
ಬೆಂಗಳೂರು: ವಾಹನಗಳ ಪಾರ್ಕಿಂಗ್ ಸಮರ್ಪಕ ನಿರ್ವಹಣೆ, ಶಿಸ್ತುಬದ್ಧ ಪಾರ್ಕಿಂಗ್ ಮೂಲಕ ಸ್ಥಳದ ಸದುಪಯೋಗ ಉದ್ದೇಶದಿಂದ ನಗರದ ಕೇಂದ್ರ ಭಾಗದ 20 ರಸ್ತೆಗಳಲ್ಲಿ ‘ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆ’ ಶೀಘ್ರದಲ್ಲೇ ಜಾರಿಯಾಗಲಿದೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕಮರ್ಷಿಯಲ್ ಸ್ಟ್ರೀಟ್, ಸಂಪಿಗೆ ರಸ್ತೆ ಸೇರಿದಂತೆ ಒಟ್ಟು 100 ರಸ್ತೆಗಳನ್ನು ಪೇಯ್ಡ್ ಪಾರ್ಕಿಂಗ್‌ಗಾಗಿ ಗುರುತಿಸಲಾಗಿದೆ. ಶುಲ್ಕ ಸಂಗ್ರಹಕ್ಕಾಗಿ ಆಸಕ್ತ ಏಜೆನ್ಸಿಗಳಿಂದ ಟೆಂಡರ್ ಕೂಡ ಕರೆಯಲಾಗಿತ್ತು. ಈವರೆಗೆ ಕಮರ್ಷಿಯಲ್ ಸ್ಟ್ರೀಟ್, ಸಂಪಿಗೆ ರಸ್ತೆ, ಮಲ್ಲೇಶ್ವರ ರೈಲ್ವೆ ಸಮನಾಂತರ ರಸ್ತೆ ಸೇರಿದಂತೆ 20 ರಸ್ತೆಗಳಿಗೆ ಏಜೆನ್ಸಿಗಳು ಆಸಕ್ತಿ ತೋರಿಸಿವೆ. ಅದರಲ್ಲಿ ಅರ್ಹ ಏಜೆನ್ಸಿಗಳನ್ನು ಆಯ್ಕೆ ಮಾಡಲಾಗಿದೆ. ಈ 20 ರಸ್ತೆಗಳಿಂದ ಪಾಲಿಕೆಗೆ ವಾರ್ಷಿಕ 3 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.
ಉಳಿದ 80 ರಸ್ತೆಗಳಿಗೆ ಮುಂದಿನ ದಿನಗಳಲ್ಲಿ ಮತ್ತೆ ಟೆಂಡರ್ ಕರೆಯಲಾಗುತ್ತದೆ. ಒಟ್ಟಾರೆಯಾಗಿ 100 ರಸ್ತೆಗಳನ್ನು ಪೇಯ್ಡ್ ಪಾರ್ಕಿಂಗ್ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.
ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿರುವ ರಸ್ತೆಗಳಲ್ಲಿ ಪೇಯ್ಡ್ ಪಾರ್ಕಿಂಗ್‌ಗೆ ವಾಹನ ಸವಾರರ ಪ್ರತಿಕ್ರಿಯೆ ಆಧರಿಸಿ ಏಜೆನ್ಸಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದಾಗಿದೆ. ಬ್ರಿಗೇಡ್ ರಸ್ತೆಯಂತಹ ಕೆಲವೊಂದು ಪ್ರಮುಖ ರಸ್ತೆ ಹೊರತುಪಡಿಸಿ ನಗರದ ಬೇರೆ ಭಾಗದ ಸಾರ್ವಜನಿಕ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ವ್ಯವಸ್ಥೆ ಹೊಸದಾಗಿರುವ ಕಾರಣ ಆರಂಭದಲ್ಲಿ ವಾಹನ ಸವಾರರು ಹಾಗೂ ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆಯಬಹುದು. ಈ ಕಾರಣಕ್ಕೆ ಎಲ್ಲಾ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲು ಏಜೆನ್ಸಿಗಳು ಹಿಂದೇಟು ಹಾಕಿರಬಹುದು ಎಂದು ಹೇಳಲಾಗಿದೆ.
ಯಂತ್ರೀಕೃತ ಚೀಟಿ ವಿತರಣೆ, ಸಿಸಿ ಕ್ಯಾಮೆರಾ ಕಣ್ಗಾವಲು, ಪಾರ್ಕಿಂಗ್ ಶುಲ್ಕದ ಫಲಕಗಳು, ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಕಡೆಗಳಲ್ಲಿ ನಿಲ್ಲಿಸುವಂತೆ ರಸ್ತೆ ಮಾರ್ಕಿಂಗ್ ಮಾಡಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರು. ಹಾಗೂ ಕಾರುಗಳಿಗೆ ಗಂಟೆಗೆ 30 ರು. ಶುಲ್ಕ ನಿಗದಿಪಡಿಸಲಾಗುತ್ತದೆ.
ಕಮರ್ಷಿಯಲ್ ಸ್ಟ್ರೀಟ್, ಸಫೀನಾ ಪ್ಲಾಜಾ ರಸ್ತೆ, ಡಿಕೆನ್ಸನ್ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್ ರಸ್ತೆ, ಕಾಮರಾಜ್ ರಸ್ತೆ, ಮಿಲ್ಲರ್ಸ್ ರಸ್ತೆಯಿಂದ ಚಂದ್ರಿಕಾ ಜಂಕ್ಷನ್‌ವರೆಗೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ, ಸಂಪಿಗೆ ರಸ್ತೆ, ದತ್ತಾತ್ರೇಯ ದೇವಸ್ಥಾನ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ವಾಣಿ ವಿಲಾಸ ರಸ್ತೆ, ಮಾವಳ್ಳಿ ಟ್ಯಾಂಕ್ ಬಂಡ್ ರಸ್ತೆ, ಡಿ.ವಿ.ಜಿ. ರಸ್ತೆ, ಶಂಕರ ಮಠ ರಸ್ತೆ, ಪಂಪ ಮಹಾಕವಿ ರಸ್ತೆ ಮತ್ತು ಮಲ್ಲೇಶ್ವರಂ ರೈಲ್ವೆ ಸಮನಾಂತರ ರಸ್ತೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಅವಹೇಳನ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಜಾಮೀನು,. ಕೋರ್ಟ್ ಆದೇಶವೇನು? ಮುಂದಿನ ವಿಚಾರಣೆ ಯಾವಾಗ?
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದ ಪಾಲಿಕೆಗೆ ಆದಾಯ ಬರುವ ಜೊತೆಗೆ ವಾಹನಗಳ ಪಾರ್ಕಿಂಗ್‌ಗೆ ಶಿಸ್ತುಬದ್ಧಗೊಳ್ಳುವ ನಂಬಿಕೆ ಇದೆ. ಜನರು ಸಮೂಹ ಸಾರಿಗೆಗಳನ್ನು ಬಳಸಿದರೆ ಇನ್ನೂ ಒಳ್ಳೆಯದು ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಹೇಳುತ್ತಾರೆ.