ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಶೇ.40ರಷ್ಟುಕಮಿಷನ್ ಆರೋಪ ಮಾಡಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ದೂರುಗಳನ್ನು ಕಾಂಗ್ರೆಸ್ಸಿಗರ ಮನೆಯಲ್ಲಿ ಕುಳಿತು ಗುತ್ತಿಗೆದಾರರು ಸಿದ್ಧಪಡಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ( Chief Ministers Political Secretary) ಎಂ.ಪಿ. ರೇಣುಕಾಚಾರ್ಯ (Renukacharya) ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ಸಿಗರು. ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರು ಈಗ ನೈತಿಕತೆ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರವು ಒಳ್ಳೆಯ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ಕೆಟ್ಟಹೆಸರು ತರುವ ಸಲುವಾಗಿ ಶೇ.40 ಕಮಿಷನ್ ಆರೋಪ ಮಾಡಲಾಗುತ್ತಿದೆ. ಈ ಗುತ್ತಿಗೆದಾರರು ಕಾಂಗ್ರೆಸ್ಸಿಗರ ಮನೆಯಲ್ಲಿ ಕುಳಿತು ದೂರಿನ ಕರಡು ಸಿದ್ಧಪಡಿಸಿದ್ದಾರೆ. ಗುತ್ತಿಗೆದಾರರು ಶೇ.40ರಷ್ಟು ಕಮಿಷನ್ ನೀಡಿದರೆ ಜಿಎಸ್‌ಟಿ, ರಾಯಲ್ಟಿಹಾಗೂ ತೆರಿಗೆ ಪಾವತಿಸಿ ಉಳಿಯುವುದು ಶೇ.35ರಷ್ಟುಮಾತ್ರ. ಇಷ್ಟರಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಆರೋಪ ಸಾಬೀತು ಬಳಿಕ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ. ಡಿವೈಎಸ್ಪಿ ಗಣಪತಿ ಪ್ರಕರಣಕ್ಕೂ (Ganapati Suicide case) ಸಂತೋಷ್ ಪ್ರಕರಣಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ಸಿಗರು ಹೇಳಿದ ತಕ್ಷಣವೇ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಗಣಪತಿ ಪ್ರಕರಣದಲ್ಲಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರಾ? ಹೀಗಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಯಾಕೆ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.
ನಮಗೆ ಸಂತೋಷ್ ಸಾವಿನ ಬಗ್ಗೆ ಅನುಕಂಪವಿದೆ. ಕಾಂಗ್ರೆಸ್ಸಿಗರು ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮೃತ ಸಂತೋಷ್ ಜೊತೆಯಲ್ಲಿ ಉಡುಪಿಗೆ ಹೋಗಿದ್ದ ಇಬ್ಬರು ಯಾರು? ಉಡುಪಿಗೆ ಹೋಗಿ ಏಕೆ ಆತ್ಮಹತ್ಯೆ ಮಾಡಿಕೊಂಡರು? ಮೊದಲು ಸಂತೋಷ್ ಜೊತೆಯಲ್ಲಿದ್ದವರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ಮಧ್ಯೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಈಶ್ವರಪ್ಪ (KS Eshwarappa)ರಾಜೀನಾಮೆ (Resignation) ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿವೆ. ಉಡುಪಿ (Udupi) ನಗರ ಪೊಲೀಸ್ ಠಾಣೆಯಲ್ಲಿ (Police Station) ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪಂಚನಾಮೆ ನಡೆಸಿ, ಮಹತ್ವದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಸಂತೋಷ್ ಪತ್ನಿ ಜಯಶ್ರೀ ಕೂಡ ಸಚಿವ ಈಶ್ವರಪ್ಪ ವಿರುದ್ಧ ಆರೋಪಿಸಿದ್ದಾರೆ. ಈಶ್ವರಪ್ಪ ಅವರಿಂದ ಅನಾಥರಾದೆವು. ಅಪ್ಪಾ ಎಲ್ಲಿ ಎಂದು ಮಕ್ಕಳು ಕೇಳಿದರೆ ಏನೆಂದು ಉತ್ತರಿಸಲಿ..? 4 ಕೋಟಿ ಕೆಲಸ ಮಾಡಿದೀನಿ, 40 % ಕಮಿಷನ್ ಕೇಳ್ತಿದ್ದಾರೆ. ಅದನ್ನ ಕೊಟ್ರೆ ನಾನೆಲ್ಲಿಗೆ ಹೋಗಲಿ..? ಮನೆ ಮಾರಿದರೂ ನನ್ನ ಸಾಲ ತೀರಲ್ಲ ಅಂತಾ ಇದ್ರು. ಈಶ್ವರಪ್ಪ ಅವರನ್ನು ಬಂಧಿಸಲೇಬೇಕು ಎಂದು ಕಣ್ಣೀರು ಹಾಕಿದ್ದಾರೆ.