ತಂದೆಯ ಸಮಾಧಿಯ ಪಕ್ಕದಲ್ಲೇ ಕ್ರೈಸ್ತ ಸಂಪ್ರದಾಯದಂತೆ ನಟ ಸಂತೋಷ್‌ ಬಾಲರಾಜ್‌ ಅಂತ್ಯಸಂಸ್ಕಾರ

Published : Aug 06, 2025, 05:44 PM ISTUpdated : Aug 06, 2025, 05:46 PM IST
Santosh Balaraj

ಸಾರಾಂಶ

ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್, 34, ಜಾಂಡೀಸ್ ನಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಕುಟುಂಬ ಈಗ ಮಗನನ್ನೂ ಕಳೆದುಕೊಂಡಿದೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಆನೇಕಲ್ (ಆ.6): ನಿರ್ಮಾಪಕ ಆನೇಕಲ್‌ ಬಾಲರಾಜ್‌ ಅವರ ಪುತ್ರ ಸಂತೋಷ್ ಬಾಲರಾಜ್‌ 34ನೇ ವರ್ಷಕ್ಕೆ ಜಾಂಡೀಸ್‌ನಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಆನೇಕಲ್‌ ಬಾಲರಾಜ್‌ರನ್ನು ಕಳೆದುಕೊಂಡಿದ್ದ ಕುಟುಂಬ ಈಗ ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ. ಬುಧವಾರ ಸಂತೋಷ್‌ ಬಾಲರಾಜ್‌ ಪಾರ್ಥಿವದ ಅಂತ್ಯಸಂಸ್ಕಾರ ಸ್ವಗ್ರಾಮದಲ್ಲಿ ನೆರವೇರಿದೆ.

ಆನೇಕಲ್ ಪಟ್ಟಣದ ಚಿಕ್ಕ ಕೆರೆ ಬಳಿ ಸಂತ ವನಚಿನ್ನಪ್ಪವರ ಪುಣ್ಯ ಕ್ಷೇತ್ರದಲ್ಲಿ ಅಂತಿಮ‌ ದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು. ಫಾದರ್ ಶಾಂತ ರಾಜು ಥಾಮಸ್ ಅವರಿಂದ ಅಂತಿಮ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಕೊನೆಗೆ ಕ್ರೈಸ್ತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ. ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವಾರು ಜನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ತಂದೆ ಸಮಾಧಿ ಬಳಿಯೇ ಸಂತೋಷ್‌ ಬಾಲರಾಜ್‌ ಪಾರ್ಥಿವ ಸಮಾಧಿ ಮಾಡಲಾಗಿದೆ.

ಮೂರು ವರ್ಷದ ಹಿಂದೆ ತಂದೆ ಸಾವು: ನಟ ದರ್ಶನ್‌ ಅಭಿನಯದ ಆರಂಭಿಕ ಸಿನಿಮಾಗಳಲ್ಲಿ ಒಂದಾಗಿದ್ದ ಕರಿಯ ಚಿತ್ರ ನಿರ್ಮಾಣ ಮಾಡಿದ್ದ ಆನೇಕಲ್‌ ಬಾಲರಾಜ್‌ ಮೂರು ವರ್ಷದ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಜೆಪಿ ನಗರದ ತಮ್ಮ ನಿವಾಸದ ಬಳಿ ಬಾಲರಾಜ್ ಅವರು ವಾಕಿಂಗ್ ಮಾಡುವಾಗ ಅಪಘಾತವಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದರು.

ತಂದೆಯ ಸಾವಿನ ಬಳಿಕ ಸಂತೋಷ್‌ ಬಾಲರಾಜ್‌ ಕೂಡ ಸಾಕಷ್ಟು ಕುಗ್ಗಿಹೋಗಿದ್ದರು. ಆದರೆ, ಮೂರು ವರ್ಷಗಳ ಅಂತರದಲ್ಲಿ ಮನೆಯ ಆಧಾರವಾಗಿದ್ದ ಗಂಡ ಹಾಗೂ ಮಗನನ್ನು ಕಳೆದುಕೊಂಡು ಸಂತೋಷ್‌ ಬಾಲರಾಜ್‌ ಅವರ ತಾಯಿ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಜಾಂಡೀಸ್‌ನಿಂದ ಸಾವು: ಸಂತೋಷ್‌ ಬಾಲರಾಜ್‌ಗೆ ಜಾಂಡೀಸ್‌ ಇಡೀ ಮೈಗೆಲ್ಲಾ ಹರಡಿತ್ತು. ಇದಕ್ಕಾಗಿ ವಾರದ ಹಿಂದೆಯಷ್ಟೇ ಅವರನ್ನು ಸಾಗರ್‌ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದರು. ಜಾಂಡೀಸ್‌ನ ಲಕ್ಷಣ ಪ್ರಮುಖ ಅಂಗಕ್ಕೆ ಹರಡಿದ ಕಾರಣ ಅವರು ಕೋಮಾಕ್ಕೆ ಜಾರಿದ್ದರು.

ಜಾಂಡೀಸ್‌ನ ಲಕ್ಷಣಗಳು: ರಕ್ತದಲ್ಲಿ ಬಿಲಿರುಬಿನ್ ಎಂಬ ಅಂಶದ ಮಟ್ಟ ಹೆಚ್ಚಾದಾಗ ಕಾಮಾಲೆ (Jaundice) ಉಂಟಾಗುತ್ತದೆ. ಕೆಂಪು ರಕ್ತ ಕಣಗಳು ಸ್ವಾಭಾವಿಕವಾಗಿ ಒಡೆದಾಗ ಬಿಲಿರುಬಿನ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ, ಯಕೃತ್ತು (liver) ಈ ಬಿಲಿರುಬಿನ್ ಅನ್ನು ಸಂಸ್ಕರಿಸಿ ಪಿತ್ತರಸದ ಮೂಲಕ ಕರುಳಿಗೆ ಕಳುಹಿಸುತ್ತದೆ, ಅಲ್ಲಿ ಅದು ಮಲದ ಮೂಲಕ ದೇಹದಿಂದ ಹೊರಹೋಗುತ್ತದೆ.

ಕಾಮಾಲೆಯ ಪ್ರಮುಖ ಲಕ್ಷಣಗಳು

ನಿಮ್ಮ ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾದರೆ, ಅದು ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಸಂಕೇತವಾಗಿದೆ. ಈ ಸ್ಥಿತಿಯು ಹಲವಾರು ರೋಗಲಕ್ಷಣಗಳಿಗೆ ಕಾರಣವಾಗಬಹುದು:

ಶರೀರ ಹಳದಿಯಾಗುವುದು: ಚರ್ಮ, ಕಣ್ಣುಗಳು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

ದೌರ್ಬಲ್ಯ ಮತ್ತು ಆಯಾಸ: ದೇಹದಲ್ಲಿ ಶಕ್ತಿ ಇಲ್ಲದಂತಾಗಿ ನಿರಂತರವಾಗಿ ಸುಸ್ತು ಮತ್ತು ಆಯಾಸವಾಗುತ್ತದೆ.

ಹೊಟ್ಟೆ ನೋವು: ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು.

ಹಸಿವಾಗದಿರುವುದು: ತಿನ್ನುವ ಆಸಕ್ತಿ ಕಡಿಮೆಯಾಗುತ್ತದೆ.

ವಾಕರಿಕೆ ಮತ್ತು ವಾಂತಿ: ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಇರಬಹುದು.

ಜ್ವರ ಮತ್ತು ಚಳಿ: ದೇಹದ ಉಷ್ಣತೆ ಹೆಚ್ಚಾಗಿ ಜ್ವರ ಬರಬಹುದು ಮತ್ತು ಚಳಿ ಅನಿಸಬಹುದು.

ಮೂತ್ರ ಮತ್ತು ಮಲದ ಬಣ್ಣದಲ್ಲಿ ಬದಲಾವಣೆ: ಮೂತ್ರ ಗಾಢ ಹಳದಿ ಬಣ್ಣಕ್ಕೆ ಮತ್ತು ಮಲ ತಿಳಿ ಬಣ್ಣಕ್ಕೆ ತಿರುಗಬಹುದು.

ವೈದ್ಯರ ಸಲಹೆ ಮುಖ್ಯ: ಈ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಾಮಾಲೆ ತಡೆಯಲು ಪ್ರಮುಖವಾಗಿದೆ.

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!