕಂಪನಿಗಳು ಸೇವೆಯನ್ನು ಪ್ರಾರಂಭಿಸುತ್ತವೆ. ಮೊಬೈಲ್ ಕಂಪನಿಗಳು ಈಗಾಗಲೇ ಇದನ್ನು ಪರೀಕ್ಷೆ ಮಾಡುತ್ತಿದೆ. ಆದಾಗ್ಯೂ, 5G ಸೇವೆಯು ಇಡೀ ದೇಶದಲ್ಲಿ ಏಕಕಾಲದಲ್ಲಿ ಲಭ್ಯವಿರುವುದಿಲ್ಲ ಯಾವ ಪ್ರದೇಶದಲ್ಲಿ ಇದರ ಪರೀಕ್ಷೆಯನ್ನು ಮಾಡಲಾಗಿದೆಯೋ, ಅಲ್ಲಿ ಈ ಸೇವೆಯು ಪ್ರಾರಂಭವಾಗುತ್ತದೆ. ಈ ಪಟ್ಟಿಯಲ್ಲಿ ದೇಶದ 13 ಪ್ರಮುಖ ನಗರಗಳ ಹೆಸರುಗಳಿವೆ.