
ಬೆಂಗಳೂರು (ಸೆ.17): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದವು. ಬಂಧನದಲ್ಲಿರುವ ದರ್ಶನ್‌ಗೆ ಹಾಸಿಗೆ, ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಅವರ ವಕೀಲ ಎಸ್. ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಕುರಿತು ವರದಿ ಸಲ್ಲಿಸಿದ್ದ ಎಎಸ್‌ಪಿಪಿ ಸಚಿನ್ ವಿರುದ್ಧವೂ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಿಚಾರಣೆಯ ವೇಳೆ ದರ್ಶನ್‌ಗೆ ಹಾಸಿಗೆ, ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶವನ್ನು ಜೈಲು ಅಧಿಕಾರಿಗಳು ಪಾಲನೆ ಮಾಡದೇ ಇರುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಾದ ಮಾಡಿದ್ದರು.
ನ್ಯಾಯಾಲಯದ ಆದೇಶವಿದ್ದರೂ ಸಹ ಜೈಲು ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ವಕೀಲ ಸುನೀಲ್ ಕುಮಾರ್ ಆರೋಪಿಸಿದರು. ಹಾಸಿಗೆ, ಕಂಬಳಿ, ಊಟದ ತಟ್ಟೆ, ಮಗ್ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಆದೇಶದ ನಂತರ ನೀಡಿಲ್ಲ ಎಂದು ಹೇಳಿದರು. ಕೋರ್ಟ್ ಆದೇಶವನ್ನ ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ. ಆದೇಶವನ್ನ ತೀರಾ ಹಗುರವಾಗಿ ಪರಿಗಣಿಸಿದ್ದಾರೆ. ಕೋರ್ಟ್ ಆದೇಶ ಇದ್ದರೂ ಏನನ್ನೂ ಕೊಟ್ಟಿಲ್ಲ. ಏನು ಕೊಟ್ಟಿದ್ದಾರೆ ಎಂದು ಆರೋಪಿಯ ಬಳಿ ಮಾಹಿತಿ ಪಡೆಯಿರಿ. ಜೈಲು ಅಧಿಕಾರಿಗಳು ಏನನ್ನೂ ಬೇಕಾದರೂ ಬರೆದುಕೊಂಡು ಬರಬಹುದು. ಕುಟುಂಬಸ್ಥರ ಜೊತೆ ಪೋನ್ ನಲ್ಲಿ ಮಾತಾಡಲು ಅವಕಾಶ ಕೊಟ್ಟಿದ್ದಾರೆ. ಹಾಸಿಗೆ, ಕಂಬಳಿ, ಪ್ಲೇಟ್, ಮಗ್ಗು ಕೊಟ್ಟಿದ್ದಾಗಿ ಹೇಳಿದ್ದಾರೆ. ನಾವು ಅರ್ಜಿ ಹಾಕುವ ಮುನ್ನವೂ ಈ ಸೌಲಭ್ಯ ಕೊಟ್ಟಿದ್ದರು. ಆದೇಶದ ಬಳಿಕ ಯಾವುದೇ ಸೌಲಭ್ಯ ನೀಡಿಲ್ಲ ಎಂದು ವಕೀಲ ಸುನೀಲ್ ವಾದ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಮಾತ್ರವೇ ಕ್ವಾರಂಟೈನ್ ರೂಲ್‌ಗಳು ಇದ್ದವು. ಈಗ ಯಾಕೆ ಕ್ವಾರೇಂಟೈನ್ ನಿಯಮ ಬೇಕು. ಕುಟುಂಬಸ್ಥರು, ವಕೀಲರ ಬೇಟಿಗೆ ಮಾತ್ರ ಅವಕಾಶ ಕೊಟ್ಟಿರೋದು ದೊಡ್ಡದಲ್ಲ. ಹಾಸಿಗೆ, ಬಟ್ಟೆ ಸಂಬಂಧ ಏನ್ ಕೊಟ್ಟಿದ್ದೀರಿ ಎಂಬುದನ್ನ ಜೈಲು ಅಧಿಕಾರಿಗಳು ಹೇಳುತ್ತಿಲ್ಲ ಎಂದು ಜೈಲು ಅಧಿಕಾರಿಗಳ ವಿರುದ್ಧ ದರ್ಶನ್ ಪರ ವಕೀಲ ಆರೋಪ ಮಾಡಿದ್ದಾರೆ
ಪವಿತ್ರಾಗೌಡ ಹೊರತು ಪಡಿಸಿ ಎಲ್ಲರನ್ನೂ ಕ್ವಾರೇಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆ. ಬೇರೆ ಆರೋಪಿಗಳ ಪೈಕಿ ಎಷ್ಟು ಜನರನ್ನು ಕ್ವಾರಂಟೈನ್‌ನಲ್ಲಿ ಇಟ್ಟಿದ್ದಾರೆ ಅನ್ನೋದನ್ನ ತಿಳಿಸಲಿ. ಯಾವ ಎಂಎಲ್ಎ, ಸಂಸದರನ್ನ 14 ದಿನಕ್ಕಿಂತ ಹೆಚ್ಚು ದಿನ ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಆರ್‌ಟಿಐನಲ್ಲಿ ಮಾಹಿತಿ ಕೇಳಿದ್ದೇವೆ. ಜೈಲು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮನವಿ ಮಾಡುತ್ತೇವೆ. ಆರೋಪಿಗಳ ಸುತ್ತಾ ಕ್ಯಾಮರಾ ಇಡೋ ಮೂಲಕ ಹೆಚ್ಚಿನ ಭದ್ರತೆ ಹೆಸರಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ವಾದಿಸಿದರು.
ದರ್ಶನ್ ಪಕ್ಕದ ಸೆಲ್‌ನಲ್ಲಿ ಪಾಕಿಸ್ತಾನದ ಉಗ್ರರು ಇದ್ದಾರೆ. ಅವರಿಗೆ ಕೇರಂ, ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಆ ಬಗ್ಗೆ ವೀಡಿಯೋಗಳು ಇವೆ. ಅವುಗಳನ್ನ ಕೋರ್ಟ್ ಗೆ ನೀಡಲು ಸಿದ್ದ ಎಂದು ವಕೀಲ ಹೇಳಿದ್ದಾರೆ.
ಹೊಸ ಆರೋಪಿಗಳನ್ನು ಕೇವಲ 14 ದಿನಗಳ ಕಾಲ ಮಾತ್ರ ಕ್ವಾರಂಟೈನ್‌ನಲ್ಲಿ ಇಡಬೇಕು. ನಂತರ ಆರೋಗ್ಯ ಚೆಕ್ ಮಾಡಿ ಸಾಮಾನ್ಯ ಸೆಲ್‌ಗೆ ಶಿಫ್ಟ್ ಮಾಡಬೇಕು. ಆದರೆ, ದರ್ಶನ್ ಅವರನ್ನು ಒಂದು ತಿಂಗಳಿನಿಂದ ಅದೇ ಸೆಲ್‌ನಲ್ಲಿ ಇರಿಸಲಾಗಿದೆ. ಇದು ಜೈಲು ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ಜೈಲು ಮ್ಯಾನುಯಲ್ ಪ್ರಕಾರ ಸೌಲಭ್ಯ: ಜೈಲು ಮ್ಯಾನುಯಲ್ ಪ್ರಕಾರ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ದರ್ಶನ್ ಅವರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದು ಎಎಸ್‌ಪಿಪಿ ಸಚಿನ್ ವಾದಿಸಿದರು.
ಕ್ವಾರಂಟೈನ್ ನಿಯಮಗಳ ಪಾಲನೆ: ಜೈಲಿನ ನಿಯಮಗಳ ಪ್ರಕಾರವೇ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ ಎಂದು ಅವರು ತಿಳಿಸಿದರು.
ಇಬ್ಬರ ವಾದಗಳನ್ನು ಆಲಿಸಿದ ನ್ಯಾಯಾಲಯ, ದರ್ಶನ್ ಮತ್ತು ಇತರ ಆರೋಪಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಕುರಿತ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ. ಆ ದಿನ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.