ಸೆ. 30ರೊಳಗೆ ತಪ್ಪದೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ!

By Suvarna NewsFirst Published Aug 28, 2021, 6:23 PM IST
Highlights

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ,ಡಿಮ್ಯಾಟ್‌ ಖಾತೆಗೆ ಕೆವೈಸಿ ಮಾಹಿತಿ ಭರ್ತಿ ಸೇರಿದಂತೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಸೆ.30ರೊಳಗೆ ಪೂರ್ಣಗೊಳಿಸೋದು ಅಗತ್ಯ.
 

ಆಗಸ್ಟ್‌ ತಿಂಗಳು ಇನ್ನೇನೂ ಕೊನೆಯಾಗಲಿದ್ದು, ಸೆಪ್ಟೆಂಬರ್‌ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹೀಗಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ನಾವು ಮಾಡಬೇಕಾದ ಪ್ರಮುಖ ಕೆಲಸಗಳ ಪಟ್ಟಿ ಸಿದ್ಧಪಡಿಸಲು ಇದು ಸೂಕ್ತ ಸಮಯ. ಅದ್ರಲ್ಲೂ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಈ ತಿಂಗಳಲ್ಲಿ ನೀವು ತಪ್ಪದೇ 5 ಕೆಲಸಗಳನ್ನು ಮಾಡಿ ಮುಗಿಸಬೇಕು. ಹಾಗಾದ್ರೆ ಆ 5 ಕೆಲಸಗಳು ಯಾವುವು?

ನಿಮ್ಮವರ ಭವಿಷ್ಯಕ್ಕೆ ಆರ್ಥಿಕ ಸುರಕ್ಷೆ ನೀಡಬಯಸ್ತೀರಾ?

1.ಐಟಿಆರ್‌ ಸಲ್ಲಿಕೆ
2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಸೆಪ್ಟೆಂಬರ್‌ 30 ಅಂತಿಮ ದಿನ. ನಿಮ್ಮ ಖಾತೆಗಳು ಅಡಿಟ್ಗೊಳಪಡದಿದ್ರೆ ನೀವು ಸೆಪ್ಟೆಂಬರ್‌ 30ರೊಳಗೆ ಐಟಿ ರಿಟರ್ನ್ಸ್‌ ಸಲ್ಲಿಸೋದು ಕಡ್ಡಾಯ. ಒಂದು ವೇಳೆ ನೀವು ಈ ಗಡುವು ಮೀರಿದರೆ 5 ಸಾವಿರ ರೂ. ತನಕ ದಂಡ ಕಟ್ಟಬೇಕಾಗಬಹುದು. ಒಂದು ವೇಳೆ ನಿಮ್ಮ ಆದಾಯ ವಾರ್ಷಿಕ 5 ಲಕ್ಷ ರೂ.ಗಿಂತ ಕಡಿಮೆಯಿದ್ರೆ ತಡವಾಗಿ ಸಲ್ಲಿಸಿದ್ದಕ್ಕೆ 1000ರೂ. ಶುಲ್ಕ ವಿಧಿಸಲಾಗುತ್ತದೆ. ಈ ವರ್ಷ ಐಟಿಆರ್‌ ಸಲ್ಲಿಕೆಗೆ ಸರ್ಕಾರ ಹೊಸ ಪೋರ್ಟಲ್‌ವೊಂದನ್ನು ಪ್ರಾರಂಭಿಸಿದೆ. ಆದ್ರೆ ಈ ಪೋರ್ಟ್‌ಲ್‌ಗೆ ಸಂಬಂಧಿಸಿ ಈಗಾಗಲೇ ಅನೇಕ ದೂರುಗಳು ಕೇಳಿಬರುತ್ತಿವೆ. ಪೋರ್ಟಲ್‌ ನಿಧಾನಗತಿಯಲ್ಲಿರೋ ಜೊತೆ ಐಟಿಆರ್‌ ಸಲ್ಲಿಕೆ ಪ್ರಕ್ರಿಯೆ ಕಳೆದ ವರ್ಷಕ್ಕಿಂತ ಭಿನ್ನವಾಗಿರೋ ಕಾರಣ ಕೊನೆಯ ದಿನದ ತನಕ ಕಾಯೋ ಬದಲು ಆದಷ್ಟು ಬೇಗ ಸಲ್ಲಿಕೆ ಮಾಡೋದು ಉತ್ತಮ. ಅಲ್ಲದೆ, ಕೊನೆಯ ಕ್ಷಣದಲ್ಲಿ ಎಲ್ಲರೂ ಐಟಿಆರ್‌ ಸಲ್ಲಿಕೆಗೆ ಮುಗಿ ಬೀಳೋ ಸಾಧ್ಯತೆಯಿರೋದ್ರಿಂದ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳೋ ಸಾಧ್ಯತೆಯಿದೆ.

2.ಬ್ಯಾಂಕ್‌ ಖಾತೆಗೆ ಮೊಬೈಲ್‌ ಸಂಖ್ಯೆ ಜೋಡಿಸಿ
ಅಕ್ಟೋಬರ್ 1, 2021ರಿಂದ ಬ್ಯಾಂಕ್‌ ಖಾತೆಯಿಂದ ಅಟೋ ಡೆಬಿಟ್‌ ವ್ಯವಸ್ಥೆಗೆ ಎರಡು ಬಾರಿ ದೃಢೀಕರಣದ ಅಗತ್ಯವಿದೆ. ಹೀಗಾಗಿ ನಿಮ್ಮ ಖಾತೆಗೆ ಜೋಡಿಸಿರೋ ಸಂಖ್ಯೆ ಸಮರ್ಪಕವಾಗಿರಬೇಕು. ಒಂದು ವೇಳೆ ಸರಿಯಾಗಿಲ್ಲವೆಂದ್ರೆ ತಕ್ಷಣ ಸರಿಪಡಿಸಿ. ನೀವು ಬ್ಯಾಂಕ್‌ಗೆ ನೀಡಿರೋ ಮೊಬೈಲ್‌ ಸಂಖ್ಯೆ ತಪ್ಪಾಗಿದ್ರೆ ನಿಮ್ಮ ಖಾತೆಯಿಂದ ಅಟೋ ಡೆಬಿಟ್ ಆಗೋದಿಲ್ಲ. ಸಾಮಾನ್ಯವಾಗಿ ಸಾಲದ ಇಎಂಐ, ಮ್ಯೂಚುವಲ್‌ ಫಂಡ್‌, ವಿದ್ಯುತ್‌ ಬಿಲ್‌ ಪಾವತಿ ಮುಂತಾದವುಗಳಿಗೆ ಅಟೋ ಡೆಬಿಟ್‌ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಆರ್‌ಬಿಐ ನಿರ್ದೇಶನದನ್ವಯ ಅಟೋ ಡೆಬಿಟ್‌ ಪಾವತಿಗೆ 5 ದಿನ ಮುನ್ನ ಬ್ಯಾಂಕ್ ಸಂಬಂಧಪಟ್ಟ ಗ್ರಾಹಕನ ಮೊಬೈಲ್‌ಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು. ಆತ ಅನುಮೋದನೆ ನೀಡಿದ ಬಳಿಕವಷ್ಟೇ ಅಟೋ ಡೆಬಿಟ್‌ ಮಾಡಬೇಕು.

ಗೃಹಸಾಲ ಮಾಡಿದೋರಿಗಷ್ಟೇ ಸಿಗುತ್ತೆ ಈ ಲೋನ್?

3.ಪಾನ್‌ಗೆ ಆಧಾರ್‌ ಜೋಡಣೆ
ಪಾನ್‌ ಕಾರ್ಡ್ಗೆ ಆಧಾರ್‌ ಜೋಡಣೆಗೆ ಸೆಪ್ಟೆಂಬರ್ 30 ಕೊನೆಯ ದಿನ. ಒಂದು ವೇಳೆ ಈ ದಿನಾಂಕದೊಳಗೆ ಪಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ರೆ ಪಾನ್‌ ನಿಷ್ಕ್ರಿಯವಾಗುತ್ತೆ. ಪಾನ್‌ ನಿಷ್ಕ್ರಿಯವಾದ್ರೆ ಕೆಲವೊಂದು ಹಣಕಾಸು ವ್ಯವಹಾರಗಳನ್ನು ನಡೆಸಲು ಸಾಧ್ಯವಾಗೋದಿಲ್ಲ. ಏಕೆಂದ್ರೆ ಕೆಲವು ವ್ಯವಹಾರಗಳಿಗೆ ಪಾನ್‌ ಸಂಖ್ಯೆ ಅತ್ಯಗತ್ಯ. ಉದಾಹರಣೆಗೆ ಡಿ ಮ್ಯಾಟ್ ಹಾಗೂ ಉಳಿತಾಯ ಖಾತೆಗಳನ್ನು ತೆರೆಯಲು ಪ್ಯಾನ್‌ ಅಗತ್ಯ.
 

4.ಡಿಮ್ಯಾಟ್‌ ಖಾತೆ ಕೆವೈಸಿ ಭರ್ತಿ ಮಾಡಿ
ಹೂಡಿಕೆದಾರರು ತಮ್ಮ ಡಿಮ್ಯಾಟ್ ಹಾಗೂ ಟ್ರೇಡಿಂಗ್‌ ಖಾತೆಗಳಲ್ಲಿ ಕೆವೈಸಿ ಮಾಹಿತಿಗಳನ್ನು ಭರ್ತಿ ಅಥವಾ ತಿದ್ದುಪಡಿ ಮಾಡಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ. ಈ ಹಿಂದೆ ಜುಲೈ 31ಕ್ಕೆ ಗಡುವು ವಿಧಿಸಲಾಗಿತ್ತು. ಆದ್ರೆ ಆ ಬಳಿಕ ಇದನ್ನು ಸೆಬಿ ಸೆ.30ರ ತನಕ ವಿಸ್ತರಿಸಿತ್ತು.ಕೆವೈಸಿ ಮಾಹಿತಿಯಡಿಯಲ್ಲಿ ಹೆಸರು, ವಿಳಾಸ, ಪಾನ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ ಹಾಗೂ ಆದಾಯದ ವಿವರ ನೀಡೋದು ಕಡ್ಡಾಯ. ಒಂದು ವೇಳೆ ಕೆವೈಸಿ ಮಾಹಿತಿಗಳನ್ನು ತಿದ್ದುಪಡಿ ಮಾಡದಿದ್ರೆ, ಆ ವ್ಯಕ್ತಿಯ ಡಿಮ್ಯಾಟ್‌ ಹಾಗೂ ಟ್ರೇಡಿಂಗ್‌ ಖಾತೆಗಳು ನಿಷ್ಕ್ರಿಯವಾಗುತ್ತವೆ. ಇದ್ರಿಂದ ಆತನಿಗೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗೋದಿಲ್ಲ. 

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡೋದು ಎಷ್ಟು ಸುರಕ್ಷಿತ?

5.ಅಡ್ವಾನ್ಸ್ ಟ್ಯಾಕ್ಸ್‌ ಪಾವತಿ
2021-22ನೇ ಸಾಲಿನ ಎರಡನೇ ಕಂತಿನ ಅಡ್ವಾನ್ಸ್‌ ಟ್ಯಾಕ್ಸ್‌ ಪಾವತಿಸಲು ಸೆಪ್ಟೆಂಬರ್‌ 25 ಕೊನೆಯ ದಿನಾಂಕ. ಅಡ್ವಾನ್ಸ್‌ ಟ್ಯಾಕ್ಸ್‌ ಸಮಯಕ್ಕೆ ಸರಿಯಾಗಿ ಪಾವತಿಸದಿದ್ರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 234 ಬಿ ಹಾಗೂ 234 ಸಿ ಅನ್ವಯ ಬಾಕಿಯಿರೋ ಟ್ಯಾಕ್ಸ್‌ಗೆ ಬಡ್ಡಿ ವಿಧಿಸಲಾಗುತ್ತದೆ. ಪ್ರತಿ ತಿಂಗಳು ಶೇ.1ರಷ್ಟು ಬಡ್ಡಿ ವಿಧಿಸಲಾಗುತ್ತದೆ. 

click me!