
ನವದೆಹಲಿ [ಆ.28]: ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಕೆಲವು ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಹಾಗೂ ಗತಿಮಾನ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರನ್ನು ದ್ವಿಗುಣಗೊಳಿಸುವ ಸಲುವಾಗಿ ಈ ರೈಲುಗಳ ಟಿಕೆಟ್ ದರದಲ್ಲಿ ಶೇ.25ರಷ್ಟುರಿಯಾಯತಿ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಯೋಜನೆಗೆ ಚೆನ್ನೈ ಸೆಂಟ್ರಲ್- ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್, ಅಹಮದಾಬಾದ್- ಮುಂಬೈ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ಒಳಪಡಲಿವೆ.
ಕಡಿಮೆ ದರದ ವಿಮಾನಯಾನ ಹಾಗೂ ಇತರೆ ರಸ್ತೆ ಮಾರ್ಗದ ಇತರ ವಲಯಗಳಿಂದ ಎದುರಾದ ತೀವ್ರ ಪೈಪೋಟಿಯಿಂದ ಶತಾಬ್ದಿ, ತೇಜಸ್ ಹಾಗೂ ಗತಿಮಾನ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರ ಸಂಖ್ಯೆ ವಿರಳಗೊಂಡಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಈ ರೈಲುಗಳ ಎಸಿ ಚೇರ್, ಎಕ್ಸ್‌ಕ್ಯೂಟಿವ್ ಚೇರ್ ಸೀಟುಗಳ ಮೂಲ ದರದಲ್ಲಿ ರಿಯಾಯಿತಿ ನೀಡಲಾಗಿದ್ದು, ಜಿಎಸ್‌ಟಿ, ಟಿಕೆಟ್ ಕಾಯ್ದಿರಿಸುವಿಕೆಯ ಶುಲ್ಕ, ಸೂಪರ್‌ಫಾಸ್ಟ್ ಟ್ಯಾರಿಫ್ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಪ್ರಯಾಣಿಕರು ಭರಿಸಬೇಕು ಎಂದು ರೈಲ್ವೆ ಇಲಾಖೆ ಹೇಳಿದೆ. ಯಾವ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಹಾಗೂ ಯಾವ ಮಾರ್ಗದ ರೈಲುಗಳ ಶುಲ್ಕದಲ್ಲಿ ರಿಯಾಯತಿ ನೀಡಬೇಕು ಎಂಬಂಥ ಅಧಿಕಾರವನ್ನು ಪ್ರಧಾನ ವಾಣಿಜ್ಯ ವ್ಯವಸ್ಥಾಪಕರಿಗೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಯಾಣಿಕರ ದಟ್ಟಣೆ ವೇಳೆ ಹೆಚ್ಚುವರಿ ರೈಲು ಸೇವೆ
ಈ ರಿಯಾಯತಿ ಆಫರ್ ಅನ್ನು ವಾರ್ಷಿಕ, 6 ತಿಂಗಳು ಅಥವಾ ವಾರಾಂತ್ಯದಲ್ಲಿ ನೀಡಬಹುದಾಗಿದೆ. ಅಲ್ಲದೆ, ಸೆ.30ರ ಒಳಗಾಗಿ ಕಡಿಮೆ ಪ್ರಯಾಣಿಕರನ್ನು ಹೊಂದಿದ ರೈಲುಗಳ ಮಾರ್ಗಗಳನ್ನು ಗುರುತಿಸುವಂತೆ ಎಲ್ಲಾ ರೈಲ್ವೆ ವಲಯಗಳಿಗೆ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಜೊತೆಗೆ, ಪ್ರಯಾಣಿಕರಿಗೆ ರಿಯಾಯತಿ ದರದ ಟಿಕೆಟ್ ಯೋಜನೆ ಜಾರಿಯಾದ ಆಗುವ ಬದಲಾವಣೆ ಕುರಿತು 4 ತಿಂಗಳ ಬಳಿಕ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.