ಆಸ್ಟ್ರೇಲಿಯಾದಲ್ಲಿ ವಿದೇಶಿಗನ ಬಾಯಲ್ಲಿ ಅಚ್ಚ ಕನ್ನಡ ಮಾತು: ರಶ್ಮಿಕಾಗೊಮ್ಮೆ ವೀಡಿಯೋ ತೋರಿಸಿ ಎಂದ ನೆಟ್ಟಿಗರು

Published : Sep 16, 2025, 04:47 PM ISTUpdated : Sep 16, 2025, 04:55 PM IST
Australian Man's Fluent Kannada, Foreigner speaking Kannada

ಸಾರಾಂಶ

Foreigner speaking Kannada: ಆಸ್ಟ್ರೇಲಿಯಾದಲ್ಲಿ ಕರ್ನಾಟಕದ ಯುವತಿಯೊಬ್ಬಳಿಗೆ, ಸ್ಪಷ್ಟವಾಗಿ ಕನ್ನಡ ಮಾತನಾಡುವ ವಿದೇಶಿ ವ್ಯಕ್ತಿ ಎದುರಾಗಿದ್ದಾರೆ. ಹಣೆಗೆ ತಿಲಕವಿಟ್ಟು, ಉಡುಪಿ ಹೋಟೆಲ್ ಮಾಣಿಯಂತೆ ಕನ್ನಡದಲ್ಲಿಯೇ ಆಹಾರದ ಹೆಸರು ಪಟಪಟನೆ ಹೇಳುವ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ವಿದೇಶಿಗನ ಬಾಯಲ್ಲಿ ಸೊಗಸಾದ ಕನ್ನಡ: ವೀಡಿಯೋ ನೋಡಿ ಫಿದಾ ಆದ ಕನ್ನಡಿಗರು

ನಮ್ಮ ಬೆಂಗಳೂರಿನಲ್ಲೇ ಅನೇಕರು ಕನ್ನಡ ಗೊತ್ತಿದ್ದರು ಮಾತನಾಡದೇ ದೌಲತ್ತು ತೋರಿಸುತ್ತಾರೆ. ಇಂಗ್ಲೀಷ್ ಮಾತನಾಡಿದರೆ ಸ್ಟ್ಯಾಂಡರ್ಡ್‌ ಕನ್ನಡ ಮಾತನಾಡಿದರೆ ಲೋ ಕ್ಲಾಸ್ ಎಂಬ ಭಾವನೆ ಅನೇಕರಲ್ಲಿದೆ. ಹಾಗೆಯೇ ಕನ್ನಡ ಕುಟುಂಬದಲ್ಲಿ ಹುಟ್ಟಿ ಬೆಳೆದವರೇ ಹರಕು ಮುರುಕು ಕನ್ನಡ ಮಾತನಾಡುವ ಮೂಲಕ ಕನ್ನಡಕ್ಕೆ ಅವಮಾನಿಸುತ್ತಾರೆ. ಬೆಂಗಳೂರಿನಲ್ಲಂತೂ ಇಂಗ್ಲೀಷ್‌ ಮಿಕ್ಸ್ ಮಾಡದೇ ಸ್ಪಷ್ಟವಾಗಿ ಕನ್ನಡ ಮಾತನಾಡುವವರನ್ನು ಹುಡುಕಾಡಬೇಕು ಅಂತಹ ಸ್ಥಿತಿ ಇದೆ. ರಾಜ್ಯ ರಾಜಧಾನಿಯಲ್ಲೇ ಪರಿಸ್ಥಿತಿ ಹೀಗಿರುವಾಗ ಬೇರೆ ದೇಶ ಬೇರೆ ರಾಜ್ಯಗಳಲ್ಲಿ ಕನ್ನಡ ಹುಡುಕಲು ಹೊರಡುವುದು ಹುಚ್ಚುತನ. ಆದರೆ ಹೀಗೆ ಬೇರೆ ದೇಶಕ್ಕೆ ಹೋದಾಗ ಯಾರಾದರೂ ಹೊರಗಿನವರು ನಮ್ಮಗಿಂತ ಸ್ಟಷ್ಟವಾಗಿ ಕನ್ನಡ ಮಾತನಾಡಲು ಶುರು ಮಾಡಿದರೆ ಅಚ್ಚರಿಯ ಜೊತೆ ತುಂಬಾ ಖುಷಿಯೂ ಆಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ವಿದೇಶದಲ್ಲಿ ಓದಲು ಹೊರಟ ಕರ್ನಾಟಕದ ಯುವತಿಗೆ ಅಲ್ಲೊಬ್ಬರು ಸ್ಪಷ್ಟವಾಗಿ ಕನ್ನಡ ಮಾತನಾಡುವ ವ್ಯಕ್ತಿ ಪರಿಚಯವಾಗಿದ್ದು, ಕನ್ನಡದವರಿಗಿಂತಲೂ ಚೆನ್ನಾಗಿ ಅವರು ಕನ್ನಡ ಮಾತನಾಡುವುದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಅವರು ಈ ವಿದೇಶಿಗನ ಸ್ಪಷ್ಟ ಕನ್ನಡ ಸಂಭಾಷಣೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರಿ ವೈರಲ್ ಆಗಿದೆ.

ಬರೀ ಭಾಷೆ  ಮಾತ್ರ ಅಲ್ಲ, ಹಣೆಗೆ ಕುಂಕುಮ ವಿಭೂತಿಯಲ್ಲಿ ಕಂಗೊಳಿಸಿದ ಆಸ್ಟ್ರೇಲಿಯನ್

sira_to_australia ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ಸಹನಾ ಗೌಡ ಎಂಬ ತುಮಕೂರಿನ ಶಿರಾದ ಯುವತಿಯೊಬ್ಬರು ಈ ವೀಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅವರು ಅಲ್ಲಿನ ಹೊಟೇಲೊಂದಕ್ಕೆ ಹೋಗಿದ್ದು, ಅಲ್ಲಿನ ಕ್ಯಾಶ್ ಕೌಂಟರ್‌ನಲ್ಲಿ ಸ್ಪಷ್ಟವಾಗಿ ಮಾತನಾಡುವ ವಿದೇಶಿ ವ್ಯಕ್ತಿಯನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಹೊಟೇಲ್‌ ಕ್ಯಾಶಿಯರ್‌ನಂತೆ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುವ ಜೊತೆಗೆ ಭಾರತೀಯರಂತೆ ಹಣೆಗೆ ತಿಲಕ ಹಾಗೂ ವಿಭೂತಿ ಗಂಧವನ್ನು ಕೂಡ ಹಚ್ಚಿದ್ದು, ಸಾತ್ವಿಕ ವ್ಯಕ್ತಿಯಂತೆ ಅವರು ಕಾಣುತ್ತಿದ್ದಾರೆ.

ಕನ್ನಡ ಎಂದ ಕೂಡಲೇ ಕನ್ನಡದಲ್ಲೇ  ಹೇಗಿದ್ದೀರಿ ಎಂದು ಕೇಳಿದ ವಿದೇಶಿಗ

ಹೊಟೇಲ್‌ಗೆ ಬಂದವರು ಭಾರತೀಯರು ಎಂದು ತಿಳಿದು ಅವರು ತಮಿಳು ಹಿಂದಿ ತೆಲುಗು ಯಾವ ಭಾಷೆ ಎಂದು ಕೇಳಿದ್ದಾರೆ. ಆಗ ಇವರು ಕನ್ನಡ ಎಂದ ಕೂಡಲೇ ಆ ವ್ಯಕ್ತಿ ಹೇಗಿದ್ದೀರಿ ಎಂದು ಕೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ವಿದೇಶಿಗನ ಬಾಯಲ್ಲಿ ಬಂದ ಒಂದು ಕನ್ನಡ ಮಾತಿಗೆ ಅಲ್ಲಿದ್ದ ಕನ್ನಡಿಗರು ಖುಷಿ ಖುಷಿಯಾಗಿದ್ದು, ಹೇಯ್ ಚೆನ್ನಾಗಿದ್ದೀವಿ ಎಂದು ಹೇಳುತ್ತಾರೆ. ಅಲ್ಲದೇ ಅಲ್ಲಿ ಅವರು ಭಾರತೀಯ ತಿನಿಸುಗಳನ್ನು ಕನ್ನಡ ಭಾಷೆಯಲ್ಲೇ ಸ್ಪಷ್ಟವಾಗಿ ಉಚ್ಚರಿಸುತ್ತಾ ಬಿಲ್ ಮಾಡುವುದನ್ನು ನೋಡಿ ಅಲ್ಲಿದ್ದ ಕನ್ನಡ ಟೀಮ್ ಅಚ್ಚರಿಗೊಂಡಿದೆ.

ಉಡುಪಿ ಹೊಟೇಲ್ ಸಪ್ಲೈಯರ್ ರೀತಿ ವೇಗವಾಗಿ ಕನ್ನಡದಲ್ಲೇ ಆಹಾರದ ಹೆಸರು ಹೇಳಿದರು…

ಖಾರ ದೋಸೆ, ಮಸಾಲೆ ದೋಸೆ, ಪೊಂಗಲ್ ಹೀಗೆ ಹಲವು ಆಹಾರವನ್ನು ಅಲ್ಲಿ ಆರ್ಡರ್ ಮಾಡಿದ್ದು, ಉಡುಪಿ ಹೊಟೇಲ್ ಮಾಣಿಯಂತೆ ಆ ವಿದೇಶಿಗ ಸ್ಪಷ್ಟವಾಗಿ ಇವರು ಆರ್ಡರ್ ಮಾಡಿದ ಆಹಾರಗಳ ಹೆಸರು ಹೇಳುತ್ತಾ ಹೋಗುವುದನ್ನು ನೋಡಬಹುದು. ಅಲ್ಲಿ ಕನ್ನಡಿಗರೇ ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಆತ ಮಾತ್ರ ಇವರು ಕನ್ನಡದವರು ಎಂದು ತಿಳಿದು ಸ್ಪಷ್ಟ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಅವರು ಹೇಗೆ ಕನ್ನಡ ಕಲಿತರು ಭಾರತೀಯ ಭಾಷೆ ಅವರಿಗೆ ಇಷ್ಟು ಸಲೀಸಾಗಿ ಹೇಗೆ ಬಂತು ಎಂಬ ಬಗ್ಗೆ ಈ ವೀಡಿಯೋದಲ್ಲಿ ವಿವರವಿಲ್ಲ.

ರಶ್ಮಿಕಾ ಮಂದಣ್ಣಗೆ ವೀಡಿಯೋ ತೋರಿಸಿ ಎಂದ ನೆಟ್ಟಿಗರು

ಆದರೆ ವೀಡಿಯೋ ನೋಡಿ ನೆಟ್ಟಿಗರು ಬಹಳಷ್ಟು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ವೀಡಿಯೋವನ್ನು ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಬರಲ್ಲ ಎಂದು ಹೊರರಾಜ್ಯಗಳಲ್ಲಿ ಹೇಳುತ್ತಾ ಆಗಾಗ ಕನ್ನಡಕ್ಕೆ ಅವಮಾನ ಮಾಡುವ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ತೋರಿಸಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇವರನ್ನು ನಾವು ಬ್ರಿಸ್ಬೆನ್‌ನಲ್ಲಿ ನೋಡಿದ್ದೇವೆ, ಇವರು ಪ್ರತಿಯೊಂದು ಭಾಷೆಯನ್ನು ತುಂಬಾ ಸ್ಪಷ್ಟವಾಗಿ ಮಾತನಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ jaymbee.108 ಎಂಬ ಪ್ರೊಫೈಲ್‌ ಅನ್ನು ಇವರು ಹೊಂದಿದ್ದು, ಕನ್ನಡ, ತುಳು, ತಮಿಳ್, ಹಿಂದಿ, ಮಲಯಾಳಂ, ತೆಲುಗು ಭಾಷೆಯನ್ನು ಇವರಿಗೆ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  2019ರಲ್ಲಷ್ಟೇ ಕೆಲಸಕ್ಕೆ ಸೇರಿದ್ದ ನೂಪುರ್ ಬೋರಾ ಬಂಧನ: ಮನೆಯಲ್ಲಿ ಕೋಟಿ ಕೋಟಿ ನಗದು ಪತ್ತೆ

ಇದನ್ನೂ ಓದಿ: ಉಡುಪಿ ಕೃಷ್ಣಾಷ್ಟಮಿ ಶೋಭಾಯಾತ್ರೆಯಲ್ಲಿ ರಂಜಿಸಿದ ವಿರಾಟ್ ಕೊಹ್ಲಿ, ಕ್ರಿಸ್‌ ಗೇಲ್..! 

 

 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು