
ಬೆಂಗಳೂರು: ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕೆ.ಎಸ್. ಈಶ್ವರಪ್ಪ (Ishwarappa) ಅವರು ಸಚಿವ ಕೆ.ಜೆ.ಜಾರ್ಜ್ (K.J. George) ಅವರನ್ನು ಕೊಲೆಗಾರ ಎಂದಿದ್ದರು. ನಾವು ಈಗ ಈಶ್ವರಪ್ಪ ಅವರನ್ನು ಏನೆಂದು ಕರೆಯಬೇಕು? ಸಂತೋಷ್ ಪಾಟೀಲ್‌ಗೆ ಕಿರುಕುಳ ನೀಡಿ ಸಾಯುವಂತೆ ಮಾಡಿರುವ ಈಶ್ವರಪ್ಪ ಕೊಲೆಗಾರನಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜೆ.ಜಾರ್ಜ್ ವಿರುದ್ಧ ಸುಳ್ಳು ಆರೋಪ ಬಂದಾಗ ಅವರು ರಾಜೀನಾಮೆ ನೀಡಿ ಸಿಬಿಐ ತನಿಖೆ (CBI Enquiry) ಎದುರಿಸಿ ಕ್ಲೀನ್‌ಚಿಟ್ (CleanChit) ಪಡೆದರು. ಆಗ ಕೆ.ಜೆ.ಜಾರ್ಜ್ ಅವರಿಗೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಒತ್ತಾಯಿಸಿದ್ದ ಹಾಗೂ ಕೊಲೆಗಾರ ಎಂದು ಕರೆದಿದ್ದ ಈಶ್ವರಪ್ಪ ಅವರನ್ನು ಈಗ ಏನೆಂದು ಕರೆಯಬೇಕು? ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ (State Govt) ಭ್ರಷ್ಟರ ಪರ ನಿಂತಿದೆ. ಸಂತೋಷ್ ಪಾಟೀಲ್ (Santhosh Patil) ಅವರು ಡೆತ್ ನೋಟ್ ಬರೆದಿಟ್ಟು ಈಶ್ವರಪ್ಪ ವಿರುದ್ಧ ಆರೋಪಿಸಿದ್ದರೂ ಆರೋಪಿಯನ್ನು ಬಂಧಿಸಿಲ್ಲ ಎಂದರು. ಇಂತಹ ಬೇರೆ ಪ್ರಕರಣಗಳಲ್ಲಿ ಹೇಗೆ ಕ್ರಮ ಕೈಗೊಳ್ಳಲಾಗುವುದೋ ಅದೇ ರೀತಿ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ವಿಚಾರದಲ್ಲಿ ಈ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ (Corruption Prevention Act) ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡಿದರು.
ರಾಜ್ಯಪಾಲರಿಂದ ಪೂರಕ ಸ್ಪಂದನೆ:
ಮುಖ್ಯಮಂತ್ರಿಗಳು ಸಂಪುಟದಿಂದ ಈಶ್ವರಪ್ಪ ಅವರನ್ನು ವಜಾಗೊಳಿಸಿಲ್ಲ. ಜತೆಗೆ ಗಂಭೀರ ಪ್ರಕರಣದಲ್ಲಿ ಸಚಿವರನ್ನು ಬಂಧಿಸಿಲ್ಲ. ಹೀಗಾಗಿ ರಾಜ್ಯಪಾಲರಿಗೆ (Governer) ಭೇಟಿ ನೀಡಿ ದೂರು ನೀಡಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ. ನ್ಯಾಯ ಸಿಗುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.
ಪೊಲೀಸರು ಈಶ್ವರಪ್ಪ ರಕ್ಷಣೆಗೆ
ಸಂತೋಷ್ ಕುಟುಂಬ ಸದಸ್ಯರು ಕೊಟ್ಟಿರುವ ದೂರಿನಲ್ಲಿ ಭ್ರಷ್ಟಾಚಾರದ ಆರೋಪಗಳು ಇದ್ದರೂ ಭ್ರಷ್ಟಾಚಾರ (corruption) ಪ್ರಕರಣ ದಾಖಲಿಸಿಲ್ಲ. ಸರ್ಕಾರದ ಒತ್ತಡದ ಮೇರೆಗೆ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿ ಸಚಿವರನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ನಾವು ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.