
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರಾತ್ರಿಯ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಕುಸಿತ ಕಂಡ ಹಿನ್ನೆಲೆ ಶೀತಗಾಳಿ ಬೀಸುತ್ತಿದ್ದು, ಬೆಂಗಳೂರು ಕೂಲ್ ಕೂಲ್ ಆಗಿದೆ. ಸೋಮವಾರ ಬಿಡುಗಡೆಯಾದ ಹವಾಮಾನ ಮಾಹಿತಿಯ ಪ್ರಕಾರ, ರಾತ್ರಿಯ ತಾಪಮಾನದಲ್ಲಿನ ತೀವ್ರ ಕುಸಿತವು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಶೀತ ಗಾಳಿಯನ್ನು ಸೃಷ್ಟಿಸಿದೆ. ಬೀದರ್ ರಾಜ್ಯದಲ್ಲೇ ಅತ್ಯಂತ ಕಡಿಮೆ ಕನಿಷ್ಠ ತಾಪಮಾನ 9.5 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಹಾಗೆಯೇ ಉತ್ತರ ಕರ್ನಾಟಕದ ಸದಾ ಬಿಸಿಲಿನಿಂದ ಉರಿಯುವ ಹಲವು ಜಿಲ್ಲೆಗಳು ಸಹ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವನ್ನು ಹೊಂದಿದ್ದು, ಜನ ಮನೆಯಿಂದ ಹೊರಬರುವುದಕ್ಕೆ ಸೋಮಾರಿತನ ಉಂಟು ಮಾಡುತ್ತಿದೆ.
ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕುಸಿತ ಕಂಡು ಬಂದಿದೆ ಎಂದು ಹವಾಮಾನ ಅವಲೋಕನಗಳು ತೋರಿಸುತ್ತವೆ. ಕರಾವಳಿ ಪ್ರದೇಶಗಳು ಮತ್ತು ಉತ್ತರದ ಕೆಲವು ಭಾಗಗಳಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಗಮನಾರ್ಹ ಕುಸಿತ ಕಂಡುಬಂದಿದೆ, ಆದರೆ ದಕ್ಷಿಣ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ದಾಖಲಾಗಿಲ್ಲ. ಉತ್ತರ ಒಳನಾಡಿನ ಅನೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಕೆಲವು ಪ್ರದೇಶಗಳಲ್ಲಿ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಕುಸಿತ ಕಂಡುಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ದತ್ತಾಂಶದ ಪ್ರಕಾರ, ರಾಜ್ಯದ ಶೇಕಡ 72 ರಷ್ಟು ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ಬೀದರ್, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ವಿಜಯಪುರ ಮತ್ತು ಯಾದಗಿರಿಯ ಕೆಲವು ಪ್ರದೇಶಗಳಲ್ಲಿ ತಾಪಮಾನವು 7 ಡಿಗ್ರಿ ಸೆಲ್ಸಿಯಸ್‌ನಿಂದ 9 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ.
ಈ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ:
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರದ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮುಂಜಾನೆ ವೇಳೆ ಮಂಜು ಮುಸುಕಿದ ವಾತಾವರಣವಿದ್ದು, ಭಾಗಶಃ ಮೋಡ ಕವಿದ ವಾತಾವರಣವಿತ್ತು ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ರಿಂದ 28 ಡಿಗ್ರಿ ಸೆಲ್ಸಿಯಸ್ ಮತ್ತು 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕರ್ನಾಟಕದ 26 ಜಿಲ್ಲೆಗಳಲ್ಲಿ ಭಾರಿ ಮಳೆ ಕೊರತೆ
ಕೆಎಸ್‌ಎನ್‌ಡಿಎಂಸಿಯ ವಿಶ್ಲೇಷಣೆಯ ಪ್ರಕಾರ, ನವೆಂಬರ್ 1 ರಿಂದ ನವೆಂಬರ್ 17 ರವರೆಗಿನ ಮಳೆಯು ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. 26 ಜಿಲ್ಲೆಗಳಲ್ಲಿ ದೊಡ್ಡ ಮಳೆ ಕೊರತೆಯನ್ನು ದಾಖಲಿಸಿದೆ.
ಆರೋಗ್ಯ ಸಲಹೆ
ಹಿಮಪಾತ ಹಾಗೂ ಶೀತ ಗಾಳಿಯಿಂದಾಗಿ ಕಾಲಕ್ಕೆ ತಕ್ಕಂತೆ ಬರುವ ಕಾಯಿಲೆಗಳ ಅಪಾಯ ಹೆಚ್ಚಾಗುವುದರಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಒತ್ತಾಯಿಸಿದ್ದಾರೆ. ಜನರು ಬೆಚ್ಚಗಿನ ಉಡುಗೆ ತೊಡುವುದು, ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು, ಬಿಸಿ ಪಾನೀಯಗಳನ್ನು ಸೇವಿಸುವುದು ಸೂಕ್ತವಾಗಿದೆ.
ಇದನ್ನೂ ಓದಿ: ನ್ಯಾಯ ಎಲ್ಲಿದೆ.. ಪರ ತೀರ್ಪು ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆ: ACBಯಿಂದ ಕ್ಲಾರ್ಕ್ ಅರೆಸ್ಟ್, ಜಡ್ಜ್ ನಾಪತ್ತೆ
ಇದನ್ನೂ ಓದಿ: ತಲೆಗೆ 1 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ ನಕ್ಸಲ್ ನಾಯಕನು ಸೇರಿ 6 ಪ್ರಮುಖ ನಕ್ಸಲರ ಹತ್ಯೆ